ಕೊರೋನಾ ಸಂಕಷ್ಟದಲ್ಲೂ ನೆರವು ನೀಡದ ಪ್ರಧಾನಿ ಮೋದಿ ಸರ್ಕಾರ – ಮೇ 1ರಂದು ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ಕಾಂಗ್ರೆಸ್‌ ಪ್ರತಿಭಟನೆ

ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೋರುತ್ತಿರುವ ತಾರತಮ್ಯ ನೀತಿಯನ್ನು ಖಂಡಿಸಿ ವಿನೂತನ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ ನೀಡಿದೆ.

ಮೇ 1ರಂದು ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರ ಮೂಲಕ ರಾಜ್ಯಕ್ಕೆ ಪ್ರಧಾನಿ ಮೋದಿ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುವಂತೆ ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ಇವತ್ತು ಪಂಜಾಬ್‌ ಕಾಂಗ್ರೆಸ್‌ ಶಾಸಕರ ಜೊತೆಗೆ ಸಿಎಂ ಅಮರಿಂದರ್‌ ಸಿಂಗ್‌ ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದರು. ಆಗ ಪಂಜಾಬ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುನಿಲ್‌ ಜಾಖರ್‌ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಪ್ರತಿಭಟಿಸುವ ಪ್ರಸ್ತಾಪ ಮುಂದಿಟ್ಟರು.

ಪಂಜಾಬ್‌ ಸಿಎಂ ಆಕ್ರೋಶಕ್ಕೆ ಕಾರಣವಾದ ಅಂಶಗಳಿವು.

1) ಲಾಕ್‌ಡೌನ್‌ ಬಳಿಕ ಪ್ರತಿ ತಿಂಗಳಿಗೆ ಪಂಜಾಬ್‌ ರಾಜ್ಯದ ಖಜಾನೆಗೆ 3,500 ಕೋಟಿ ರೂಪಾಯಿ ಖೋತಾ ಆಗುತ್ತಿದೆ.

2) ಒಂದು ವರ್ಷದಲ್ಲಿ ಬರೋಬ್ಬರೀ 50 ಸಾವಿರ ಕೋಟಿ ರೂಪಾಯಿ ನಷ್ಟ ಆಗಬಹುದು

3) ಇದುವರೆಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಕಾಸು ಕೊಟ್ಟಿಲ್ಲ

4) ತಕ್ಷಣವೇ ರಾಜ್ಯಕ್ಕೆ 2 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು

ಮೇ 1ರಂದು ಪಂಜಾಬ್‌ನಲ್ಲಿ ಕಾಂಗ್ರೆಸ್‌ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ರಾಷ್ಟ್ರಧ್ವಜವನ್ನು ವಿತರಿಸುವುದಾಗಿ ಹೇಳಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಜನತಾ ಕರ್ಫ್ಯೂ ದಿನದಂದು ಮನೆಯ ಬಾಲ್ಕನಿ ಮತ್ತು ಮೇಲ್ಛಾವಣಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ ಜನತೆಗೆ ಕರೆ ನೀಡಿದ್ದರು. ಅಲ್ಲದೇ ಏಪ್ರಿಲ್‌ 5ರಂದು ರಾತ್ರಿ 9 ಗಂಟೆಗೆ ಕೊರೋನಾ ವಿರುದ್ಧ ಗೆಲ್ಲಲು ಮನೆಯಲ್ಲೇ ದೀಪ ಬೆಳಗುವಂತೆ ಕರೆ ನೀಡಿದ್ದರು.

LEAVE A REPLY

Please enter your comment!
Please enter your name here