ನಮ್ಮ ವೃತ್ತಿ ಜೀವನದಲ್ಲಿ ಕೆಲವರು ಆರಂಭದಿಂದ ಕೊನೆಯವರೆಗೂ ಸಹೋದ್ಯೋಗಿಗಳಾಗಿಯೇ ಉಳಿಯುತ್ತಾರೆ. ಇನ್ನೂ ಕೆಲವರು ಸಹೋದ್ಯೋಗಿಗಳಾಗಿ ಅ಼ಷ್ಟೇ ಉಳಿಯದೇ ನಮಗೆ ತೀರಾ ಆತ್ಮೀಯರಾಗಿ ಬಿಡುತ್ತಾರೆ. ಕೆಲವೊಮ್ಮೆ ಈ ಆತ್ಮೀಯತೆಯನ್ನು ದುರುಪಯೋಗಪಡಿಸಿಕೊಳ್ಳುವವರೂ ಇರುತ್ತಾರೆ. ಆದರೆ ನಾವು ಇದನ್ನು ಅಷ್ಟಾಗಿ ಸೀರಿಯಸ್‌ ತೆಗೆದುಕೊಂಡಿರುವುದಿಲ್ಲ.

ಅಷ್ಟಕ್ಕೇ ಸುಮ್ಮನಾಗದೇ ಕೆಲವರು ಮಿತಿಮೀರಿ ನಾವು ಕೊಟ್ಟ ಸಲುಗೆಯನ್ನೇ ತಪ್ಪಾಗಿ ಗ್ರಹಿಸಿಕೊಂಡು ಅತಿರೇಕವಾಗಿ ವರ್ತಿಸುತ್ತಾರೆ ಆ ಸಂಧರ್ಭದಲ್ಲಿ ನಮಗೆ ಅದು ಕಿರಿಕಿರಿ ಅನಿಸಿದರೂ ಆತ್ಮೀಯರು ಎನ್ನುವ ಕಾರಣಕ್ಕೆ ಅವರ ವರ್ತನೆ ಸರಿಯೋ- ತಪ್ಪೋ ಎಂದು ನಿರ್ಧಾರ ಮಾಡಲು ಕಷ್ಟವಾಗುತ್ತದೆ.

ಈ ತರಹದ ಘಟನೆಗಳು ಪದೇ ಪದೇ ನಡೆದಾಗ ಇದು ದೌರ್ಜನ್ಯವೆಂದು ತೀರಾ ನಿಧಾನವಾಗಿ ಅನಿಸಲಾರಂಭಿಸುತ್ತದೆ. ಆಗ ಕಾಲ ಮಿಂಚಿ ಹೋಗಿರುತ್ತದೆ. ಇಂತಹ ವಿಷಯಗಳನ್ನು ಯಾರಿಗಾದರೂ ಹೇಳಲೋ ಬೇಡವೋ- ಹೇಳಿದರೆ ನನ್ನನ್ನೇ ತಪ್ಪಾಗಿ ತಿಳಿದುಕೊಳ್ಳುತ್ತಾರೋ ಎಂಬ ಭಯ. ಇನ್ನೂ ಕೆಲವೊಂದು ಸಂಧರ್ಭದಲ್ಲಿ ದೌರ್ಜನ್ಯ ನೀಡುತ್ತಿರುವ ವ್ಯಕ್ತಿ ತನಗಿಂತ ಪ್ರತಿಷ್ಟಿತ ಸ್ಥಾನದಲ್ಲೋ ಅಥವಾ ತೀರಾ ಪ್ರಭಾವಿ ವ್ಯಕ್ತಿ ಆಗಿದ್ದಲ್ಲಿ ಇಂತಹ ವಿಷಯಗಳನ್ನು ಹೇಳಲು ಹಿಂಜರಿಯುತ್ತಾರೆ. 

