ಕೊರೋನಾ ರೋಗಿಗೆ ಗುಣಮುಖರಾದ ಕೊರೋನಾ ರೋಗಿಯ ರಕ್ತಕಣವೇ ಮದ್ದು..! – ಏಳೇ ದಿನದಲ್ಲಿ ಗುಣಮುಖ..!

image courtesy: https://www.nature.com/

ಕೊರೋನಾ ರೋಗಕ್ಕೆ ಇನ್ನೂ ಮದ್ದು ಕಂಡುಹಿಡಿದಿಲ್ಲ. ಆದರೆ ಕೊರೋನಾ ರೋಗಿಗಳ ಜೀವ ಉಳಿಸುವುದಕ್ಕೆ ವೈದ್ಯಲೋಕ ಇನ್ನಿಲ್ಲದ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದೆ. ಆ ಪ್ರಯತ್ನಗಳಲ್ಲಿ ಕೊರೋನಾದಿಂದ ಗುಣಮುಖರಾದವರ ರಕ್ತ ಕಣಗಳನ್ನು ಕೊರೋನಾ ರೋಗಿಯ ರಕ್ತದೊಳಗೆ ಸೇರಿಸುವುದು ಕೂಡಾ ಒಂದು. ಸದ್ಯ ಅಮೆರಿಕ, ಚೀನಾ, ದಕ್ಷಿಣ ಕೊರಿಯಾ ಒಳಗೊಂಡು ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಇಂತಹ ಪ್ರಯತ್ನಗಳು ಜಾರಿಯಲ್ಲಿವೆ. ಈ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರುವ ಸರದಿಯಲ್ಲಿದೆ.

ಇವತ್ತು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌)ನ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆಯ ನಿರ್ದೇಶಕ ಮನೋಜ್‌ ಮುರ್ರೆಖರ್‌

ಕಾನ್ವಾಲೆಸೆಂಟ್‌ ಪ್ಲಾಸ್ಮಾ ಚಿಕಿತ್ಸೆಗಾಗಿ ನಾವು ಸಂಹಿತೆಯನ್ನು ಅಂತಿಮಗೊಳಿಸುತ್ತಿದ್ದೇವೆ. ಇದಾದ ಬಳಿಕ ಚಿಕಿತ್ಸಾ ಪ್ರಯೋಗಕ್ಕೂ ಮೊದಲು ನಾವು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶಕರ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಈ ಚಿಕಿತ್ಸಾ ವಿಧಾನವನ್ನು ಎಲ್ಲ ಕೊರೋನಾ ರೋಗಿಗಳಿಗೂ ಬಳಸುವುದಿಲ್ಲ. ಆದರೆ ತುರ್ತು ನಿಗಾ ಘಟಕದಲ್ಲಿರುವ ರೋಗಿಗಳಿಗಷ್ಟೇ ಈ ಚಿಕಿತ್ಸೆಯನ್ನು ನೀಡಬಹುದಾಗಿದೆ

ಎಂದು ಹೇಳಿದ್ದಾರೆ.

ಕಾನ್ವಾಲೆಸೆಂಟ್‌ ಎನ್ನುವ ಇಂಗ್ಲೀಷ್‌ ಪದ ಅರ್ಥ ರೋಗದಿಂದ ಗುಣಮುಖರಾದವರು ಎಂದು. ಪ್ಲಾಸ್ಮಾ ಎಂದರೆ ರಕ್ತದಲ್ಲಿರುವ ಹಳದಿ ಬಣ್ಣದ ದ್ರವಾಂಶ. ರಕ್ತದಲ್ಲಿರುವ ರಕ್ತ ಕಣಗಳನ್ನು ಹಿಡಿದಿಡುವುದೇ ಈ ದ್ರವಾಂಶ. ಇಡೀ ದೇಹದಲ್ಲಿ ರಕ್ತ ಕಣಗಳನ್ನು ಮತ್ತು ಪ್ರೊಟೀನ್‌ನ್ನು ಸರಬರಾಜು ಮಾಡುವುದೇ ಈ ಪ್ಲಾಸ್ಮಾ. ದೇಹದಲ್ಲಿನ ಒಟ್ಟು ರಕ್ತ ಪ್ರಮಾಣದಲ್ಲಿ ಇದರ ಪಾಲು ಶೇಕಡಾ ೫೫ರಷ್ಟು.

