ಕೊನೆಗೂ ರಾಷ್ಟ್ರಕವಿ ಅವರ ಪದ್ಮವಿಭೂಷಣ ಪದಕಗಳ ಕಳ್ಳರಿಗೆ ಶಿಕ್ಷೆ..!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ರಾಷ್ಟ್ರಕವಿ ಕುವೆಂಪುರವರ ಕವಿಮನೆ ಕುಪ್ಪಳ್ಳಿಯಲ್ಲಿ ಕಳ್ಳತನ ಮಾಡಿದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕುಪ್ಪಳ್ಳಿ ಸಮೀಪದ ರಾಷ್ಟ್ರಕವಿ ಕುವೆಂಪುರವರ ಕವಿಮನೆಯಲ್ಲಿ 2015 ರ ನ. 23 ರಂದು ಕಳ್ಳತನ ನಡೆದಿದ್ದು, ಇಡೀ ದೇಶದಲ್ಲಿ ಸುದ್ದಿಯಾಗಿತ್ತು.

ರಾಷ್ಟ್ರಕವಿ ಕುವೆಂಪು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕೇಂದ್ರ ಸರ್ಕಾರ ನೀಡಿದ್ದ ಪದಕಗಳನ್ನು ಆರೋಪಿಗಳು ಕಳುವು ಮಾಡಿದ್ದರು. ಪದ್ಮವಿಭೂಷಣ ಪದಕ ಸೇರಿದಂತೆ ಹಲವಾರು ಪದಕಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಒಂದು ವಾರದಲ್ಲಿಯೇ ಪತ್ತೆ ಹಚ್ಚಿ ಬಂಧಿಸಲಾಗಿತ್ತು. ಆದರೆ ಕಳೆದು ಹೋಗಿದ್ದ ಪದ್ಮವಿಭೂಷಣ ಪದಕ ಮಾತ್ರ ಇನ್ನೂ ದೊರೆತಿಲ್ಲ.

ಈ ವೇಳೆ ದಾವಣಗೆರೆ ಮೂಲದ 1ನೇ ಆರೋಪಿ ರೇವಣ ಸಿದ್ದಪ್ಪ (58), ಮತ್ತು ಕವಿಮನೆಯಲ್ಲಿ ಮಾರ್ಗದರ್ಶಕನಾಗಿ ಕೆಲಸ ಮಾಡುತ್ತಿದ್ದ ಕೊಪ್ಪ ಗಡಿಯ ಗಡಿಕಲ್ಲು ನಿವಾಸಿ 2 ನೇ ಆರೋಪಿ ಅಂಜನಪ್ಪ ( 45) ನನ್ನು ಹಾಗೂ ಪದಕಗಳನ್ನು ಖರೀದಿಸಿದ್ದ ಪ್ರಕಾಶ್ (35) ಎಂಬ ಮೂವರನ್ನು ಬಂಧಿಸಲಾಗಿತ್ತು. ಈತ ಕವಿ ಮನೆಯನ್ನು ಮತ್ತು ಪದಕಗಳನ್ನು ತೋರಿಸಿ ಕದಿಯಲು ಸೂಚಿಸಿದ್ದ.

2015 ರ ನ. 23 ರಂದು ರಾತ್ರಿ 6.30 ರಿಂದ 8.30 ಗಂಟೆ ಸಮಯದ ಅವಧಿಯಲ್ಲಿ ಕುಪ್ಪಳ್ಳಿಯಲ್ಲಿರುವ ಕವಿಮನೆ ಮಹಡಿಗೆ ಏಣಿಯ ಮುಖಾಂತರ ಹತ್ತಿ ವರಾಂಡದಲ್ಲಿ ಒಳಗೆ ಇಳಿದು ಪುಸ್ತಕ ಮಾರಾಟ ಕೊಠಡಿಯ‌ ಬೀಗವನ್ನು ಒಡೆದು ಕೊಠಡಿಯ ಒಳಗಿದ್ದ ಟೇಬಲ್ ನಲ್ಲಿದ್ದ 1000 ರೂ. ನಗದು ಹಣವನ್ನು ಕಳ್ಳತನ ಮಾಡಿದ್ದರು.

