ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಿ

ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತೀರಾ..? ಹಾಗಾದರೆ ಈ ಸುದ್ದಿಯನ್ನು ತಪ್ಪದೇ ಓದಿ. ಹೌದು, ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರೂಪದಲ್ಲಿ ಚಿಕಿತ್ಸಾ ವೆಚ್ಚ ಪಾವತಿಸಿದರಷ್ಟೇ ಚಿಕಿತ್ಸೆ ಸಿಗಬಹುದು. ಅದೂ ಕೇಂದ್ರ ಸರ್ಕಾರ ಪ್ರಾಯೋಜಿತ ಆರೋಗ್ಯ ಯೋಜನೆಗಳು ಮತ್ತು ಮಾಜಿ ಸೈನಿಕರ ಆರೋಗ್ಯ ಯೋಜನೆಗಳಡಿ ಚಿಕಿತ್ಸೆ ಪಡೆದರೆ. ನಗದು ರೂಪದಲ್ಲಿ ಚಿಕಿತ್ಸಾ ವೆಚ್ಚ ಪಾವತಿಸದೇ ಇದ್ದರೆ ನಾವು ಚಿಕಿತ್ಸೆಯನ್ನೇ ನಿರಾಕರಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ ನೀಡಿದೆ.

ಭಾರತೀಯ ವೈದ್ಯಕೀಯ ಸಂಘದ ಈ ಎಚ್ಚರಿಕೆ ಕಾರಣ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ ನಿಜ. ಆದರೆ ರೋಗಿಗಳ ಪರವಾಗಿ ಸರ್ಕಾರ ಆಸ್ಪತ್ರೆಗಳಿಗೆ ಕೊಡಬೇಕಿರುವ ಹಣ ಇನ್ನೂ ಬಂದಿಲ್ಲ ಎನ್ನುವುದು. ಹಲವಾರು ತಿಂಗಳಿಂದ ಸರ್ಕಾರ ಬಾಕಿ ಉಳಿಸಿಕೊಂಡಿದ್ದು ಖಾಸಗಿ ಆಸ್ಪತ್ರೆಗಳನ್ನು ನಡೆಸುವುದು ಕಷ್ಟ ಆಗುತ್ತಿದೆ ಎಂದು ಸಂಘ ಹೇಳಿದೆ.

ಕೇಂದ್ರ ಸರ್ಕಾರದಿಂದ ಬಾಕಿ ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಆಸ್ಪತ್ರೆಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ. ಆಸ್ಪತ್ರೆಯ ನೌಕರರ ಸಂಬಳ ಕೊಡುವುದೂ ಕಷ್ಟ ಆಗುತ್ತಿದೆ. ಹಲವಾರು ಆಸ್ಪತ್ರೆಗಳು ವಾರ್ಡ್‌ಗಳು ಮುಚ್ಚಿವೆ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆಯನ್ನು ಇಳಿಸಿವೆ ಮತ್ತು ನೌಕರನ್ನು ಕೆಲಸದಿಂದ ತೆಗೆದುಹಾಕಿವೆ.

ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಮಂದಿ ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಆಸ್ಪತ್ರೆಗಳು ಮತ್ತು ಸಂಘ ಪದೇ ಪದೇ ಮನವಿ ಮಾಡಿದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ ಆರ್‌ ವಿ ಅಶೋಕನ್‌ ಹೇಳಿದ್ದಾರೆ.

ಸರ್ಕಾರದಿಂದ ಪಾವತಿ ಬಾಕಿಯ ಜೊತೆಗೆ 2014ರ ನಂತರ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳಲ್ಲಿ ವೈದ್ಯಕೀಯ ಶುಲ್ಕ ಪರಿಷ್ಕರಣೆ ಆಗಿಲ್ಲ. ಎರಡು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ಆಗಬೇಕಿತ್ತು. ಆದರೆ ಆಸ್ಪತ್ರೆಗಳ ಖರ್ಚು ವೆಚ್ಚ ಜಾಸ್ತಿಯಾಗ್ತಾನೆ ಇದೆ ಎಂದು ಸಂಘ ಹೇಳಿದೆ.

ಆಯುಷ್ಮಾನ್‌ ಭಾರತ್‌ ಯೋಜನೆಯ ಜಾರಿಯ ವೇಳೆ ನಗರಗಳಲ್ಲಿ ಯೋಜನೆಯ ಸಮರ್ಪಕ ಜಾರಿಗೆ 2,500-3,000 ಸಾವಿರ ಹೊಸ ಆಸ್ಪತ್ರೆಗಳ ಅಗತ್ಯವಿದೆ ಎಂದು ಹೇಳಿದ್ದರು. ಆದರೆ ಸದ್ಯದ ಸ್ಥಿತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸದಾಗಿ ಬಂಡವಾಳ ಹೂಡಲು ಯಾರೂ ಸಿದ್ಧರಿಲ್ಲ. ಇದರಿಂದ ಆಯುಷ್ಮಾನ್‌ ಭಾರತ್‌ ಯೋಜನೆಯ ಮೇಲೂ ಪರಿಣಾಮ ಬೀರಲಿದೆ.

ದೇಶದಲ್ಲಿ ಹೊರರೋಗಿಗಳ ಪೈಕಿ ಶೇಕಡಾ 70ರಷ್ಟು ಮಂದಿ ಮತ್ತು ಒಳರೋಗಿಗಳ ಪೈಕಿ ಶೇಕಡಾ 60ರಷ್ಟು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿನ ಹಣಕಾಸು ಬಿಕ್ಕಟ್ಟು ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ಮೋದಿ ಸರ್ಕಾರವನ್ನು ಎಚ್ಚರಿಸಿದೆ.

LEAVE A REPLY

Please enter your comment!
Please enter your name here