ಕ್ರಿಕೆಟ್ ಅಂಗಳದಲ್ಲಿ “ಬೇಡ ಬೇಡ”ವೆನ್ನುತ್ತಲೇ ನಡೆಯಿತು ಕನ್ನಡದ ಕಲರವ..!

ಕನ್ನಡಿಗರು ಎಲ್ಲಿದ್ದರೂ ಕನ್ನಡಿಗರೇ. ಕನ್ನಡಾಭಿಮಾನ ಇದ್ದವರು ಎಂಥಹಾ ಸೆಲೆಬ್ರಿಟಿಯೇ ಆಗಿದ್ದರೂ ಕೂಡಾ ಕನ್ನಡ ಮಾತನಾಡುವವರು ಸಿಕ್ಕರೆ ಸಾಕು ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಹೊರದೇಶದ ಅಂಗಳದಲ್ಲಿ ಇಡೀ ಜಗತ್ತೇ ನೋಡುತ್ತಿರುವಾಗ ಕನ್ನಡದಲ್ಲಿ ವ್ಯವಹರಿಸುವುದೆಂದರೆ?! ಅದು ನಿಜಕ್ಕೂ ಮೆಚ್ಚಲೇ ಬೇಕಾದ ಸಂಗತಿ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿಕೇಟ್ ಮಧ್ಯೆ ಬ್ಯಾಟಿಂಗ್ ಮಾಡುವ ವೇಳೆ ಮನೀಶ್ ಪಾಂಡೆ ಮತ್ತು ಕೆ.ಎಲ್ ರಾಹುಲ್ ಕನ್ನಡದಲ್ಲೇ ಸಂವಹನ ನಡೆಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ, ಜೊತೆಗೆ ಕನ್ನಡದ ಕಂಪನ್ನು ಹೊರ ದೇಶದ ಅಂಗಳದಲ್ಲಿಯೂ ಚೆಲ್ಲಿದ್ದಾರೆ.

ಈ ಬಾರಿ ಪಂದ್ಯದಲ್ಲಿ ಗಮನಿಸಬೇಕಾದ ಅಂಶವೆಂದರೆ ಮೂವರು ಕನ್ನಡಿಗರು ಭಾರತದ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಹಾಗೂ ಕೆ.ಎಲ್. ರಾಹುಲ್.

ಮಯಾಂಕ್ ಅಗರ್ವಾಲ್ ಸಿಕ್ಕ ಅವಕಾಶದಲ್ಲಿ ಕೇವಲ 1 ರನ್ ಮಾತ್ರ ಗಳಿಸಿ ಔಟ್ ಆಗಿ ಹೊರಬಂದರೆ ಕೆ.ಎಲ್ ರಾಹುಲ್ ಅಮೋಘ ಶತಕ ಬಾರಿಸಿ ಸಾಧನೆ ಮಾಡಿದರು.

ಇವರ ಸಾಧನೆಗೆ ಐದನೇ ವಿಕೇಟ್ ಗೆ ಮನೀಶ್ ಪಾಂಡ್ ಜೊತೆಯಾಟ ಆಡಿ ಸಾತ್ ನೀಡಿದರು, ಈ ವೇಳೆ ರನ್ ಓಡುವಾಗ ರನ್ ಗಳಿಸುವುದು ಕಷ್ಟವೆನ್ನಿಸಿದಾಗ ಇಬ್ಬರೂ ಆಟಗಾರರೂ “ ಬೇಡ ಬೇಡ” ಎಂದು ಕನ್ನಡದಲ್ಲೇ ಸಂವಹನ ನಡೆಸಿದ್ದು ಅಲ್ಲಿದ್ದ ಮೈಕ್ ನಲ್ಲಿ ರೆಕಾರ್ಡ್ ಆಯಿತು. ಇದು ಅಲ್ಲಿ ನೆರೆದಿದ್ದ ಮತ್ತು ಮನೆಯಲ್ಲಿಯೇ ಕುಳಿತು ನೋಡುತ್ತಿದ್ದ ಲಕ್ಷಾಂತರ ಮಂದಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು.

113 ಎಸೆತಗಳನ್ನು ಎದುರಿಸಿದ ರಾಹುಲ್ ಒಂಭತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 112 ರನ್ ಗಳಿಸಿದರು. ಇನ್ನೊಂದೆಡೆ ಕೆಳ ಕ್ರಮಾಂಕದಲ್ಲಿದ್ದ ಪಾಂಡೆ 48 ಎಸೆತಗಳಲ್ಲಿ ಎರಡು ಬೌಂಡರಿಗಳಿಂದ 42 ರನ್ ಗಳಿಸಿದರು. ಅಂದ ಹಾಗೆ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಐದನೇ ವಿಕೆಟ್ ಗೆ 107 ರನ್ ಗಳ ಅಮೂಲ್ಯ ಜತೆಯಾಟವನ್ನು ನೀಡಿದ್ದರು.

LEAVE A REPLY

Please enter your comment!
Please enter your name here