ಚಿತ್ರದುರ್ಗದ ರೈತ ಮಹಿಳೆಯ ಸಂಕಷ್ಟದ ವಿಡಿಯೋ.. ಮುಖ್ಯಮಂತ್ರಿಗಳೇ ಖುದ್ಧಾಗಿ ಕರೆ ಮಾಡಿದ್ರು..

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ಲಾಕ್‍ಡೌನ್ ವೇಳೆ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಒಂದು ವಿಡಿಯೋ ಮೂಲಕ ಕೇವಲ ಒಂದು ದಿನದಲ್ಲಿ ಮುಖ್ಯಮಂತ್ರಿಯನ್ನು ತಲುಪಿದ್ದಾರೆ. ಖುದ್ದು ಮುಖ್ಯಮಂತ್ರಿಗಳೇ ರೈತ ಮಹಿಳೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಸಮಸ್ಯೆ ಬಗೆ ಹರಿಸುವ ಭರವಸೆಯೂ ಸಿಕ್ಕಿದೆ.

ಅಷ್ಟಕ್ಕೂ ರೈತ ಮಹಿಳೆಯ ವಿಡಿಯೋದಲ್ಲಿ ಹೇಳಿದ್ದೇನು..?
ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ, ರೈತರು ಲಾಕ್‍ಡೌನ್‍ನಲ್ಲಿ ಇಲ್ಲ. ದೇಶವನ್ನು ಆಳುವ ಪ್ರಧಾನಮಂತ್ರಿಯಿಂದ ಹಿಡಿದು, ದೇಶ ಕಾಯುವ ಯೋಧರವರೆಗೂ, ಜೀವ ಉಳಿಸುವ ವೈದ್ಯರವರೆಗೂ ಎಲ್ಲರೂ ರೈತರು ಬೆಳೆದ ಅನ್ನವನ್ನು ತಿನ್ನಬೇಕು ಅಲ್ವಾ..? ಹೀಗಾಗಿಯೇ ರೈತ ಕೆಲಸ ಮಾಡುತ್ತಿದ್ದಾನೆ. ರೈತ ಬೆಳೆಯೋದನ್ನು ನಿಲ್ಲಿಸಿಲ್ಲ.

ನಮ್ಮೂರು ಕಾಟನಾಯಕನಳ್ಳಿ.. ಇದೇ ಹಳ್ಳಿಯಲ್ಲಿ ಸುಮಾರು ಐನೂರರಿಂದ ಆರುನೂರು ರೈತರು ಈರುಳ್ಳಿ ಬೆಳೆದಿದ್ದಾರೆ. ಆದ್ರೆ, ಒಂದು ಪಾಕೆಟ್ ಈರುಳ್ಳಿಯನ್ನು 250 ರೂ.ಗೆ ಕೇಳ್ತಿದ್ದಾರೆ. ಯಶವಂತಪುರ ಮಾರ್ಕೆಟ್‍ಗೆ ಹಾಕಿಕೊಂಡು ಹೋದರೆ ಅಲ್ಲಿ ಸಹ 300-400 ರೂ.ಗೆ ಕೇಳ್ತಿದ್ದಾರೆ. ಯಾಕೆ ಇಷ್ಟು ಅಂತಾ ಕೇಳಿದ್ರೆ ಆಮದು-ರಫ್ತು ಇಲ್ಲ ಅನ್ನೋ ಮಾತನ್ನು ಹೇಳ್ತಾರೆ.

