ಜಿಯೋ-ಫೇಸ್‌ಬುಕ್‌-ವಾಟ್ಸಾಪ್‌ ಮತ್ತು ಅಂಬಾನಿ – ಲಾಕ್‌ಡೌನ್‌ ಹೊತ್ತಲ್ಲೇ ಬಿರುಗಾಳಿ ಎಬ್ಬಿಸಿದ ಒಪ್ಪಂದದ ಅಸಲಿ ಕಥೆ..!

ರಿಲಯನ್ಸ್‌ ಇಂಡಸ್ಟ್ರೀಸ್‌, ರಿಯಲನ್ಸ್‌ ಜಿಯೋ, ಫೇಸ್‌ಬುಕ್‌ ಮತ್ತು ವಾಟ್ಸಾಪ್‌. ಒಂದೆಡೆ ಇಡೀ ಜಗತ್ತೇ ಲಾಕ್‌ಡೌನ್‌ನಲ್ಲಿರಬೇಕಾದ್ರೆ ನಾಲ್ಕು ದೈತ್ಯ ಸಂಸ್ಥೆಗಳು ಇಡೀ ವಿಶ್ವವೇ ಬೆರಗಾಗುವ ಐತಿಹಾಸಿಕ ಪಾಲುದಾರಿಕೆಯನ್ನು ಘೋಷಿಸಿಕೊಂಡಿವೆ. ಈ ಪಾಲುದಾರಿಕೆಯು ಕೇವಲ ಹೂಡಿಕೆಗೆ ಸೀಮಿತವಾಗಿರದೇ ಭಾರತದಲ್ಲಿ ಕಿರಾಣಿ ಅಂಗಡಿಗಳು ಮತ್ತು ಆನ್‌ಲೈ‌ನ್ ವ್ಯವಹಾರದ ಸ್ವರೂಪವನ್ನೇ ಬದಲಾಯಿಸಲಿದೆ. ಆಮೆಜಾನ್‌, ಫ್ಲಿಪ್‌ಕಾರ್ಟ್‌, ಬಿಗ್‌ಬಾಸ್ಕೆಟ್‌ನಂತಹ ದೈತ್ಯ ಆನ್‌ಲೈನ್‌ ಶಾಪಿಂಗ್‌ ಕಂಪನಿಗಳಿಗೆ ಮಾತ್ರವಲ್ಲದೇ ಸೂಪರ್‌ ಮಾರ್ಕೆಟ್‌ಗಳಿಗೂ ದಿಗಿಲು ಹುಟ್ಟಿಸುವ ಒಪ್ಪಂದ ಇದು. ಭಾರತದಲ್ಲಿ ಶೆಟ್ರ ಅಂಗಡಿಯ (ಜನಸಾಮಾನ್ಯ ಭಾಷೆಯಲ್ಲಿ) ಲೆಕ್ಕಾಚಾರವನ್ನೇ ಬದಲಿಸುವ ಹೂಡಿಕೆ ಇದು.

ಇವತ್ತು ಫೇಸ್‌ಬುಕ್‌ ರಿಲಯನ್ಸ್‌ ಇಂಡಸ್ಟ್ರೀಸ್‌ ಸ್ವಾಮ್ಯದ ಅಂದರೆ ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋದಲ್ಲಿ ಬರೋಬ್ಬರೀ 43,474 ಕೋಟಿ ರೂಪಾಯಿ ಮೊತ್ತದ ಬಂಡವಾಳ ಹೂಡಿಕೆಯ ಘೋಷಣೆ ಮಾಡಿದೆ. ಫೇಸ್‌ಬುಕ್‌ ಜಿಯೋದಲ್ಲಿ ಶೇಕಡಾ 9.9ರಷ್ಟು ಷೇರನ್ನ ಖರೀದಿಸಿದೆ. ಇದು ಭಾರತದಲ್ಲಿ ಮಾಡಲಾದ ಅತೀ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯೂ ಹೌದು.

ನಾವು ಇವತ್ತು  ಜಿಯೋ ಪ್ಲ್ಯಾಟ್‌ಫಾರ್ಮ್ಸ್ ನಲ್ಲಿ 5.7 ಬಿಲಿಯನ್‌ ಅಮೆರಿಕನ್‌ ಡಾಲರ್ ಅಥವಾ‌ ರೂಪಾಯಿ ಲೆಕ್ಕದಲ್ಲಿ 43,474 ಕೋಟಿ ರೂಪಾಯಿ ಮೊತ್ತದ  ಬಂಡವಾಳ ಹೂಡಿಕೆಯನ್ನು ಘೋಷಿಸುತ್ತಿದ್ದು ಆ ಮೂಲಕ ಕಂಪನಿಯಲ್ಲಿ ಅತೀ ದೊಡ್ಡ ಮೈನಾರಿಟಿ ಷೇರುದಾರರಾಗಿದ್ದೇವೆ ಎಂದು ಫೇಸ್‌ಬುಕ್‌ ಹೇಳಿದೆ.