ಇಂತಹ ಸಂಧರ್ಭ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಎದುರಿಸಿರುತ್ತಾರೆ. ಹಾಗಾದರೆ ಇಂತಹ ಸನ್ನಿವೇಷಗಳನ್ನು ನಾವು ಹೇಗೆ ಎದುರಿಸಬೇಕು, ನಮ್ಮ ಜೊತೆಯಲ್ಲಿರುವವರಿಗೆ ಈ ರೀತಿಯ ಸನ್ನಿವೇಷಗಳಲ್ಲಿ ನಾವು ಹೇಗೆ ಧೈರ್ಯ ತುಂಬುವುದು ಇವುಗಳನ್ನೆಲ್ಲಾ ತಿಳಿಸುವ ಸಣ್ಣ ಪ್ರಯತ್ನ ನಮ್ಮದು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎಂದರೆ

ಒಬ್ಬ ವ್ಯಕ್ತಿಯ ಯಾವುದೇ ವ್ಯಕ್ತಿಯ ವರ್ತನೆ ಅಥವಾ ನಡವಳಿಕೆ ಲೈಂಗಿಕ ಸ್ವರೂಪದ್ದಾಗಿದ್ದು ಅದು ಇನ್ನೊಬ್ಬರಿಗೆ ಅಸಭ್ಯವೆಂದು ಕಂಡುಬಂದಲ್ಲಿ ಅದನ್ನು ಲೈಂಗಿಕ ಕಿರುಕುಳವೆಂದು ಪರಿಗಣಿಸಬಹುದು.

ಲೈಂಗಿಕ ಕಿರುಕುಳದ ಉದಾಹರಣೆಗಳು –

* ಉದ್ಯೋಗದಲ್ಲಿ ಬಡ್ತಿ ಬೇಕಾದಲ್ಲಿ ತನ್ನನ್ನು ಮೆಚ್ಚಿಸಬೇಕೆಂದು ಸೂಚನೆ ಕೊಡುವುದು

* ಕೆಲಸ ಮಾಡುವಾಗ ಸೂಚನೆ ಕೊಡುವ ನೆಪದಲ್ಲಿ ಬೇಕೆಂದೆ ಮೈಕೈ ಸ್ಪರ್ಶಿಸುವುದು

* ಮಾತನಾಡುವಾಗ ಅಸಭ್ಯ ಸಂಜ್ಞೆಗಳನ್ನು ಮಾಡುವುದು

* ಅಶ್ಲೀಲ ಹಾಸ್ಯ ಚಟಾಕಿಗಳನ್ನು ಹಾರಿಸುವುದರ ಮೂಲಕ ಇತರರೆದುರಿಗೆ ಸಂಕೋಚಪಡುವಂತೆ ಮಾಡುವುದು

* ತನ್ನ ಲೈಂಗಿಕ ಆಸೆಗಳನ್ನು ಪೂರೈಸದಿದ್ದಲ್ಲಿ ವರ್ಗಾವಣೆ ಮಾಡುವುದಾಗಿ ಅಥವಾ ಕೆಲಸದಿಂದ ತೆಗೆಯುವುದಾಗಿ ಹೆದರಿಸುವುದು

* ಕೆಲಸ ಆಗಬೇಕಾದರೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸಲಹೆ ನೀಡುವುದು

ಸಂಸ್ಥೆಯ ಮೇಲಾಗುವ ಪರಿಣಾಮಗಳು

 • ವಹಿವಾಟು ಕುಂಠಿತಗೊಳ್ಳುತ್ತದೆ
 • ಉತ್ಪಾದಕತೆಯು ಕಡಿಮೆಗೊಳ್ಳುತ್ತದೆ
 • ಸಹೋದ್ಯೋಗಿಗಳ ನಡುವಿನ ಸಂಬಂಧಗಳನ್ನು ಕುಂಠಿತಗೊಳಿಸುತ್ತದೆ
 • ಗೈರುಹಾಜರಿ ಹೆಚ್ಚಳ
 • ಉದ್ಯೋಗಿಗಳನ್ನು ವಿಘಟನೆಗೊಳಿಸುತ್ತದೆ

ಸರ್ವೋಚ್ಚ ನ್ಯಾಯಾಲಯದ  ಆದೇಶ ಏನು ಹೇಳುತ್ತದೆ ?

