ಜಮ್ಮು ಕಾಶ್ಮೀರದಲ್ಲಿ ಪಾಯಿಂಟ್‌ ಬ್ಲ್ಯಾಂಕ್‌ ರೇಂಜ್‌ನಲ್ಲಿ ಎನ್‌ಕೌಂಟರ್‌ – ಐವರು ಉಗ್ರರನ್ನು ಕೊಂದು ಐವರು ವಿಶೇಷ ಪ್ಯಾರಾ ಕಮಾಂಡೋಸ್‌ ಹುತಾತ್ಮ

ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಕಾಳಗದಲ್ಲಿ ವಿಶೇಷ ಪ್ಯಾರಾ ಕಮಾಂಡೋ ಯೋಧರು ಐವರು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಈ ರಣಭೀಕರ ನೇರ ಮುಖಾಮುಖಿ ಎನ್‌ಕೌಂಟರ್‌ನಲ್ಲಿ ಐವರು ಪ್ಯಾರಾ ಕಮಾಂಡೋ ಸೈನಿಕರೂ ಹುತಾತ್ಮರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದಿರುವ ಅತ್ಯಂತ ಭೀಕರ ಎನ್‌ಕೌಂಟರ್‌ ಇದಾಗಿದೆ.

ಏಪ್ರಿಲ್‌ 1ರಂದು ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ಓಡಾಡಿದ್ದರ ಬಗ್ಗೆ ಹೆಜ್ಜೆಗುರುತುಗಳು ಪತ್ತೆ ಆಗಿತ್ತು. ಇದಾದ ಬಳಿಕ ವಿಶೇಷ ಸೇನಾ ಪಡೆಯನ್ನು ನಿಯೋಜಿಸಲಾಗಿತ್ತು. ಉಗ್ರರ ನುಸುಳುವಿಕೆ ತಡೆಗಾಗಿ ಹಾಕಲಾಗಿದ್ದ ತಂತಿ ಬೇಲಿ ವಿಪರೀತ ಹಿಮಪಾತದಿಂದಾಗಿ ಮುಚ್ಚಿಹೋಗಿತ್ತು. ಇದರ ದುರ್ಲಾಭ ಪಡೆದು ಉಗ್ರರು ಭಾರತದೊಳಗೆ ನುಸುಳಲು ಯತ್ನಿಸಿದ್ದರು.

ಏಪ್ರಿಲ್‌ 1ರಂದು ಮಧ್ಯಾಹ್ನ 1 ಗಂಟೆಗೆ ಉಗ್ರರಿಗಾಗಿ ಶೋಧ ನಡೆಸಿದ್ದ ಸೇನೆ ಅವರ ಬಳಿಯಿದ್ದ ಐದು ಬ್ಯಾಗ್‌ಗಳನ್ನು ವಶಪಡಿಸಿಕೊಂಡಿತ್ತು. ಆದರೆ ಉಗ್ರರ ಸಂಪರ್ಕ ತಪ್ಪಿಹೋಗಿತ್ತು. ಆದರೆ ಏಪ್ರಿಲ್‌ 3ರಂದು ಸಂಜೆ 4.30ಕ್ಕೆ ಮತ್ತು ಏಪ್ರಿಲ್‌ 4ರಂದು 6.30ಕ್ಕೆ ಸೈನಿಕರಿಗೆ ಮತ್ತೆ ಉಗ್ರರ ಸುಳಿವು ಸಿಕ್ಕಿತ್ತು.

ಆದರೆ ವಿಪರೀತ ಹಿಮಪಾತದಿಂದಾಗಿ ಉಗ್ರರನ್ನು ಸದೆಬಡಿಯುವ ಸಲುವಾಗಿ ವಿಶೇಷವಾಗಿ ತರಬೇತಿ ಪಡೆದಿರುವ ಪ್ಯಾರಾ ಸ್ಪೆಷಲ್‌ ಫೋರ್ಸ್‌ ಯೋಧರನ್ನು ಸೇನೆ ಕರೆಸಿಕೊಂಡಿತ್ತು. ಮಾನವ ರಹಿತ ವೈಮಾನಿಕ ಸರ್ವೇಕ್ಷಣಾ ವಿಮಾನ ಬಳಸಿ ಪಡೆದ ದೃಶ್ಯಾವಳಿಗಳನ್ನು ಆಧರಿಸಿ ವಿಶೇಷ ಪ್ಯಾರಾ ಕಮಾಂಡೋಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಬೆಟಾಲಿಯನ್‌ ಮುಖ್ಯ ಕಚೇರಿ ಹತ್ತಿರ ಇಳಿಸಲಾಯಿತು.

