ಗೋ ಮೂತ್ರ ಕುಡಿದು, ಸೆಗಣಿ ತಿಂದ್ರೆ ಲವ್ ಮ್ಯಾರೇಜ್‍ಗೆ ಓಕೆ

ಉತ್ತರ ಪ್ರದೇಶದಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಲವ್ ಮ್ಯಾರೇಜ್ ಮಾಡಿಕೊಂಡ ಜೋಡಿಯೊಂದಕ್ಕೆ ಗೋಮೂತ್ರ ಕುಡಿದು ಸೆಗಣಿ ತಿನ್ನುವ ಶಿಕ್ಷೆಯನ್ನು ಗ್ರಾಮದ ಮುಖ್ಯಸ್ಥರು ವಿಧಿಸಿದ್ದಾರೆ. ಆದರೆ, ಇದನ್ನು ವಿರೋಧಿಸಿದ ವರ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಝಾನ್ಸಿ ಜಿಲ್ಲೆ ಪ್ರೇಮ್‍ನಗರದ ಭೂಪೇಶ್ ಯಾದವ್, ಅಷ್ಟಾ ಜೈನ್ ಲವ್ ಮ್ಯಾರೇಜ್ ಮಾಡಿಕೊಂಡು ತಮ್ಮ ಊರಿಗೆ ವಾಪಸ್ ಆಗಿದ್ದರು. ಆದರೆ, ಇವರ ಪ್ರೇಮ ವಿವಾಹಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸಂಪ್ರದಾಯ ಉಲ್ಲಂಘಿಸಿದ್ದಾರೆ ಎಂದು ನೂತನ ವಧುವರರ ಕುಟುಂಬಗಳನ್ನು ಗ್ರಾಮದಿಂದ ಬಹಿಷ್ಕರಿಸಿದ್ದಾರೆ. ನಾನಾ ಕಿರುಕುಳ ಕೊಟ್ಟಿದ್ದಾರೆ. ಇದನ್ನು ವಿರೋಧಿಸಿದ ಕಾರಣಕ್ಕೆ ಕೊನೆಗೆ ಪಂಚಾಯಿತಿ ನಡೆದಿದೆ.

ಭೂಪೇಶ್ ಪ್ರೇಮ ವಿವಾಹವನ್ನು ಅಂಗೀಕರಿಸಬೇಕೆಂದರೆ, ನಿಮ್ಮ ಕುಟುಂಬಗಳಿಗೆ ವಿಧಿಸಲಾದ ಬಹಿಷ್ಕಾರವನ್ನು ತೆಗೆದುಹಾಕಬೇಕಾದರೆ, ವಧು ಗೋಮೂತ್ರ ಕುಡಿದು, ಹಸುವಿನ ಸೆಗಣಿ ತಿನ್ನಬೇಕು ಎಂದು ಪಂಚಾಯಿತಿ ತೀರ್ಪು ನೀಡಿತು. ಈ ತೀರ್ಪನ್ನು ಕುಟುಂಬ ಸದಸ್ಯರು ವಿರೋಧಿಸಿ, ತೀರ್ಪು ಬದಲಿಸಬೇಕೆಂದು ಪಟ್ಟು ಹಿಡಿದಿದರೂ, ಗ್ರಾಮದ ಮುಖ್ಯಸ್ಥರು ಮಣಿಯಲಿಲ್ಲ. ಹೀಗಾಗಿ ಭೂಪೇಶ್ ಝಾನ್ಸಿ ಜಿಲ್ಲಾ ನ್ಯಾಯಲಯದ ಮೆಟ್ಟಿಲೇರಿದ್ದಾರೆ. ಕೂಡಲೇ ತನಿಖೆ ನಡೆಸಬೇಕೆಂದು ಎಸ್‍ಪಿಗೆ ಕೋರ್ಟ್ ನಿರ್ದೇಶನ ನೀಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನವದಂಪತಿಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ.

LEAVE A REPLY

Please enter your comment!
Please enter your name here