ಬಳಿಕ 2ನೇ ಮಹಡಿಗೆ ಹೋಗಿ ಅಲ್ಲಿಂದ ಪದಕ ಹಾಗೂ ಪ್ರಶಸ್ತಿಗಳನ್ನು ಇಟ್ಟಿದ್ದ ಗಾಜಿನ ಫ್ರೆಮ್ ಅನ್ನು ಒಡೆದು ಅದರಲ್ಲಿದ್ದ ಮೌಲ್ಯ ಕಟ್ಟಲಾಗದ ಮೈಸೂರು ವಿಶ್ವವಿದ್ಯಾನಿಲಯ ನೀಡಿದ್ದ ಎರಡು ಪದಕಗಳನ್ನು ಹಾಗೂ ಪದ್ಮವಿಭೂಷಣ ಪದಕಗಳನ್ನು ಕಳ್ಳತನ ಮಾಡಿದ್ದರು. ಬಳಿಕ ತಾನು ಕೃತ್ಯವೆಸಗಿದ ದೃಶ್ಯವೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗದಂತೆ ಅಲ್ಲಿ ಅಳವಡಿಸಿದ 6 ಸಿಸಿ ಕ್ಯಾಮೆರಾಗಳನ್ನು ಮತ್ತು ಮಾನಿಟರ್ ಗಳನ್ನು ರಾಡ್ ನಿಂದ ಒಡೆದು ಪುಡಿ ಮಾಡಿ ಸುಮಾರು 5 ಸಾವಿರ ರೂ. ಗಳಷ್ಟು ನಷ್ಟವನ್ನುಂಟು ಮಾಡಿ ಸಾಕ್ಷ್ಯಗಳನ್ನು ನಾಶ ಪಡಿಸಿದ್ದರು.

ಅಲ್ಲದೇ ಆರೋಪಿ ಕಳ್ಳತನ ಮಾಡಿದ್ದ ಪದಕದ ಫ್ರೇಮ್ ಅನ್ನು 1ನೇ ಆರೋಪಿ ಇಟ್ಟುಕೊಂಡು ಕಳವು ಮಾಡಿದ ಪದಕಗಳಲ್ಲಿ ಒಂದನ್ನು 2ನೇ ಆರೋಪಿಗೆ ಮತ್ತು ಇನ್ನೊಂದನ್ನು 3ನೇ ಆರೋಪಿ ಪ್ರಕಾಶ್ ಗೆ ಮಾರಾಟ ಮಾಡಿದ್ದರು. 3ನೇ ಆರೋಪಿ ಮಾಲು ಕಳ್ಳತನದ ಮಾಲೆಂದು ಗೊತ್ತಿದ್ದರೂ ಅದನ್ನು ಖರೀದಿಸಿದ್ದ. ಕಳ್ಳತನದ ಬಗ್ಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಡಿ.ಎಂ ಮನುದೇವ್ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಅಂದು ದೂರು ನೀಡಿದ್ದರು.

1ನೇ ಆರೋಪಿ ರೇವಣ ಸಿದ್ದಪ್ಪ ಈತ ವಿಚಾರಣಾ ಹಂತದಲ್ಲಿಯೇ ಮೃತ ಪಟ್ಟಿದ್ದು, 2 ಮತ್ತು 3ನೇ ಆರೋಪಿತರ ವಿರುದ್ಧ ಸಾಕ್ಷಿದಾರರ ವಿಚಾರಣೆ ನಡೆದು ವಾದ ವಿವಾದಗಳನ್ನು ಆಲಿಸಿ ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾಂಜಲಿ ಅವರು ಇದೀಗ ಆರೋಪಿಗಳಿಗೆ 2 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣ ಕಟ್ಟದಿದ್ದರೆ 6 ತಿಂಗಳ ಕಾಲ ಹೆಚ್ಚುವರಿ ಕಾರಾಗೃಹ ವಾಸ ಅನುಭವಿಸಲು ಆದೇಶಿಸಿದ್ದಾರೆ. ಒಟ್ಟಿನಲ್ಲಿ ಮಹತ್ವದ ಪ್ರಕರಣ ಇದೀಗ ಅಂತ್ಯ ಕಂಡಂತಾಗಿದೆ.

LEAVE A REPLY

Please enter your comment!
Please enter your name here