ಕೊರೋನಾ ವದಂತಿ ನಂಬಬೇಡಿ.. ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

ಕೊರೋನಾ ವೈರಸ್ ಹೆಸರು ಕೇಳಿದ್ರೇನೆ ಎಲ್ಲರೂ ಬೆಚ್ಚಿಬೀಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹತ್ತಾರು ವದಂತಿಗಳು ಕೂಡ ಹಬ್ಬುತ್ತಿವೆ. ವದಂತಿಗಳ ಬಗ್ಗೆ ಜನತೆ ಜಾಗ್ರತೆಯಿಂದ ಇರುವುದು ಒಳಿತು. ಸತ್ಯ ಏನು ಎಂಬುದನ್ನು ತಿಳಿದುಕೊಂಡು ಮುಂಜಾಗ್ರತೆ ವಹಿಸಬೇಕಾದ ತುರ್ತು ಎದುರಾಗಿದೆ.

ಪ್ರಶ್ನೆ – ದೇಹದ ಮೇಲೆ ಆಲ್ಕೋಹಾಲ್, ಕ್ಲೋರಿನ್ ಚೆಲ್ಲಿಕೊಂಡರೇ ವೈರಸ್ ಸತ್ತು ಹೋಗುತ್ತಾ..?
ಉತ್ತರ – ಕೊರೋನಾ ವೈರಸ್ ಈಗಾಗಲೇ ನಿಮ್ಮ ದೇಹ ಪ್ರವೇಶಿಸಿದ್ದಲ್ಲಿ ದೇಹದ ಮೇಲೆ ಆಲ್ಕೋಹಾಲ್, ಕ್ಲೋರಿನ್ ಚೆಲ್ಲಿಕೊಂಡರೇ ವೈರಸ್ ಸತ್ತು ಹೋಗಲ್ಲ. ಜೊತೆಗೆ ಚರ್ಮಕ್ಕೆ ಕಣ್ಣಿಗೆ ಹಾನಿ ಉಂಟು ಮಾಡುತ್ತವೆ. ಚರ್ಮದ ಮೇಲೆ ಆಲ್ಕೋಹಾಲ್ ಅಂಶಗಳನ್ನು ಪೂಸಿಕೊಳ್ಳಬಾರದು. ಅಷ್ಟೇ ಅಲ್ಲ, ಮದ್ಯ ಸೇವಿಸಿದರೇ ಕೊರೋನಾ ಹತ್ತಿರಕ್ಕೆ ಸುಳಿಯಲ್ಲ ಅನ್ನುವುದು ಸಹ ಶುದ್ಧ ಸುಳ್ಳು.

ಪ್ರಶ್ನೆ – ಆ್ಯಂಟಿಬಯೋಟಿಕ್ಸ್ ಮೂಲಕ ಕೊರೋನಾ ತಡೆಯಬಹುದಾ..?
ಉತ್ತರ -ಆ್ಯಂಟಿಬಯೋಟಿಕ್ಸ್ ಬ್ಯಾಕ್ಟೀರಿಯಾ ಸಂಬಂಧಿ ರೋಗಗಳನ್ನು ತಡೆಯಲು ನೆರವು ನೀಡುತ್ತವೆ. ವೈರಸ್ ಮೇಲೆ ಆ್ಯಂಟಿಬಯೋಟಿಕ್ಸ್ ಯಾವುದೇ ಪರಿಣಾಮ ಬೀರಲ್ಲ. ಹೀಗಾಗಿ ಆ್ಯಂಟಿಬಯೋಟಿಕ್ಸ್ ಮೂಲಕ ಕರೋನಾ ನಿವಾರಣೆ, ಚಿಕಿತ್ಸೆ ಅಸಾಧ್ಯ. ವೈರಸ್ ಕಾರಣದಿಂದ ಬ್ಯಾಕ್ಟೀರಿಯಾ ಇನ್ಪೆಕ್ಷನ್ ಆದಲ್ಲಿ ಆ್ಯಂಟಿಬಯೋಟಿಕ್ಸ್ ಬಳಸಬಹುದು.

