ಕೊರೋನಾ: ಮುಸ್ಲಿಮರನ್ನು ಟಾರ್ಗೆಟ್‌ ಮಾಡಬೇಡಿ-ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆ

ಯಾರಾದರೂ ಏನಾದರೂ ತಪ್ಪು ಮಾಡಿದರೂ, ಎಲ್ಲರನ್ನೂ ತಪ್ಪಿತಸ್ಥರೆಂದು ಪರಿಗಣಿಸಬೇಡಿ. ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳಲು ಬಯಸುತ್ತಾರೆ, ತಬ್ಲೀಘಿ ಜಮಾತ್ ಸದಸ್ಯರನ್ನು ಒಳಗೊಂಡ ಘಟನೆಗಳ ಬಗ್ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಮಾತನಾಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್  ಭಯ ಮತ್ತು ಕೋಪದಿಂದ ಮಾಡಿದ ಕೆಲವರ ಕೃತ್ಯಗಳಿಗೆ ಸಂಕಷ್ಟದ ಸಮಯದಲ್ಲಿ ನಿರ್ದಿಷ್ಟ ಸಮುದಾಯವನ್ನು ಟೀಕಿಸುವುದು ಸರಿಯಲ್ಲ. ಸಮುದಾಯಗಳ ಮುಖಂಡರಿಗೆ ಇಂತಹ ಕೃತ್ಯಗಳ ಭಾಗವಾಗದಂತೆ ತಮ್ಮ ಸದಸ್ಯರಿಗೆ ತಿಳಿಹೇಳುವಂತೆ ಅವರು ಮನವಿ ಮಾಡಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಆನ್ಲೈನ್ ಮೂಲಕ ಮಹಾರಾಷ್ಟ್ರದ ನಾಗಪುರದಿಂದ ಭಾಷಣ ಮಾಡಿದ ಅವರು ಕೊರೋನ ವೈರಸ್ ಹರಡುವಿಕೆಯಿಂದ ಜಗತ್ತಿಗೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿ ಭವಿಷ್ಯದ ಭಾರತವನ್ನು ಕಟ್ಟಬೇಕಾದರೆ, ಶಿಸ್ತುಬದ್ಧವಾದ ಸಮಾಜ ಬಹಳ ಮುಖ್ಯ ಎಂದು ಹೇಳಿದರು.

ನಮ್ಮ ಆರ್ಥಿಕತೆಯನ್ನು ಸ್ವಾವಲಂಬಿಯಾಗಿ ಮಾಡುವುದು ಕೇವಲ ಸರ್ಕಾರದ ಕೆಲಸ ಅಲ್ಲ. ಒಂದು ಸಮಾಜವಾಗಿ ಇದನ್ನು ಸಾಧ್ಯವಾಗಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಲ್ಲಿ ಕಂಪೆನಿಗಳು ಹಾಗೂ ಅಲ್ಲಿನ ಉದ್ಯೋಗಿಗಳ ಪಾತ್ರ ಪ್ರಮುಖವಾದದ್ದು.

ಲಾಕ್ಡೌನ್ ನಿಂದಾಗಿ ಕುಟುಂಬದ ನಡುವೆ ಒಳ್ಳೆಯ ಸಂವಾದ, ಬಾಂಧವ್ಯ ಬೆಳೆಯುತ್ತಿದೆ. ಸಂಬಂಧಗಳು ಗಟ್ಟಿಯಾಗುತ್ತಿವೆ. ಒಂದು ಕುಟುಂಬಕ್ಕೆ ಇದು ಒಂದು ಬಹಳ ಒಳ್ಳೆಯ ವಿಷಯ.

ಹಾಗೆಯೇ ಪರಿಸರ ಮಾಲಿನ್ಯ ಕೂಡ ಬಹಳ ಕಡಿಮೆಯಾಗಿದೆ. ಮುಂದೆಯೂ ಕೂಡ ಪರಿಸರದ ಬಗ್ಗೆ ನಾವು ಯಾವಾಗಲೂ ಯೋಚಿಸಬೇಕಾದ ಅಗತ್ಯವಿದೆ.ನಮ್ಮ ಅಗತ್ಯಗಳು ಕಡಿಮೆಯಾದಾಗ ಪರಿಸರದ ಮಾಲಿನ್ಯ ಕಡಿಮೆಯಾಗುತ್ತದೆ. ಮಾಲಿನ್ಯವನ್ನು ಕಡಿಮೆಗೊಳಿಸುವ ಬಗ್ಗೆಯೂ ಸಂಶೋಧನೆಗಳು ನಡೆಯಬೇಕಾದ್ದು ಅತ್ಯಂತ ಅಗತ್ಯ.

ನಮ್ಮ ಜೀವನ ಮೌಲ್ಯಗಳ ಆಧಾರದ ಮೇಲೆ, ರಾಷ್ಟ್ರದ ಪುನರ್ ನಿರ್ಮಾಣ ಆಗಬೇಕಾದ್ದು ಇಂದಿನ ಅಗತ್ಯ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆಗಳನ್ನು ತರುವ ಜವಾಬ್ದಾರಿಯೂ ಕೂಡ ನಮ್ಮ ಮೇಲಿದೆ.

ಇದೇ ವೇಳೆ ಪಾಲ್ಗರ್ ಸಾಧುಗಳ ಹತ್ಯಾ ಪ್ರಕರಣದ ಕುರಿತು ಪ್ರಸ್ತಾಪಿಸಿರುವ ಮೋಹನ್ ಭಾಗವತ್, ಪಾಲ್ಗರ್ ಸಾಧುಗಳ ಮೇಲಿನ ಭೀಕರ ಹಲ್ಲೆಯನ್ನು ಆರ್‌ಎಸ್‌ಎಸ್ ತೀವ್ರವಾಗಿ ಖಂಡಿಸುತ್ತದೆ ನೂರಾರು ಉದ್ರಿಕ್ತ ಗುಂಪು ಸಾಧುಗಳ ಮೇಲೆ ಹಲ್ಲೆ ನಡೆಸುವಾಗ ಪೊಲೀಸರು ಏನು ಮಾಡುತ್ತಿದ್ದರು ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭಾರತದ 130 ಕೋಟಿ ಜನ ಒಂದಾಗಿದ್ದು, ನಾವೆಲ್ಲಾ ಕೋವಿಡ್-‌19 ಪಿಡುಗಿನ ವಿರುದ್ದ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಡಬೇಕು, ಎಲ್ಲರೂ ಸೇರಿ ಈ ಮಹಾಮಾರಿಯ ವಿರುದ್ಧ ನಾವು ಜಯಗಳಿಸಲಿದ್ದೇವೆ ಎಂದು ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾಷಣವನ್ನು ಪೂರ್ಣ ಕೇಳಲು ಯೂಟ್ಯೂಬ್ ಲಿಂಕ್ ನೋಡಿರಿ.

LEAVE A REPLY

Please enter your comment!
Please enter your name here