ಕೈಗಾರಿಕೆಗಳಿಗೆ ಹಣಕಾಸು ನೆರವು ಕೊಡ್ತಾರಾ ಪ್ರಧಾನಿ ನರೇಂದ್ರ ಮೋದಿ..?

ಕೊರೋನಾ ತಡೆಗಾಗಿ ಒಟ್ಟು 40 ದಿನಗಳ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಉದ್ದಿಮೆಗಳಿಗೆ ಕೆಲವೊಂದಿಷ್ಟು ಹಣಕಾಸು ನೆರವನ್ನು ಪ್ರಕಟಿಸುವ ನಿರೀಕ್ಷೆ ಇದೆ.

ವಿಶೇಷವಾಗಿ ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ 15,000 ಕೋಟಿ ರೂಪಾಯಿ ಮೊತ್ತದಷ್ಟು ಸಾಲ ಗ್ಯಾರಂಟಿ ಯೋಜನೆ ಪ್ರಕಟಿಸುವ ನಿರೀಕ್ಷೆ ಇದ್ದು, ಇದರಿಂದ ಕಾರ್ಖಾನೆಗಳ ಚಟುವಟಿಕೆ ಮುಂದುವರಿಕೆಗೆ ಹಣಕಾಸಿನ ಕೊರತೆಯನ್ನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ.

ಏಪ್ರಿಲ್‌ ೧೫ರಿಂದ ಎರಡನೇ ಹಂತದ ಲಾಕ್‌ಡೌನ್‌ ಮುಂದುವರಿಸಿ ಮಾರ್ಗಸೂಚಿ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊರೋನಾ ಇಲ್ಲದ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳು ಮತ್ತು ರಸ್ತೆ, ನೀರಾವರಿ, ಕಟ್ಟಡ ನಿರ್ಮಾಣ ಕಾಮಗಾರಿ, ಐಟಿ-ಬಿಟಿ ಕಂಪನಿಗಳಿಗೆ ಕೆಲಸ ಆರಂಭಿಸಲು ಅನುಮತಿ ನೀಡಿದೆ. ಏಪ್ರಿಲ್‌ 20ರಿಂದ ಈ ವಿನಾಯ್ತಿ ಅನ್ವಯವಾಗಲಿದೆ.

ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳು ಸ್ತಬ್ಧವಾಗಿರುವುದು ಮಾತ್ರವಲ್ಲದೇ ಸೇವಾ ಮತ್ತು ರಫ್ತು ವಲಯ ಕೂಡಾ ಸಂಕಷ್ಟಕ್ಕೆ ಈಡಾಗಿದೆ. ಹೋಟೆಲ್‌ ಮತ್ತು ಪ್ರವಾಸೋದ್ಯಮ, ವಿಮಾನಯಾನ ನೆಲಕಚ್ಚಿದೆ.

ಉದ್ಯಮದಾರರು ಒಟ್ಟು ಜಿಡಿಪಿಯ ಶೇಕಡಾ 3-5 ರಷ್ಟಾದರೂ ಹಣಕಾಸು ನೆರವನ್ನು ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮೊದಲ ಹಂತದ ಹಣಕಾಸು ನೆರವಲ್ಲಿ ಕೃಷಿಕರು, ಕಾರ್ಮಿಕರು, ಬಡವರಿಗಾಗಿ 1.7 ಲಕ್ಷ ಕೋಟಿ ರೂಪಾಯಿ ಮೊತ್ತದ ನೆರವನ್ನು ಘೋಷಿಸಲಾಗಿತ್ತು.

LEAVE A REPLY

Please enter your comment!
Please enter your name here