ಪ್ರಶ್ನೆ – ಬೆಳ್ಳುಳ್ಳಿ ತಿಂದರೇ ಕೊರೋನಾ ಬರಲ್ವಾ..?
ಉತ್ತರ – ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಇದಕ್ಕೆ ಸೂಕ್ಷ್ಮಾಣುಜೀವಿಗಳನ್ನು ನಾಶ ಮಾಡುವ ಶಕ್ತಿ ಇದೆ. ಆದರೆ, ಬೆಳ್ಳುಳ್ಳಿ ತಿಂದಲ್ಲಿ ಕೊರೋನಾದಿಂದ ಪಾರಾಗಬಹುದು ಎಂದುಕೊಳ್ಳುವಂತಿಲ್ಲ. ಕೊರೋನಾ ತಡೆಗೆ ಬೆಳ್ಳುಳ್ಳಿ ನೆರವಾಗುತ್ತದೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸಹ ಇದನ್ನೇ ಹೇಳಿದೆ.

ಪ್ರಶ್ನೆ – ಕೊರೋನಾ ಬಂದರೇ ಸಾವು ಖಚಿತನಾ..?
ಉತ್ತರ – ಇದು ಸುಳ್ಳು. ಕೆಲವೇ ಮಂದಿಗೆ ಇದು ಪ್ರಾಣಾಂತಕ ಆಗಬಹುದು. ಸೋಂಕಿತರ ಪೈಕಿ ಸಾವನ್ನಪ್ಪಿರುವುದು ಶೇಕಡಾ 1ಕ್ಕಿಂತ ಕಡಿಮೆ. ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಪ್ರಕಾರ ಶೇ.80ರಷ್ಟು ಪ್ರಕರಣಗಳು ಸಾಮಾನ್ಯವಾದವು.

ಪ್ರಶ್ನೆ – ಮಾಸ್ಕ್ ಗಳಿಂದ ರಕ್ಷಣೆ ಸಿಗುತ್ತಾ..?
ಉತ್ತರ -ವೈದ್ಯಕೀಯ ಸಿಬ್ಬಂದಿ ಬಳಸುವ ಮಾಸ್ಕ್ ಗಳು ಕೊರೋನಾ ವೈರಸ್ ತಡೆಯುವ ಶಕ್ತಿ ಹೊಂದಿವೆ. ಯಾಕೆಂದರೆ, ಇವು ಮುಖಕ್ಕೆ ಗಟ್ಟಿಯಾಗಿ ಹೊಂದಿಕೊಳ್ಳುತ್ತವೆ. ಮಾಮೂಲಿ ಮಾಸ್ಕ್ ಗಳು ಬಿಗಿ ಇರಲ್ಲ. ಕೆಲವರು ಮಾಸ್ಕ್ ಧರಿಸಿದರೂ, ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಲ್ಲ. ಕೈಗಳ ಸ್ವಚ್ಛತೆಗೂ ಆದ್ಯತೆ ಕೊಡಬೇಕಾಗುತ್ತದೆ. ಇಲ್ಲದಿದ್ದರೇ ಅಪಾಯ ಎದುರಾಗಬಹುದು.

ಪ್ರಶ್ನೆ – ಉಷ್ಣಾಂಶ ಹೆಚ್ಚಿದ್ದರೇ ಕೊರೋನಾ ವೈರಸ್ ಸತ್ತು ಹೋಗುತ್ತಾ..?
ಉತ್ತರ – ಶೀತ, ಕೆಮ್ಮು ಉಂಟು ಮಾಡುವ ಫ್ಲೂ ಕಾರಕ ವೈರಸ್‍ ಶೀತ ಹವೆಯಿದ್ದಾಗ ಬೇಗನೆ ಹರಡುತ್ತವೆ. ಆದ್ರೆ, ಉಷ್ಣಾಂಶ ಹೆಚ್ಚಿದ್ದಾಗ ವೈರಸ್ ಹರಡುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಉಷ್ಣಾಂಶದಲ್ಲಿನ ಬದಲಾವಣೆ ಕೊರೋನಾ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವೈರಸ್ ದೇಹ ಪ್ರವೇಶಿಸಿದ್ರೆ, ಅದನ್ನು ಉಷ್ಣಾಂಶ ಏನು ಮಾಡಲು ಆಗುವುದಿಲ್ಲ. ಬಿಸಿಲಲ್ಲಿ ಕುಳಿತರೇ ವೈರಸ್ ಸತ್ತುಹೋಗುತ್ತದೆ ಎನ್ನುವುದು ಸುಳ್ಳು. ವೈರಸ್ ವಿರುದ್ಧ ಶರೀರವೇ ಹೋರಾಟ ಮಾಡಬೇಕು.

ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದರೇ, ಇತರರಿಗೆ ಶೇರ್ ಮಾಡಿ

LEAVE A REPLY

Please enter your comment!
Please enter your name here