ಕರ್ನಾಟಕ ಸರ್ಕಾರವು ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ರಾಜ್ಯ ತಾಂತ್ರಿಕ ಸಲಹಾ ಸಮಿತಿಯ 150ನೇ ಸಭೆಯಲ್ಲಿ ಕೋವಿಡ್ ಟೆಸ್ಟ್ ನಿಯಮಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಕೊರೊನಾ ಲಕ್ಷಣಗಳಿರುವವರಿಗೆ, ವಿದೇಶಕ್ಕೆ ತೆರಳುತ್ತಿರುವವರಿಗೆ, ವಿದೇಶದಿಂದ ಬಂದವರಿಗೆ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಯಾರಿಗೆ ಸೋಂಕು ತಪಾಸಣೆಯನ್ನು ಕಡ್ಡಾಯ ಮಾಡಬಾರದು ಎಂಬ ಬಗ್ಗೆಯೂ ಮಾರ್ಗದರ್ಶಿ ಸೂತ್ರಗಳು ಸ್ಪಷ್ಟನೆ ನೀಡಿವೆ. ಅದರಂತೆ ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭದಲ್ಲಿ ತುರ್ತುಸ್ಥಿತಿ ಇದ್ದರೆ ಕೊವಿಡ್ ಟೆಸ್ಟ್ ಕಾರಣಕ್ಕೆ ರೋಗಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಯಾವುದೇ ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷಾ ವ್ಯವಸ್ಥೆ ಇಲ್ಲದಿದ್ದರೆ ರೋಗಿಗಳನ್ನು ಬೇರೆ ಆರೋಗ್ಯ ಸಂಸ್ಥೆಗಳಿಗೆ ಶಿಫಾರಸು ಮಾಡಬಾರದು. ಶಸ್ತ್ರಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೇತರ ನೋವು ರಹಿತ ಚಿಕಿತ್ಸಾ ಪ್ರಕ್ರಿಯೆಗಳಿಗೆ ಒಳಪಡುವವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೆ ಟೆಸ್ಟ್ ಅಗತ್ಯವಿಲ್ಲ. ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳನ್ನು ವಾರಕ್ಕೆ ಒಂದಕ್ಕಿಂತ ಹೆಚ್ಚು ಸಲ ಪರೀಕ್ಷಿಸುವಂತಿಲ್ಲ ಎಂದು ತಿಳಿಸಲಾಗಿದೆ.
Purposive Testing Strategy for COVID-19 in Karnataka.@cmofKarnataka @mla_sudhakar @Comm_dhfwka @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/RIdPzMJaNM
— K'taka Health Dept (@DHFWKA) January 27, 2022
ಯಾರಿಗೆ ಪರೀಕ್ಷೆ ಬೇಕಿಲ್ಲ..?
ಸಮುದಾಯ ಮಟ್ಟದಲ್ಲಿ ರೋಗ ಲಕ್ಷಣ ಇಲ್ಲದಿರುವ ವ್ಯಕ್ತಿಗಳಿಗೆ ಟೆಸ್ಟ್ ಬೇಕಿಲ್ಲ. ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದು, ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದಲ್ಲಿ ಟೆಸ್ಟ್ ಅಗತ್ಯವಿಲ್ಲ. ಸರ್ಕಾರ ಸೂಚಿಸಿರುವ ರಾಜ್ಯಗಳನ್ನು ಹೊರತುಪಡಿಸಿ ಇತರೆ ರಾಜ್ಯಗಳಿಗೆ ಪ್ರಯಾಣ ಬೆಳಸುವವರಿಗೆ ಕೊರೋನಾ ಟೆಸ್ಟ್ ಕಡ್ಡಾಯವಿಲ್ಲ ಎಂದು ತಿಳಿಸಲಾಗಿದೆ.
ಪರೀಕ್ಷಾ ವಿಧಾನ ಬದಲಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕರ್ನಾಟಕ ಸರ್ಕಾರಕ್ಕೆ ಸಲಹೆ ಮಾಡಿತ್ತು. ಎಲ್ಲರಿಗೂ ಟೆಸ್ಟಿಂಗ್ ಮಾಡುವ ಅಗತ್ಯ ಇಲ್ಲ. ಬದಲಾದ ಕೊರೋನಾ ಸನ್ನಿವೇಶಕ್ಕೆ ತಕ್ಕಂತೆ ಪರೀಕ್ಷಾ ವಿಧಾನ ಬದಲಿಸಬೇಕೆಂದು ಸಲಹೆ ಮಾಡಿತ್ತು. ಐಸಿಎಂಆರ್ ನೀಡಿದ ಸಲಹೆಗಳಿಗೆ ಅನುಗುಣವಾಗಿ ಈಗ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗಿದೆ.