ಕೊರೋನಾ ಕೂಪ ಗುಜರಾತ್‌ನಲ್ಲಿ ಮತ್ತೆ ಆಪರೇಷನ್‌ ಕಮಲ-ಸೋನಿಯಾ, ಡಿಕೆಶಿ ವಿರುದ್ಧ ಸೇಡುತೀರಿಸಿಕೊಳ್ತಾರಾ ಶಾ..?

ಅತ್ತ ನಿಸರ್ಗ ಚಂಡಮಾರುತ ಗುಜರಾತ್‌ನ್ನು ಹಾದುಹೋಗುತ್ತಿದ್ದಂತೆ ಇತ್ತ ಆ ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲದ ಅಲೆ ಎದ್ದಿದೆ. ಗುಜರಾತ್‌ನಲ್ಲಿ ಆಪರೇಷನ್‌ ಕಮಲ ಹೊಸತೇನಲ್ಲ. ಬೆಳಗ್ಗೆದ್ದಾಗ ಕಾಂಗ್ರೆಸ್‌ನ ಯಾವ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿಯ ಅಪ್ಪುಗೆಯಲ್ಲಿ ಬಂಧಿಯಾಗಿರುತ್ತಾರೆ ಎನ್ನುವುದು ಬಹುಶಃ ಕಾಂಗ್ರೆಸ್‌ ನಾಯಕರಿಗೂ ಗೊತ್ತಿರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಆಪರೇಷನ್‌ ಕಮಲ ದಿನಚರಿ ಆಗಿಬಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ ಅಕ್ಷರಶಃ ಕೊರೋನಾ ಕೂಪವಾಗಿಬಿಟ್ಟಿದೆ. ಇಡೀ ದೇಶದಲ್ಲಿ ಕೊರೋನಾ ಕೇಸ್‌ನಲ್ಲಿ ಗುಜರಾತ್‌ ನಾಲ್ಕನೇಯ ಸ್ಥಾನದಲ್ಲಿದ್ದರೆ, ಕೊರೋನಾ ಸಾವಿನ ವೇಗದಲ್ಲಿ ಮಹಾರಾಷ್ಟ್ರ ಬಳಿಕದ ಎರಡನೇ ಸ್ಥಾನ ಗುಜರಾತ್‌ನದ್ದು. ಇಂತಹ ಪರಿಸ್ಥಿತಿಯಲ್ಲೂ ಕಾಂಗ್ರೆಸ್‌ನ ಇಬ್ಬರು ಶಾಸಕರು ಲಜ್ಜೆಗೆಟ್ಟು ರಾಜೀನಾಮೆ ಕೊಟ್ಟಿದ್ದಾರೆ.

ಈ ಪೀಠಿಕೆಗೆ ಇರುವ ಹಿನ್ನೆಲೆ ಮೂರು ವರ್ಷದ ಹಿಂದಿನದ್ದು. 2017ರ ಮಾರ್ಚ್‌ನಲ್ಲಿ ಇಡೀ ರಾಷ್ಟ್ರರಾಜಕಾರಣದಲ್ಲೇ ಸದ್ದು ಮಾಡಿದ್ದ ಚುನಾವಣೆ ಅದು. ಅದು ಕೇವಲ ಚುನಾವಣೆ ಅಗಿರಲಿಲ್ಲ, ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಮದಗಜಗಳ ನೇರ ನೇರ ಕಾದಾಟವಾಗಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪರಮಾಪ್ತರಾದ ಅಹ್ಮದ್‌ ಪಟೇಲ್‌ ರಾಜಕೀಯ ಜೀವನದ ಉಳಿವಿಗಾಗಿ ಗುದ್ದಾಡಿದರೆ ಅತ್ತ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್‌ ಶಾಗೆ ಸೋನಿಯಾ ಆಪ್ತನ ರಾಜಕೀಯ ಜೀವನಕ್ಕೆ ಶಾಶ್ವತ ಪೂರ್ಣ ವಿರಾಮ ಇಡಲೇಬೇಕೆಂಬ ಜಿದ್ದು.

ಈ ಜಿದ್ದಿಗೆ ವೇದಿಕೆ ಆಗಿದ್ದು 2017ರಲ್ಲಿ ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ. ಆರು ಶಾಸಕರ ಸರಣಿ ರಾಜೀನಾಮೆಯಿಂದ ಕಂಗೆಟ್ಟ ಕಾಂಗ್ರೆಸ್‌ ತನ್ನ ಅಳಿದುಳಿದ ಶಾಸಕರನ್ನು ನೇರವಾಗಿ ಸ್ಥಳಾಂತರ ಮಾಡಿದ್ದು ಬೆಂಗಳೂರಿನ ಹೊರವಲಯ ಬಿಡದಿಯಲ್ಲಿರುವ ಈಗಲ್‌ ಟನ್‌ ರೆಸಾರ್ಟ್‌ಗೆ. ಶಾಸಕರಿಗೆ ಬೆಂಗಾವಲಾಗಿ ನಿಂತು ಬಂಡೆ ಎನಿಸಿಕೊಂಡಿದ್ದು ಡಿಕೆ ಶಿವಕುಮಾರ್‌. ಆ ಶಾಸಕರು ರೆಸಾರ್ಟ್‌ಗೆ ಬೀಡು ಬಿಟ್ಟ ದಿನವೇ ಆದಾಯ ತೆರಿಗೆ ದಾಳಿ ನಡೆಯಿತು. ಜಾರಿ ನಿರ್ದೇಶನಾಲದಿಂದ ಕೇಸ್‌ ದಾಖಲಾಗಿ ವಿಚಾರಣೆಗಾಗಿ ದೆಹಲಿಗೆ ಹೋದ ಡಿಕೆಶಿ ಬಂಧನಕ್ಕೊಳಗಾಗಿ ತಿಹಾರ್‌ ಜೈಲಿನಲ್ಲಿ ಕೈದಿಯಾದರು. ಕನಕಪುರದ ಈ ಶಾಸಕನಿಗೆ ಬಂಡೆ ಎಂಬ ಅನ್ವರ್ಥನಾಮವನ್ನು ತಂದುಕೊಟ್ಟ, ಜೈಲಿಗಟ್ಟಿಸಲು ಪ್ರೇರಣೆ-ಪ್ರಚೋದಕವಾದ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧನವಾದ ಮತ ಕದನವದು.

ಆದರೆ ಈ ಯುದ್ಧದಲ್ಲಿ ಅಮಿತ್‌ ಶಾಗೆ ಭಾರೀ ಮುಖಭಂಗವಾಯಿತು. ಚುನಾವಣೆ ನಡೆದ ಆ ದಿನದಂದು ಅಗತ್ಯವಿದ್ದ 44 ಮತಗಳನ್ನಷ್ಟೇ ಪಡೆದು ಅಹ್ಮದ್‌ ಪಟೇಲ್‌ ಕೂದಲೆಳೆ ಅಂತರದಲ್ಲಿ ಗೆದ್ದು ಮತ್ತೆ ರಾಜ್ಯಸಭೆ ಪ್ರವೇಶಿಸಿದರು. ಚುನಾವಣೆ ವೇಳೆ ಬಂಡೆದಿದ್ದ ಇಬ್ಬರು ಕಾಂಗ್ರೆಸ್‌ ಶಾಸಕರು ಗೌಪ್ಯ ಮತದಾನದ ವೇಳೆ ತಮ್ಮ ಮತಪತ್ರವನ್ನು ಪ್ರದರ್ಶನ ಮಾಡಿದ್ದರಿಂದಾಗಿ ಬಿಜೆಪಿ ಪರ ಅವರಿಬ್ಬರು ಚಲಾಯಿಸಿದ ಮತಗಳು ಅಸಿಂಧುವಾದವು. ಚುನಾವಣಾ ಆಯೋಗದ ಎದುರು ಅವತ್ತು ಬಿಜೆಪಿ ಮತ್ತು ಕಾಂಗ್ರೆಸ್‌ ದೂರು-ಪ್ರತಿ ದೂರುಗಳ ಪಟ್ಟಿಯನ್ನು ಸಲ್ಲಿಸಿದ್ದರಿಂದ ಚುನಾವಣೆ ಇನ್ನಷ್ಟು ರಣರೋಚಕವಾಯಿತು. ಆ ಫಲಿತಾಂಶ ಹೊರಬೀಳುವಷ್ಟೊತ್ತಿಗೆ ಮಧ್ಯರಾತ್ರಿ 3.30ಕ್ಕಾಗಿತ್ತು.

ಈಗ ಮತ್ತೆ ರಾಜ್ಯಸಭಾ ಚುನಾವಣೆ ಬಂದಿದೆ. ಜೂನ್‌ 19ರಂದು ರಾಜ್ಯಸಭೆಗೆ ಗುಜರಾತ್‌ ವಿಧಾನಸಭೆಯಿಂದ ಮೂವರು ಆಯ್ಕೆ ಆಗಬೇಕಿದೆ. ಮಾರ್ಚ್‌ 26ಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಮುಂದೂಡಿಕೆ ಆಗಿತ್ತು. ಮಾರ್ಚ್‌ 26ರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಶಾಸಕರನ್ನು ತನ್ನ ಆಡಳಿತವಿರುವ ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಸ್ಥಳಾಂತರಿಸಿತ್ತು.

ಚುನಾವಣೆಗೂ ಮೊದಲೇ ಮಾರ್ಚ್‌ನಲ್ಲಿ ಐವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದ್ದರೆ ಗುರುವಾರ ಇನ್ನಿಬ್ಬರು ಶಾಸಕ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ. ಕರ್ಜಾನ್‌ ಶಾಸಕ ಅಕ್ಷಯ್‌ ಪಟೇಲ್‌ ಮತ್ತು ಕರ್ಪಾದಾ ಶಾಸಕ ಜಿತು ಚೌಧರಿ.

