ಕೊರೋನಾ ಹೊಡೆತಕ್ಕೆ ದಿಕ್ಕು ತೋಚದೇ ಕೂತಿದೆ ಸರ್ಕಾರ – ಸರ್ಕಾರಿ ನೌಕರರ ಸಂಬಳ ಕಟ್‌ ಆಗುತ್ತಾ..? ಯಡಿಯೂರಪ್ಪ ಹೇಳಿದ್ದೇನು..?

ಅಕ್ಕಪಕ್ಕದ ಕೆಲ ರಾಜ್ಯಗಳು ಸರ್ಕಾರಿ ನೌಕರರ ಸಂಬಳದಲ್ಲಿ ಕಡಿತ ಮಾಡಿದಂತೆ ಕರ್ನಾಟಕದಲ್ಲೂ ಸರ್ಕಾರಿ ನೌಕರರ ಸಂಬಳದಲ್ಲಿ ಕಡಿತ ಆಗುತ್ತಾ..? ಇದು ಸದ್ಯಕ್ಕೆ ಸಾಕಷ್ಟು ಚರ್ಚಿತವಾಗಿರುವ ವಿಷಯ. ಕೊರೋನಾ ಹೊಡೆತಕ್ಕೆ ರಾಜ್ಯದ ಹಣಕಾಸು ಸ್ಥಿತಿ ಮತ್ತಷ್ಟು ಹದೆಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಆಡಿರುವ ಮಾತು ಹಲವು ಸುಳಿವು ಮತ್ತು ಮುನ್ಸೂಚನೆಗಳನ್ನು ನೀಡಿದೆ.

ಖಾಸಗಿ ಸುದ್ದಿವಾಹಿನಿ ಪಬ್ಲಿಕ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಯಡಿಯೂರಪ್ಪ ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲ ಎಂದು ಹೇಳಿದ್ದಾರೆ.

ನಮ್ಮ ಹಣಕಾಸಿನ ಸ್ಥಿತಿ ಸರಿ ಇಲ್ಲ. ಆದರೂ ಸರ್ಕಾರಿ ನೌಕರರಿಗೆ ತೊಂದರೆ ಆಗಬಾರದು. ಏಪ್ರಿಲ್‌ ತಿಂಗಳಲ್ಲಿ ಸ್ಯಾಲರಿ ಕೊಡುವಂತೆ ನಾನು ಹೇಳಿದ್ದೇನೆ. ಮುಂದೆ ಕೊರೋನಾ ವೈರಸ್‌ ಹೇಗೆ ಕಂಟ್ರೋಲ್‌ ಆಗುತ್ತೆ ಅದರ ಆಧಾರದ ಮೇಲೆ ಮುಂದಿನ ತಿಂಗಳಿಂದ ಸಂಬಳ ಎಷ್ಟು ಕೊಡಬಹುದು, ಎಷ್ಟು ಕಟ್‌ ಮಾಡಬಹುದು ಎಂಬ ಬಗ್ಗೆ ಮುಂದಾಲೋಚನೆ ಮಾಡ್ತಿದ್ದೇವೆ. ಈಗಂತೂ ಇಲ್ಲ. ಏಪ್ರಿಲ್‌ ತಿಂಗಳಲ್ಲಿ ಏನೇ ಕಷ್ಟ ಬಂದರೂ ಸಂಬಳ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಮುಂದಿನ ತಿಂಗಳು ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ.

ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಹಣಕಾಸು ಪರಿಸ್ಥಿತಿ ಸರಿ ಇಲ್ಲ. ನಮ್ಮದೂ ಮಾತ್ರವಲ್ಲ, ದೇಶ, ರಾಜ್ಯಗಳ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಈಗಿರುವ ಆದಾಯ ಏನೇನೂ ಸಾಕಾಗುವುದಿಲ್ಲ. ಎಲ್ಲವೂ ಕಟ್‌ ಆಗಿದೆ. ನಮಗೆ ಬರುವ ಆದಾಯವೆಲ್ಲ ಕಡಿಮೆ ಆಗಿದೆ. ಅಭಿವೃದ್ಧಿ ಸ್ಥಗಿತವಾಗಿದೆ. ಮುಂದೇನ್‌ ಮಾಡುವುದು ಎಂದು ದಿಕ್ಕು ತೋಚದೇ ನಾವು ಕೈ ಕಟ್ಟಿಕೊಂಡು ಕೂತಿದ್ದೇವೆ. ಏಪ್ರಿಲ್‌ ೧೪ರಷ್ಟೊತ್ತಿಗೆ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಬಂದರೆ ಬೇರೆ ಬೇರೆ ಆರ್ಥಿಕ ಚಟುವಟಿಕೆಗಳು ಆರಂಭವಾಗ್ತವೆ. ಅದಕ್ಕಾಗಿ ಜನರಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇವೆ, ಸಹಕಾರ ಕೊಡಿ

ಎಂದು ಪಬ್ಲಿಕ್‌ ಟಿವಿ ನಿರೂಪಕ ಅರುಣ್‌ ಬಡಿಗೇರ್‌ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪರ ಈ ಮಾತು ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸರ್ಕಾರಿ ನೌಕರರ ಸಂಬಳಕ್ಕೆ ಅನಿವಾರ್ಯವಾಗಿ ಕತ್ತರಿ ಬೀಳಬಹುದು ಎಂಬ ಸುಳಿವು ನೀಡಿದಂತಿದೆ.

LEAVE A REPLY

Please enter your comment!
Please enter your name here