ಏಪ್ರಿಲ್‌ 5ರಂದು ಬೆಳಕು ಕಾಣಿಸಿಕೊಂಡ ಬಳಿಕ ಪ್ಯಾರಾ ಕಮಾಂಡೋಗಳ ಒಂದು ಸ್ಕ್ಯಾಡ್‌ ಉಗ್ರರ ಹೆಜ್ಜೆಯ ಜಾಡು ಹಿಡಿದು ಸಾಗಿತ್ತು. ಆದರೆ ವಿಪರೀತ ಹಿಮದ ಕಾರಣದಿಂದ ಝರಿಯೊಂದಕ್ಕೆ ಬಿದ್ದರು. ಆ ಝರಿಯ ಪಕ್ಕದಲ್ಲೇ ಉಗ್ರರೂ ಕುಳಿತಿದ್ದರು. ಅಗ ಅಲ್ಲಿ ಉಗ್ರರು ಮತ್ತು ಕಮಾಂಡೋಗಳು ಎದುರುಬದುರಾದರು. ವಿಶೇಷ ಪ್ಯಾರಾ ಕಮಾಂಡೋ ಯೋಧರು ಮತ್ತು ಭಯೋತ್ಪಾದಕರ ನಡುವೆ ಪಾಯಿಂಟ್‌ ಬ್ಲ್ಯಾಂಕ್‌ ರೇಂಜ್‌ನಲ್ಲೇ ನಡೆದ ನೇರ ಮುಖಾಮುಖಿ ಗುಂಡಿನ ಕಾಳಗದಲ್ಲಿ ಯೋಧರು ಐವರೂ ಉಗ್ರರನ್ನು ಬಲಿ ಪಡೆದರು. ಆದರೆ ದುರಾದೃಷ್ಟವಶಾತ್‌ ಸ್ಕ್ಚ್ಯಾಡ್‌ನಲ್ಲಿದ್ದ ಐವರೂ ವಿಶೇಷ ಕಮಾಂಡೋ ಯೋಧರು ಹುತಾತ್ಮರಾದರು ಎಂದು ಸೇನೆಯ ಮೂಲಗಳು ತಿಳಿಸಿದ್ದಾಗಿ ಇಂಗ್ಲೀಷ್‌ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ.

ಹುತಾತ್ಮ ಕಮಾಂಡೋಗಳ ಪಾರ್ಥಿಕ ಶರೀರ ಮತ್ತು ಭಯೋತ್ಪಾದಕರ ಹೆಣಗಳು ಎರಡರಿಂದ ಮೂರು ಮೀಟರ್‌ ದೂರದಲ್ಲಿ ಬಿದ್ದಿದ್ದವು.

ಆಪರೇಷನ್‌ ರಂಡೋರಿ ಬೆಹಾಕ್‌ ಹೆಸರಲ್ಲಿ ನಡೆದಿದ್ದ ಈ ವಿಶೇಷ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವಿಶೇಷ ಪ್ಯಾರಾ ಕಮಾಂಡೋಗಳ ಹೆಸರು ಹೀಗಿದೆ:

1. ಸುಬೇದಾರ್‌ ಸಂಜೀವ್‌ ಕುಮಾರ್‌ – ಹಿಮಾಚಲಪ್ರದೇಶ

2. ಹವಾಲ್ದಾರ್‌ ದೇವೇಂದ್ರ ಸಿಂಗ್‌ – ಉತ್ತರಾಖಂಡ

3. ಸಿಪಾಯಿ ಬಾಲಕೃಷ್ಣನ್‌ – ಹಿಮಾಚಲಪ್ರದೇಶ

4. ಸಿಪಾಯಿ ಅಮಿತ್‌ ಕುಮಾರ್‌ – ಉತ್ತರಾಖಂಡ

5. ಸಿಪಾಯಿ ಛತ್ರಪಾಲ್‌ ಸಿಂಗ್‌ – ರಾಜಸ್ಥಾನ

LEAVE A REPLY

Please enter your comment!
Please enter your name here