ಆದರೆ, ಈರುಳ್ಳಿ ತುಂಬಲು ಬಳಸುವ ಚೀಲದ ದರ 45 ರೂ. ಒಂದು ಚೀಲ ಈರುಳ್ಳಿ ಕೊಯ್ಯಲು 35 ರೂ. ನೀಡಬೇಕು. ಒಂದು ಕೇಜಿ ಈರುಳ್ಳಿ ಬೀಜ 1400 ರೂ. ಅದಕ್ಕೆ ಗೊಬ್ಬರ 5ರಿಂದ 6 ಸಾವಿರ ರೂಪಾಯಿ. ಮೂರು ಬಾರಿ ಕಳೆ ತೆಗೆಸಬೇಕು.. ಒಂದು ಹೆಣ್ಣಾಳಿಗೆ 200 ರೂ. ಕೊಡ್ಬೇಕು. ಈರುಳ್ಳಿ ಕೀಳುವಾಗ 200 ರೂ. ಕೂಲಿ ಕೊಡ್ಬೇಕು. ಅದನ್ನು ಹೊತ್ತು ತಂದು ಇಲ್ಲಿಗೆ ಹಾಕಲು ಕೂಲಿ. ಪ್ರತಿಯೊಂದಕ್ಕೂ ಕೂಲಿ ಕೊಡ್ಬೇಕು. ನಮಗೆ ಒಂದು ಚೀಲ ಈರುಳ್ಳಿ ಬೆಳೆಯಲು 300 ರಿಂದ 400 ರೂ. ಖರ್ಚು ಬರುತ್ತಿದೆ. ಆದರೆ, 250-300 ರೂ.ಗೆ ಕೇಳ್ತಿದ್ದಾರೆ. ಸರಿ ರೇಟ್ ಸಿಗ್ಬೋದು ಅಂತಾ ಇನ್ನೂ ಸ್ವಲ್ಪ ದಿನ ಇಟ್ಕೋತಿವಿ ಅಂದ್ರೆ, ಬೇಸಿಗೆ ಕಾಲ.. ಈರುಳ್ಳಿಯೆಲ್ಲಾ ಬೆಂದು ಕೆಟ್ಟು ಹೋಗ್ತಿದೆ. ಸ್ಟೋರ್ ಮಾಡೋಕು ಆಗೋದಿಲ್ಲ. 10ರಿಂದ 15 ಚೀಲ ಕೊಳೆತುಹೋಗಿಬಿಡುತ್ತೆ. ಈಗಲೇ ಮಾರಿದ್ರೆ 300 ರೂ. ತಲೆ ಮೇಲೆ ಬರುತ್ತೆ. ಇಂಥಾ ಪರಿಸ್ಥಿತಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳದೇ ಇನ್ನೇನು ಮಾಡ್ತಾನೆ. ಒಂದು ಬಾರಿ ನಷ್ಟ ಬಂದ್ರೆ ಬಿಡು ಅನ್ನಬಹುದು.. ಪ್ರತಿ ಬಾರಿ ನಷ್ಟ ಆದ್ರೆ ಇನ್ನೇನು ಮಾಡಲು ಸಾಧ್ಯ.

ಸರ್ಕಾರ ಏನೋ ಭರವಸೆ ನೀಡ್ತಿದೆ. ಸಹಕಾರವನ್ನು ನೀಡ್ತಿದೆ. ಆದರೆ, ಇಲ್ಲಿ ಯಾರದ್ದು ತಪ್ಪು. ರೈತ ಬೆಳೆಯೋದು ನಿಲ್ಲಿಸಿಲ್ಲ. ಜನ ತಿನ್ನೋದು ನಿಲ್ಲಿಸಿಲ್ಲ. ಲಾಕ್‍ಡೌನ್ ಆಗಿದೆ ಅಂತಾ ಯಾರು ಉಪವಾಸ ಇಲ್ಲ ತಾನೆ. ಕೊಂಡ್ಕೊಳ್ಳೋರು ಇದಾರೆ. ಬೆಳೆಯೋರು ಇದಾರೆ. ಹಾಗಿದ್ರೆ ಇಲ್ಲಿ ಎಲ್ಲಿ ತಪ್ಪಾಗುತ್ತಿದೆ. ರೈತರು ಬೆಳೆದಿರುವ ಉತ್ಪನ್ನಗಳಿಗೆ ಸರಿಯಾದ ಬೆಲೆ ಕೊಡಿಸುವ ಜವಾಬ್ದಾರಿ ಸರ್ಕಾರದ್ದು.. ಮುಖ್ಯಮಂತ್ರಿಗಳೇ ನೀವೇನು ಮಾಡ್ತಿರೋ ಗೊತ್ತಿಲ್ಲ. ಚಿತ್ರದುರ್ಗದಲ್ಲಿ ಸಾಕಷ್ಟು ರೈತರು ಈರುಳ್ಳಿ ಬೆಳೆದಿದ್ದಾರೆ. ಅದನ್ನು ಸ್ಟೋರ್ ಮಾಡಲು ಆಗಲ್ಲ. ಆದಷ್ಟು ನಮ್ಮ ರೈತರ ಕಷ್ಟವನ್ನು ಆಲಿಸಿ.. ಪರಿಹಾರ ನಿಡಿ.. ನೀವು ದುಡ್ಡು ಕೊಡಿ ಅಂತಾ ಹೇಳಲ್ಲ. ರೈತರ ಬೆಳೆಗಳನ್ನು ಸರಿಯಾದ ಬೆಲೆಗೆ ನೀವೆ ತಗೊಳಿ. ಅದನ್ನು ಜನರಿಗೆ ಹೇಗೆ ಕೊಡ್ತೀರೋ ಗೊತ್ತಿಲ್ಲ. ನಮಗೆ ಉಪಕಾರ ಮಾಡಿ. ಅಟ್‍ಲೀಸ್ಟ್ ನಾವು ಹಾಕಿರುವ ಬಂಡವಾಳ ವಾಪಸ್ ಬಂದ್ರೆ ಸಾಲ ತೀರಿಸ್ಕೋತಿವಿ..

ಹೀಗಂತ ಫೇಸ್‍ಬುಕ್‍ನಲ್ಲಿ ವಿಡಿಯೋ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದ್ರು ರೈತ ಮಹಿಳೆ.

ಕೇವಲ 24 ಗಂಟೆಯಲ್ಲಿ ಮುಖ್ಯಮಂತ್ರಿ ಗಮನ ಸೆಳೆದ ವಿಡಿಯೋ
ಖುದ್ದಾಗಿ ಕರೆ ಮಾಡಿ ರೈತ ಮಹಿಳೆಗೆ ಅಭಯ ನೀಡಿದ ಸಿಎಂ

ರೈತ ಮಹಿಳೆಯ ವಿಡಿಯೋ ಪೋಸ್ಟ್ ಮಾಡಿದ ತಕ್ಷಣ ಫೇಸ್‍ಬುಕ್‍ನಲ್ಲಿ ವಿಶೇಷ ಸ್ಪಂದನೆ ಸಿಕ್ಕಿತು. ಸರಿಸುಮಾರು 10 ಸಾವಿರ ಮಂದಿ ವೀಕ್ಷಿಸಿ, ವಿಡಿಯೋ ಶೇರ್ ಮಾಡುತ್ತಾ ಮುಖ್ಯಮಂತ್ರಿಯವರೆಗೂ ತಲುಪಿಸಿದರು. ವಿಡಿಯೋ ವೀಕ್ಷಿಸಿ ಆಕೆಯ ಜಾಣತನ ಮೆಚ್ಚಿದ ಮುಖ್ಯಮಂತ್ರಿ ಯಡಿಯೂರಪ್ಪ, ಆಕೆಗೆ ಕರೆ ಮಾಡಿ ನ್ಯಾಯ ದೊರಕಿಸುವ ಆಭಯ ನೀಡಿದರು. ಅಲ್ಲದೇ, ಚಿತ್ರದುರ್ಗ ಜಿಲ್ಲಾಧಿಕಾರಿಗೆ ಕರೆ ಮಾಡಿದ ಮುಖ್ಯಮಂತ್ರಿ, ಕಾಟನಾಯಕನಹಳ್ಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ರೈತರು ಬೆಳೆದ ಈರುಳ್ಳಿ ಖರಿದಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಷ್ಟು ಪವರ್‍ಫುಲ್ ಅನ್ನೋದು ಇದರಿಂದಲೇ ಗೊತ್ತಾಗುತ್ತಿದೆ. ಆದಷ್ಟು ಬೇಗ ರೈತರು ಬೆಳೆದ ಈರುಳ್ಳಿಗೆ ಸರಿಯಾದ ಬೆಲೆ ಸಿಗಲಿ

LEAVE A REPLY

Please enter your comment!
Please enter your name here