ಹೀಗಾಗಿ ಕಾನ್ವಾಲೆಸೆಂಟ್‌ ಪ್ಲಾಸ್ಮಾ ಚಿಕಿತ್ಸೆ ಎಂದರೆ ಕೊರೋನಾದಿಂದ ಗುಣಮುಖರಾದ ರೋಗಿಯ ರಕ್ತದಲ್ಲಿರುವ ಪ್ಲಾಸ್ಮಾವನ್ನು ಕೊರೋನಾ ಪೀಡಿತ ರೋಗಿಯ ರಕ್ತಕಣಗಳಿಗೆ ಬೆರೆಸುವ ಮೂಲಕ ಚಿಕಿತ್ಸೆ ನೀಡುವುದು.

ಕಾನ್ವಾಲೆಸೆಂಟ್‌ ಪ್ಲಾಸ್ಮಾ ಚಿಕಿತ್ಸೆ ಹೇಗೆ..?

ಕೊರೋನಾ ಜ್ವರದಿಂದ ಗುಣಮುಖರಾದ ವ್ಯಕ್ತಿ ಗುಣಮುಖರಾಗುವ ವೇಳೆಗೆ ತನ್ನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಂಡಿರುತ್ತಾನೆ. ರೋಗ ನಿರೋಧಕ ಶಕ್ತಿಗೆ ಕಾರಣವಾಗಿರುವ ಈ ಕಣಗಳು ವ್ಯಕ್ತಿಯ ರಕ್ತದಲ್ಲಿರುವ ಪ್ಲಾಸ್ಲಾದಲ್ಲಿ ಅಡಕವಾಗಿರುತ್ತದೆ. ಈ ಕಣಗಳ ಕಾರಣದಿಂದಲೇ ರಕ್ತ ಹೆಪ್ಪುಗಟ್ಟುವಿಕೆ ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿ ವೃರ್ಧಿಸುತ್ತದೆ. ಕೊರೋನಾ ವೈರಸ್‌ನಿಂದ ಗುಣಮುಖರಾದ ವ್ಯಕ್ತಿಯಲ್ಲಿ ರೋಗ ನಿರೋಧಕ ಕಣಗಳು ದೀರ್ಘಕಾಲದವರೆಗೆ ಉಳಿದಿರುತ್ತವೆ.

ಹೀಗೆ ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾವನ್ನು ಕೊರೋನಾ ಪೀಡಿತ ರೋಗಿಗೆ ಕೊಟ್ಟಾಗ ಕೊರೋನಾ ಪೀಡಿತ ರೋಗಿಯಲ್ಲಿ ಕೊರೋನಾ ನಿರೋಧಕ ಶಕ್ತಿ ಹೆಚ್ಚಾಗಿ ದೇಹದೊಳಗಿರುವ ವೈರಸ್‌ನ್ನು ಬಡಿದೋಡಿಸಬಹುದು. ಇದನ್ನು ಅಲ್ಪಕಾಲೀನ ರೋಗನಿರೋಧಕವೆಂದೂ ಕರೆಯುತ್ತಾರೆ. ಅಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ ಸ್ವಲ್ಪ ಕಾಲದವರೆಗೆ ರೋಗನಿರೋಧಕ ಶಕ್ತಿಯನ್ನು ಪಡೆದುಕೊಳ್ಳುವುದು. ಉದಾಹರಣೆಗೆ ತಾಯಿ ಮೊಲೆ ಹಾಲಿನಿಂದ ಮಗು ಪಡೆಯುವ ರೋಗ ನಿರೋಧಕ ಶಕ್ತಿ. ಅಂದರೆ ತತ್‌ಕ್ಷಣಕ್ಕೆ ಇದು ವೈರಸ್‌ನ್ನು ನಿಷ್ಕ್ರಿಯಗೊಳಿಸುವ ವಿಧಾನ.

ಅಮೆರಿಕದಲ್ಲಿ ಮಾಡಲಾದ ಅಧ್ಯಯನದ ಪ್ರಕಾರ ಕೊರೋನಾದಿಂದ ಚಿಂತಾಜನಕ ಸ್ಥಿತಿಯಲ್ಲಿ ೧೦ ಮಂದಿ ರೋಗಿಗಳಿಗೆ ಒಂದು ಡೋಸ್‌ ಪ್ಲಾಸ್ಮಾ ಕೊಟ್ಟ ಬಳಿಕ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ವೈರಾಣು ಮುಕ್ತರಾಗಿದ್ದಾರೆ. ಚೀನಾದಲ್ಲಾದ ಅಧ್ಯಯನ ಪ್ರಕಾರ ಪ್ಲಾಸ್ಮಾ ಚಿಕಿತ್ಸೆ ಒಂದೆರಡು ದಿನಗಳಲ್ಲಿ ಆ ಹತ್ತು ಮಂದಿಯೂ ಜ್ವರ, ಕಫ, ಉಸಿರಾಟದ ತೊಂದರೆ, ಎದೆ ನೋವಿನಿಂದ ಗುಣಮುಖರಾಗಿದ್ದಾರೆ.

ಒಬ್ಬರಿಂದ ಎಷ್ಟು ಜನರನ್ನು ಗುಣಪಡಿಸಬಹುದು..?

ಕೊರೋನಾದಿಂದ ಗುಣಮುಖರಾದ ಒಬ್ಬರ ರಕ್ತದಿಂದ ಕನಿಷ್ಠವೆಂದರೂ ಇಬ್ಬರು ಮತ್ತು ಗರಿಷ್ಠವೆಂದರೂ ಐವರು ಮಂದಿ ಕೊರೋನಾ ರೋಗಿಗಳನ್ನು ಗುಣಮುಖರನ್ನಾಗಿಸಬಹುದು. ಒಬ್ಬ ಕೊರೋನಾ ರೋಗಿಯನ್ನು ಗುಣಪಡಿಸಲು ೨೦೦ ರಿಂದ ೨೫೦ ಮಿಲಿಲೀಟರ್‌ ಪ್ಲಾಸ್ಮಾ ಅಗತ್ಯ. ಈ ಚಿಕಿತ್ಸಾ ಪದ್ಧತಿಯಲ್ಲಿ ಮೂರು ದಿನದಿಂದ ಏಳು ದಿನದೊಳಗೆ ರೋಗಿಗಳು ಗುಣಮುಖರಾಗುತ್ತಾರೆ ಎನ್ನುವುದು ಅಮೆರಿಕ ಮತ್ತು ಚೀನಾದಲ್ಲಿ ನಡೆದ ಅಧ್ಯಯನಗಳು ತಿಳಿಸುತ್ತಿವೆ.

ಎಷ್ಟು ದಿನದಲ್ಲಿ ರಕ್ತದಾನ ಮಾಡಬಹುದು..?

ಕೊರೋನಾದಿಂದ ಗುಣಮುಖರಾದವರು ಏಕಾಏಕಿ ರಕ್ತದಾನ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ೨೮ ದಿನಗಳವರೆಗೆ ಕಾಯಬೇಕಾಗುತ್ತದೆ. ಭಾರತದಲ್ಲಿ ಕೊರೋನಾದಿಂದ ಮೊದಲ ಬಾರಿಗೆ ರೋಗಿಯೊಬ್ಬರು ಗುಣಮುಖರಾಗಿದ್ದು ಮಾರ್ಚ್‌ ೮ರಂದು. ಗುಣಮುಖರಾದ ಬಳಿಕವೂ ನಿಗದಿತ ಅವಧಿಗೆ ಕ್ವಾರಂಟೈನ್‌ ಅವಧಿ ಮುಗಿದ ಬಳಿಕವಷ್ಟೇ ರಕ್ತದಾನ ಮಾಡಬಹುದು. ಕೊರೋನಾ ಚಿಕಿತ್ಸೆಯ ಉದ್ದೇಶಕ್ಕಾಗಿ ಸಂಗ್ರಹಿಸಲಾದ ರಕ್ತವನ್ನು ಕೊರೋನಾ ರೋಗಿಗಳಷ್ಟೇ ಬಳಸಬಹುದೇ ಹೊರತು ಬೇರೆ ರೋಗಿಗಳಿಗೆ ಕೊಡುವಂತಿಲ್ಲ. ಇಂತಹ ರಕ್ತವನ್ನು ಸಂಗ್ರಹಿಸಿಡುವ ಸಲುವಾಗಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಆದರೆ ಭಾರತದಲ್ಲಿ ಪ್ಲಾಸ್ಮಾ ಚಿಕಿತ್ಸೆ ಸಂಬಂಧ ಸರ್ಕಾರಗಳು ಇನ್ನಷ್ಟೇ ನಿಯಮಗಳನ್ನು ಅಂತಿಮಗೊಳಿಸಬೇಕಿರುವ ಕಾರಣ ಆ ನಿಯಮಗಳು ಘೋಷಣೆ ಆದ ಬಳಿಕವಷ್ಟೇ ಆರಂಭಿಸಬಹುದು.

ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುವುದಕ್ಕೆ ಐಸಿಎಂಆರ್‌ ಒಪ್ಪಿಗೆ ನೀಡಿದ್ದು ಕೇಂದ್ರ ಸರ್ಕಾರದಿಂದ ಅಂತಿಮ ಅನುಮತಿಯೊಂದಷ್ಟೇ ಬಾಕಿ ಇದೆ. ಈ ಅನುಮತಿ ಸಿಕ್ಕರೆ ಕೇರಳದಲ್ಲಿ ಇದರ ಪ್ರಾಯೋಗಿಕ ಜಾರಿ ಆಗಲಿದೆ.

LEAVE A REPLY

Please enter your comment!
Please enter your name here