ಬೆಂಗಳೂರು ಪೋಲೀಸ್‌ ಬಲೆಯಲ್ಲಿ ಭೂಗತ ಪಾತಕಿ ರವಿ ಪೂಜಾರಿ

ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಸೋಮವಾರ ಮುಂಜಾನೆ ಬೆಂಗಳೂರಿಗೆ ಕರೆತರಲಾಗಿದೆ. ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಪೊಲೀಸ್ ತಂಡವು ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ನಿಂದ ಬೆಂಗಳೂರಿಗೆ ಕರೆತಂದಿದ್ದಾರೆ.

ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಆತನ ಮೇಲೆ ಕೊಲೆ,ಸುಲಿಗೆಯಂತಹ 200 ಕ್ಕೂ ಹೆಚ್ಚು ಕೇಸುಗಳಿದ್ದು ಪೊಲೀಸರಿಗೆ ಬೇಕಾಗಿದ್ದ ರವಿ ಪೂಜಾರಿ 1990 ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.ಕಳೆದ ವರ್ಷ 2019ರ ಜನವರಿ 19ರಂದು ಪೂಜಾರಿಯನ್ನು ಸೆನೆಗಲ್ ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದರು.

ನಂತರ ಆಫ್ರಿಕಾದ ಸೆನೆಗಲ್ ನಿಂದ ಈತನನ್ನು ಕರೆತರಲು ರಾಜ್ಯ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳು ಕಳೆದ ಒಂದು ವರ್ಷದಿಂದ ಸತತ ಪ್ರಯತ್ನ ಮಾಡಿದ್ದವು.

90ರ ದಶಕದಲ್ಲಿ ಮುಂಬೈಯ ಗ್ಯಾಂಗ್ ಸ್ಟಾರ್ ಗಳಲ್ಲಿ ಒಬ್ಬನಾದ ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ಜೊತೆ ಗುರುತಿಸಿಕೊಂಡಿದ್ದ ರವಿ ಪೂಜಾರಿ ಸ್ವಲ್ಪ ಸಮಯದ ನಂತರ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಸುಮಾರು 26 ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

LEAVE A REPLY

Please enter your comment!
Please enter your name here