ಈ ರಾಜೀನಾಮೆಯೊಂದಿಗೆ ಗುಜರಾತ್‌ ಕಾಂಗ್ರೆಸ್‌ನ ಬಲ 66ಕ್ಕೆ ಇಳಿದಿದೆ. ಬಿಜೆಪಿ ಬಲ 103. ಸದ್ಯದ ಲೆಕ್ಕಾಚಾರ ಪ್ರಕಾರ ರಾಜ್ಯಸಭೆಗೆ ಆಯ್ಕೆ ಆಗಲು ಪ್ರತಿಯೊಬ್ಬ ಅಭ್ಯರ್ಥಿಗೆ 35 ಶಾಸಕರ ಬೆಂಬಲ ಅಗತ್ಯ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಅನಾಯಾಸವಾಗಿ ರಾಜ್ಯಸಭೆ ಆಯ್ಕೆ ಆಗಲಿದ್ದಾರೆ. ಮೂರನೇ ಅಭ್ಯರ್ಥಿಯೂ ಬಿಜೆಪಿಯಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಶಕ್ತಿಸಿನ್ಹಾ ಗೋಯಲ್‌ ಮತ್ತು ಭರತ್‌ ಸೋಲಂಕಿ ಅಭ್ಯರ್ಥಿ ಆಗಿದ್ದು ಇಬ್ಬರಲ್ಲಿ ಒಬ್ಬರಿಗೆ ಸೋಲು ಕಟ್ಟಿಟ್ಟ ಬುತ್ತಿ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ ಇದ್ದರೂ ಗುಜರಾತ್‌ನಲ್ಲಿ ಬಿಜೆಪಿಯ ಬೆನ್ನಿಗಿದೆ ಎನ್‌ಸಿಪಿ. ಹೀಗಾಗಿ ಗಡಿಯಾರ ನಂಬಿಕೊಂಡು ಕೂರುವ ಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ.

ಈ ಹಿಂದೆ ನಡೆದಿದ್ದ ಆಪರೇಷನ್‌ ಕಮಲದಲ್ಲಿ ಬಿಜೆಪಿಗೆ ಜಿಗಿದಿದ್ದ ಗುಜರಾತ್‌ನ ಕಾಂಗ್ರೆಸ್‌ ಪಕ್ಷಾಂತರಿಗಳಿಗೆ ಉಪ ಚುನಾವಣೆಯಲ್ಲಿ ಹೀನಾಯ ಸೋಲಾಗಿತ್ತು. ಆದರೆ ಮತ್ತೆ ರಾಜ್ಯಸಭಾ ಚುನಾವಣೆ ಬಂದಿರುವ ಕಾರಣ ಕಾಂಗ್ರೆಸ್‌ ಬುಟ್ಟಿಯನ್ನು ಆದಷ್ಟು ಖಾಲಿ ಮಾಡಿಸುವುದು ಅಮಿತ್‌ ಶಾ ಲೆಕ್ಕಾಚಾರ. ಕಾಂಗ್ರೆಸ್‌ ಶಾಸಕರು ರಾಜೀನಾಮೆ ಕೊಟ್ಟಷ್ಟು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಅಗತ್ಯ ಮತ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಈ ಮೂಲಕ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು ಎಂಬುದು ಅಮಿತ್‌ ಶಾ ತಂತ್ರ.

ಸದ್ಯಕ್ಕೆ ಕೊರೋನಾ ಮಹಾಮಾರಿ ಅಟ್ಟಹಾಸ ಕಡಿಮೆ ಆಗಿಲ್ಲ, ಹಾಗೆಯೇ ಆಪರೇಷನ್‌ ಕಮಲ ಕೂಡಾ. ಭಾರತದಲ್ಲಿ ಕೊರೋನಾ ತನ್ನ ಪಾದವನ್ನಿಟ್ಟು ಸಂಚರಿಸಲು ಶುರು ಮಾಡುವ ವೇಳೆ ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ನೇತೃತ್ವದ ಸರ್ಕಾರವನ್ನು ಬೀಳಿಸುವುದರಲ್ಲೇ ನಿರತವಾಗಿದ್ದ ಬಿಜೆಪಿ ನಾಯಕರು ಗುಜರಾತ್‌ನಲ್ಲಿ ತಮ್ಮ ಸಾಹಸವನ್ನು ಮುಂದುವರಿಸಿದ್ದಾರೆ.

ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 18,584. ಕೊರೋನಾಗೆ ಸತ್ತವರ ಸಂಖ್ಯೆ 1,155.

ಮೂರು ವರ್ಷಗಳ ಹಿಂದಿನ ಸೋನಿಯಾ ಗಾಂಧಿ ಮತ್ತು ಡಿಕೆಶಿ ಎದುರಲ್ಲಿ ಅನುಭವಿಸಿದ್ದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದು ಅಮಿತ್‌ ಶಾಗೆ ಸದ್ಯಕ್ಕೆ ಅನಿವಾರ್ಯವಾಗಿದೆ.

LEAVE A REPLY

Please enter your comment!
Please enter your name here