ಕೊರೋನಾ ಚಿಕಿತ್ಸೆಯಲ್ಲಿ ಮಹತ್ವದ ಮೈಲಿಗಲ್ಲು – ಈ ಔಷಧವೇ ಕೊರೋನಾಗೆ ರಾಮಬಾಣನಾ..? – ಅಮೆರಿಕದ ಘೋಷಣೆ

ಕೊರೋನಾ ರೋಗ ಚಿಕಿತ್ಸೆಯಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ರೆಮ್‌ಡೆಸಿವರ್‌‌ ಔಷಧವನ್ನು ತೆಗೆದುಕೊಂಡಿರುವ ಕೊರೋನಾ ಸೋಂಕಿತ ವ್ಯಕ್ತಿ ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ ಎಂದು ಅಮೆರಿಕ ಅಧಿಕೃತವಾಗಿ ಘೋಷಿಸಿದೆ.

ಅಮೆರಿಕದ ಅಲರ್ಜಿ ಮತ್ತು ಸೋಂಕು ರೋಗಗಳ ಮೇಲಿನ ರಾಷ್ಟ್ರೀಯ ಸಂಸ್ಥೆ ನಿರ್ದೇಶಕರೂ, ಅಮೆರಿಕದ ಆರೋಗ್ಯ ಸಲಹೆಗಾರರೂ ಮತ್ತು ಕೊರೋನಾ ತಡೆಗಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ನೇಮಿಸಿರುವ ಕಾರ್ಯಪಡೆಯ ಪ್ರಮುಖರೂ ಆಗಿರುವ ಆಂಟೋನಿ ಫೌಸಿ ಈ ಮಾಹಿತಿ ನೀಡಿದ್ದಾರೆ.

ಈ ಮೂಲಕ ರೆಮ್‌ಡೆಸಿವರ್‌‌ ಔಷಧವನ್ನು ಕೊರೋನಾ ಚಿಕಿತ್ಸೆಗೆ ಬಳಸಬಹುದೇ ಎಂಬುದನ್ನು ಪರೀಕ್ಷಿಸಲು ನಡೆಸಿದ್ದ ಪ್ರಯೋಗಕ್ಕೆ ಯಶ ಸಿಕ್ಕಿದೆ.

ಫೆಬ್ರವರಿ ೨೧ರಿಂದ ಜಗತ್ತಿನ ೧೦೬೩ ಕೊರೋನಾ ಸೋಂಕಿತರಿಗೆ ರೆಮ್‌ಡೆಸಿವರ್‌‌ ಔಷಧವನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ಐದು ದಿನಗಳ ಡೋಸೆಜ್‌ ತೆಗೆದುಕೊಂಡಿದ್ದ ಕೊರೋನಾ ಸೋಂಕಿತರು ಶೀಘ್ರವಾಗಿ ಗುಣಮುಖರಾಗಿದ್ದಾರೆ.

ಅಂದಹಾಗೆ ಈ ಔಷಧವನ್ನು ಆಫ್ರಿಕಾ ದೇಶದಲ್ಲಿ ಆತಂಕ ಸೃಷ್ಟಿಸಿದ್ದ ಎಬೋಲಾ ಜ್ವರದ ವಿರುದ್ಧದ ಚಿಕಿತ್ಸೆಗೂ ಕೊಡಲಾಗಿತ್ತು.

ಅಮೆರಿಕದ ಅಲರ್ಜಿ ಮತ್ತು ಸೋಂಕು ರೋಗಗಳ ಮೇಲಿನ ರಾಷ್ಟ್ರೀಯ ಸಂಸ್ಥೆಯ ಮಾಹಿತಿಯ ಪ್ರಕಾರ ರೆಮ್‌ಡೆಸಿವರ್‌‌ ಔಷಧವನ್ನು ಕೊಟ್ಟಿರುವ ಕೊರೋನಾ ರೋಗಿ ಉಳಿದ ಔಷಧಿಗಳನ್ನು ಪಡೆದಿರುವ ಕೊರೋನಾ ಸೋಂಕಿತರಿಗೆ ಹೋಲಿಸಿದರೆ ೪ ದಿನ ಮೊದಲೇ ಅಂದರೆ ೧೫ ದಿನದ ಬದಲು೧೧ ದಿನದಲ್ಲೇ ಗುಣಮುಖರಾಗಿದ್ದಾರೆ. ಅಂದರೆ ಶೇಕಡಾ ೩೦ರಷ್ಟು ಶೀಘ್ರವಾಗಿ ಗುಣಮುಖರಾಗಿದ್ದಾರೆ.

ಇನ್ನು ರೆಮ್‌ಡೆಸಿವರ್‌ ಔಷಧ ಸೇವಿಸಿದ ಕೊರೋನಾ ರೋಗಿಗಳಲ್ಲಿ ಸಾವಿನ ಸಂಖ್ಯೆ ಶೇಕಡಾ ೮ರಷ್ಟಿದ್ದು ಉಳಿದ ಔಷಧಗಳ ಚಿಕಿತ್ಸೆ ವೇಳೆ ಶೇಕಡಾ ೧೧.೬ರಷ್ಟಿದೆ.

ಜಪಾನ್‌ನ ಯೊಕೋಹಾಮಾದಲ್ಲಿ ಡೈಮಂಡ್‌ ಪ್ರಿನ್ಸ್‌ ಹಡಗಿನಲ್ಲಿದ್ದ ಕೊರೋನಾ ಸೋಂಕಿತನ ಮೇಲೆ ಮೊದಲ ಪ್ರಾಯೋಗಿಕ ಪರೀಕ್ಷೆ ಆಗಿದೆ.

ರೆಮ್‌ಡೆಸಿವರ್‌ ಔಷಧದ ಮೇಲೆ ಅಮೆರಿಕದ ಔಷಧ ತಯಾರಿಕಾ ಕಂಪನಿ ಗಿಲೀಡ್ ಹಕ್ಕುಸ್ವಾಮ್ಯನ್ನು ಹೊಂದಿದ್ದು, ಪ್ರಾಯೋಗಿಕ ಪರೀಕ್ಷೆ ಯಶದ ಸುದ್ದಿಯ ಬೆನ್ನಲ್ಲೇ ಕಂಪನಿಯ ಷೇರುಗಳ ಮೌಲ್ಯ ಏರಿಕೆ ಆಗಿದೆ.

LEAVE A REPLY

Please enter your comment!
Please enter your name here