ಗ್ರಾಮ ಪಂಚಾಯತ್‌ಗಳಿಗೆ ನಡೆಯಬೇಕಿದ್ದ ಚುನಾವಣೆ ಮುಂದೂಡಿ ಆದೇಶ

ಗ್ರಾಮ ಪಂಚಾಯತಿಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ ರಾಜ್ಯ ಚುನಾವಣಾ ಆಯೋಗ ಅದೇಶ ಹೊರಡಿಸಿದೆ. ರಾಜ್ಯದ 6,025 ಗ್ರಾಮ ಪಂಚಾಯತ್‌ಗಳ ಪೈಕಿ 5000 ಗ್ರಾಮ ಪಂಚಾಯತ್‌ಗಳ ಅಧಿಕಾರವಧಿ ಇದೇ ಆಗಸ್ಟ್‌ನಲ್ಲಿ ಕೊನೆ ಆಗಲಿದೆ.

ಕೊರೋನಾ ಬಿಕ್ಕಟ್ಟು ಹೊತ್ತಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ನಡೆಸುವ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.

ಕೊರೋನಾ ಕಾರಣದಿಂದಾಗಿ  ಮತದಾರರ ಪಟ್ಟಿ ತಯಾರಿ ಮತ್ತು ಚುನಾವಣಾ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಗ್ರಾಮ ಪಂಚಾಯತ್‌ಗಳಲ್ಲಿ ಮೀಸಲಾತಿ ಅವಧಿಯನ್ನು ಹತ್ತು ವರ್ಷದ ಬದಲು ಐದು ವರ್ಷಕ್ಕೆ ಇಳಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಆವರ್ತನಾ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ.

ಕೊರೋನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ತೊಡಗಿಸಿಕೊಂಡಿರುವುದರಿಂದ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ, ಸಾರಿಗೆ ವ್ಯವಸ್ಥೆ ಕೊರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಸ್ಯೆಗಳು ಉಂಟಾಗಬಹುದಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿರುವ ವರದಿಯನ್ನ ಆಧರಿಸಿ ಚುನಾವಣೆ ಮುಂದೂಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ.

LEAVE A REPLY

Please enter your comment!
Please enter your name here