ಗೋಧ್ರಾ ಬಳಿಕದ ಹತ್ಯಾಕಾಂಡದ ಅಪರಾಧಿಗಳಿಗೆ ಸುಪ್ರೀಂಕೋರ್ಟ್‌ ಜಾಮೀನು – ಕೆಲಸ ಹುಡುಕಲು ನೆರವಾಗುವಂತೆಯೂ ಸೂಚನೆ

೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರೋತ್ತರ ಹತ್ಯಾಕಾಂಡದ ವೇಳೆ ೩೩ ಮಂದಿಯನ್ನು ಜೀವಂತವಾಗಿ ಸುಟ್ಟುಕೊಂದ ಅಪರಾಧಿಗಳಾಗಿ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿದ್ದಲ್ಲದೇ, ಆ ಅಪರಾಧಿಗಳಿಗೆ ಜೀವನಾಧಾರಕ್ಕಾಗಿ ಉದ್ಯೋಗ ಹುಡುಕಿಕೊಡುವಂತೆಯೂ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೋಬ್ದೆ, ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠ ಈ ಆದೇಶ ನೀಡಿದೆ.

ಸರ್ದಾರ್‌ಪುರ ದಂಗೆಯಲ್ಲಿ ಮರಣದಂಡನೆಗೆ ಒಳಗಾಗಿ ಬಳಿಕ ಜೀವಾವಧಿ ಶಿಕ್ಷೆಗೆ ಗುರಿ ಆಗಿರುವ ೧೭ ಮಂದಿಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ. ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪನ್ನು ಮಧ್ಯಪ್ರದೇಶದ ಇಂದೋರ್‌ಗೂ, ಮತ್ತೊಂದು ಗುಂಪನ್ನು ಜಬಲ್ಪುರಕ್ಕೂ ಸ್ಥಳಾಂತರಿಸುವಂತೆ ಆದೇಶಿಸಿದೆ. ಅಲ್ಲಿ ವಾರಕ್ಮೊಮ್ಮೆ ಪೊಲೀಸರ ಎದುರು ಹಾಜರಾಗುವುದರ ಜೊತೆಗೆ ವಾರದಲ್ಲಿ ಆರು ಗಂಟೆಗೆ ಸಮುದಾಯ ಸೇವೆಗಳನ್ನು ಮಾಡಬೇಕಾಗುತ್ತದೆ.

ಅಲ್ಲದೇ ಈ ೧೭ ಮಂದಿ ಜೀವನಾಧಾರಕ್ಕಾಗಿ ಅಗತ್ಯ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಗುವಂತೆ ಇಂದೋರ್‌ ಮತ್ತು ಜಬಲ್ಪುರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ಸಬರಮತಿ ಎಕ್ಸ್‌ಪ್ರೆಸ್‌ ರೈಲು ೫೯ ಮಂದಿ ಜೀವಂತವಾಗಿ ಸುಟ್ಟುಹೋದ ಘಟನೆ ನಡೆದ ಬಳಿಕ ಗುಜರಾತ್‌ನಲ್ಲಿ ಘಟಿಸಿದ ಒಂಭತ್ತು ದಂಗೆಗಳಲ್ಲಿ ಸರ್ದಾರ್‌ಪುರ ಹತ್ಯಾಕಾಂಡವೂ ಒಂದು. ಮುಸ್ಲಿಂ ಪ್ರಾಬಲ್ಯ ಇರುವ ಶೇಕ್‌ ವಾಸ್‌ ಎನ್ನುವರ ಮನೆ ಬಳಿ ಜಮಾಯಿಸಿದ್ದ ಕರಸೇವಕರ ಗುಂಪು ಮನೆಯೊಂದಕ್ಕೆ ಬೆಂಕಿ ಇಟ್ಟಿತ್ತು. ಈ ದಂಗೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೩೩ ಮಂದಿ ಸಜೀವದಹನವಾಗಿದ್ದರು.

LEAVE A REPLY

Please enter your comment!
Please enter your name here