ಇಷ್ಟೇ ಅಲ್ಲದೇ ಈ ಹೂಡಿಕೆಯ ಜೊತೆಗೆ ಜಿಯೋ ಪ್ಲ್ಯಾಟ್‌ಫಾರ್ಮ್ಸ್‌ ಮತ್ತು ರಿಲಯನ್ಸ್‌ ರೀಟೆಲ್‌ ಮತ್ತು ವಾಟ್ಸಾಪ್‌ ಕೂಡಾ ಒಪ್ಪಂದ ಮಾಡಿಕೊಂಡಿವೆ. ರಿಲಯನ್ಸ್‌ ರಿಟೈಲ್ಸ್‌ನ ನ್ಯೂ ಕಾರ್ಮಸ್‌ ಆಗಿರುವ ಜಿಯೋ ಮಾರ್ಟ್‌ನ್ನು ವಾಟ್ಸಾಪ್‌ ಬಳಸಿಕೊಂಡು ವೃದ್ಧಿಸುವ ಉದ್ದೇಶ ಹೊಂದಲಾಗಿದೆ. ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂ ಕೂಡಾ ಫೇಸ್‌ಬುಕ್‌ ಒಡೆತನದ ಸಾಮಾಜಿಕ ಜಾಲತಾಣಗಳಾಗಿವೆ.

ಜಿಯೋ ಮಾರ್ಟ್‌ ಅಂಬಾನಿಯ ಕೈಗೆತ್ತಿಕೊಂಡಿರುವ ಹೊಸ ಕಿರಾಣಿ ವ್ಯವಹಾರ. ಅಂದರೆ ಜಿಯೋ ಮಾರ್ಟ್‌ ಮೂಲಕ ಸ್ಥಳೀಯ ಕಿರಾಣಿ ಅಂಗಡಿಗಳ ಜೊತೆಗೆ ಡೀಲರ್‌ಶಿಪ್‌ ವ್ಯವಹಾರ ಮಾಡಿಕೊಂಡು ನೇರವಾಗಿ ಗ್ರಾಹಕರಿಗೆ ಸಾಮಗ್ರಿಗಳು ಒಳಗೊಂಡಂತೆ ಸರಕು ಮತ್ತು ಸೇವೆಗಳನ್ನು ಒದಗಿಸಲಿದೆ. ವಾಟ್ಸಾಪ್‌ ಮೂಲಕ ಗ್ರಾಹಕರನ್ನು ಸೆಳೆಯುವುದರ ಜೊತೆಗೆ ವಾಟ್ಸಾಪ್‌ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವುದು ಜಿಯೋ ಮಾರ್ಟ್‌ನ ಉದ್ದೇಶ.

ಇವತ್ತಿನ ಫೇಸ್‌ಬುಕ್‌ ಹೂಡಿಕೆಯೊಂದಿಗೆ ಜಿಯೋದ ಮೌಲ್ಯ ಬರೋಬ್ಬರೀ 4.6 ದಶಲಕ್ಷ ಕೋಟಿ ರೂಪಾಯಿ ಆಗಲಿದೆ. 2016ರಲ್ಲಿ ಆರಂಭವಾದ ರಿಲಯನ್ಸ್‌ ಜಿಯೋ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ನೆಟ್‌ವರ್ಕ್‌. ಸದ್ಯ ಜಿಯೋ 38.8 ಕೋಟಿ ಗ್ರಾಹಕರನ್ನು ಹೊಂದಿದೆ.

ಭಾರತದಲ್ಲಿ ಅತೀ ದೊಡ್ಡ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಕಮ್ಯೂನಿಟಿ ಮತ್ತು ಹಲವಾರು ಪ್ರತಿಭಾನ್ವಿತ ಉದ್ಯಮಿಗಳಿದ್ದಾರೆ. ಈ ದೇಶದ ಪ್ರಮುಖ ಡಿಜಿಟಲ್‌ ಪರಿವರ್ತನೆಯ ಮಧ್ಯದಲ್ಲಿದ್ದು ಮತ್ತು ಜಿಯೋದಂತ ಸಂಸ್ಥೆ ಲಕ್ಷಾನುಗಟ್ಟಲೇ ಭಾರತೀಯರು ಮತ್ತು ಸಣ್ಣ ವ್ಯವಹಾರಗಳನ್ನು ಆನ್‌ಲೈನ್‌ಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಫೇಸ್‌ಬುಕ್‌ ಸಿಇಒ ಮ್ಯಾರ್ಕ್‌ ಜ್ಯುಕ್‌ಬರ್ಗ್‌ ಹೇಳಿದ್ದಾರೆ.

ಈ ಒಪ್ಪಂದದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾದ ಕನಸು ನನಸಾಗಲಿದೆ ಎಂದು ರಿಲಯನ್ಸ್‌ ಮಾಲೀಕ ಮುಖೇಶ್‌ ಅಂಬಾನಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here