ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗ್ತಾರಾ ಸಿಎಂ ಯಡಿಯೂರಪ್ಪ?

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ.. ಮುಖ್ಯಮಂತ್ರಿಯಾಗಿ ಆರು ತಿಂಗಳು ಕಳೆದಿಲ್ಲ. ಅವರ ಅಧಿಕಾರಾವಧಿ ಇನ್ನೂ ಮೂರೂವರೆ ವರ್ಷ ಇದೆ. ಮೊನ್ನೆ ಹುಬ್ಬಳ್ಳಿಯಲ್ಲಿ ಸಿಎಎ ಬೆಂಬಲಿಸಿ ಬಿಜೆಪಿ ಆಯೋಜಿಸಿದ್ದ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿಗಳು, ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದು ನಮ್ಮ ಗುರಿ ಎಂದಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಅಧಿಕಾರವ ವಹಿಸಿಕೊಂಡ ದಿನ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿ 150 ಸೀಟ್ ಗೆಲ್ಲುವ ಗುರಿ ಹಾಕಿಕೊಳ್ಳಲಾಗುತ್ತದೆ ಎಂದಿದ್ದರು. ನಳಿನ್ ಕುಮಾರ್ ಕಟೀಲ್ ಮಾತುಗಳಲ್ಲಿ ಎಷ್ಟು ಸತ್ಯ ಇದೆಯೋ ಗೊತ್ತಿಲ್ಲ.

ಆದರೆ, ಆರ್‍ಎಸ್‍ಎಸ್ ಮಾತ್ರ ಯಡಿಯೂರಪ್ಪರನ್ನು ಆದಷ್ಟು ಬೇಗ ಚುನಾವಣಾ ರಾಜಕೀಯದಿಂದ ನಿವೃತ್ತಿಗೊಳಿಸಿ, ರಾಜ್ಯದ ಎಲ್‍ಕೆ ಅಡ್ವಾಣಿಯನ್ನಾಗಿ ಮಾಡಲು ಹೊರಟಂತಿದೆ. ಇದಕ್ಕೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಟರು ನೀಡಿದ ಹೇಳಿಕೆಯೇ ಸಾಕ್ಷಿ.

ದೀನ ದಲಿತರ ಉದ್ಧಾರಕರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರೂವರೆ ವರ್ಷಗಳ ನಂತರ ಚುನಾವಣೆಗೆ ನಿಲ್ಲಲ್ಲ. ಚುನಾವಣಾ ರಾಜಕೀಯದಿಂದ ಹಿಂದೆ ಸರಿದು, ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಇರುತ್ತಾರೆ. ಪಕ್ಷದ ಬೆಳವಣಿಗೆಗೆ ಯಡಿಯೂರಪ್ಪ ಸಾಕಷ್ಟು ಶ್ರಮಿಸಿದ್ದು, ಅವರು ಆಕಸ್ಮಿಕ ಮುಖ್ಯಮಂತ್ರಿ ಅಲ್ಲ. ಅವಕಾಶವಾದಿ ಮುಖ್ಯಮಂತ್ರಿ ಅಲ್ಲ ಎಂದು ಹೊಗಳುತ್ತಲೇ ಅವರ ರಾಜಕೀಯ ನಿವೃತ್ತಿಯ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ಟರು ಸುಳಿವು ನೀಡಿದ್ದಾರೆ.

ಚುನಾವಣೆಗೆ ನಿಲ್ಲಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ಮಾಡಿದ್ದರೆ ಅವರೇ ಹೇಳುತ್ತಿದ್ದರು. ಆರ್‍ಎಸ್‍ಎಸ್ ನಾಯಕರ ಬಾಯಿಂದ ಯಡಿಯೂರಪ್ಪ ತೀರ್ಮಾನ ಹೊರಬೀಳುತ್ತಿರಲಿಲ್ಲ. ಇದು ಯಡಿಯೂರಪ್ಪರನ್ನು ಹಿನ್ನೆಲೆಗೆ ಸರಿಸುವ ಪ್ರಯತ್ನ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ಟರ ಮಾತಿಗೆ ಯಡಿಯೂರಪ್ಪ ಆಪ್ತ ಬಳಗ ಅಸಮಧಾನ ವ್ಯಕ್ತಪಡಿಸಲು ಶುರು ಮಾಡಿದೆ.

LEAVE A REPLY

Please enter your comment!
Please enter your name here