ಪ್ರತಿಯೊಂದು ಸರ್ಕಾರಿ ಅಥವಾ ಖಾಸಗಿ ಕಛೇರಿಯಲ್ಲಿಯೂ ದೂರು ಸಮಿತಿಯ ರಚನೆ ಕಡ್ಡಾಯ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸುವುದು

 ಆಂತರಿಕ ಸಮಿತಿ ರಚಿಸುವುದು :

 • ಕೆಲಸದ ಸ್ಥಳದಲ್ಲಿ ಎಲ್ಲರಿಗಿಂತ ಹಿರಿಯ ಮಹಿಳೆ ಅಧ್ಯಕ್ಷೆಯಾಗಿರಬೇಕು
 • ಇದಕ್ಕೆ ಮಹಿಳೆಯೇ ಅಧ್ಯಕ್ಷಳಾಗಿರಬೇಕು
 • ಒಟ್ಟು ಸದಸ್ಯರಲ್ಲಿ ಅರ್ಧದಷ್ಟು ಸದಸ್ಯರು ಮಹಿಳೆಯಾಗಿರಬೇಕು
 • ಈ ವಿಷಯದ ಬಗ್ಗೆ ಅರಿವಿರುವ ಸರ್ಕಾರೇತರ ಸಂಘ ಅಥವಾ ಸಂಸ್ಥೆಯ ಒಬ್ಬ ಸದಸ್ಯರು ಇರಬೇಕು
 • ಈ ಸಮಿತಿಯ ಕಾಲಾವಧಿ ೩ ವರ್ಷ ನಂತರ ಸಮಿತಿಯನ್ನು ಪುನರ್ ರಚಿಸಬೇಕು
 • ಈ ಸಮಿತಿಗೆ ಸಾಮಾನ್ಯವಾಗಿ ನ್ಯಾಯ ತೀರ್ಮಾನ ಕುರಿತಂತೆ ಸಿವಿಲ್‌ ನ್ಯಾಯಾಲಯಕ್ಕಿರುವ ಎಲ್ಲಾ ಅಧಿಕಾರವಿರುತ್ತದೆ

ದೂರು ನೀಡುವ ವಿಧಾನ :

 • ದೂರುಗಳನ್ನು ೬ ಪ್ರತಿಗಳೊಂದಿಗೆ ಸ್ವೀಕರಿಸುವುದು (ಲಿಖಿತ)
 • ದೂರು ಸ್ವೀಕರಿಸಿದ ೭ ದಿನಗಳೊಳಗಾಗಿ ನೋಟೀಸ್‌ ಜಾರಿಗೆ ಮಾಡತಕ್ಕದ್ದು
 • ೧೦ ದಿನಗಳ ಒಳಗೆ ಎದುರುದಾರನಿಂದ ಪ್ರತ್ಯುತ್ತರ ಸಲ್ಲಿಸತಕ್ಕದ್ದು
 • ದೂರುದಾರರಿಗೆ ಅವಶ್ಯಕ ರಕ್ಷಣೆ ಹಾಗೂ ಸಹಾಯ ಒದಗಿಸುವುದು
 • ದೂರು ಸಮಿತಿ ನಡೆಸಿದ ವಿಚಾರಣೆ ಅಂತಿಮ
 • ವಿಚಾರಣೆ ಪೂರ್ಣಗೊಂಡ ೬೦ ದಿನಗಳೊಳಗೆ ವರದಿ ಮತ್ತು ಶಿಫಾರಸ್ಸನ್ನು ಮುಖ್ಯಸ್ಥರು ಅಥವಾ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು
 • ದೂರು ಸಮಿತಿಯ ವರದಿಯ ಆಧಾರದ ಮೇಲೆ ಶಿಸ್ತು ಪ್ರಾಧಿಕಾರ ನಿಯಮಗಳಿಗನುಸಾರ ಕ್ರಮ ಕೈಗೊಳ್ಳುತ್ತದೆ
 • ದೂರು ಸಮಿತಿಯು ತಾನು ಸ್ವೀಕರಿಸಿದ ದೂರುಗಳ ಸಂಬಂಧದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ವರ್ಷ ಸರ್ಕಾರಕ್ಕೆ ವರದಿ ಸಲ್ಲಿಸಬೇಕು

ದೂರುಗಳ ವಿಚಾರಣೆ :

 • ವಿಚಾರಣೆ ಅನೌಪಚಾರಿಕವಾಗಿರುತ್ತದೆ
 • ದೂರು ನೀಡಿದವರನ್ನು ಗೌರವದಿಂದ ನಡೆಸಿಕೊಳ್ಳಬೇಕು
 • ಕಿರುಕುಳದ ಬಗ್ಗೆ ಪ್ರತ್ಯಕ್ಷ ಸಾಕ್ಷಿಯನ್ನೊದಗಿಸುವಂತೆ ಒತ್ತಾಯಿಸಬಾರದು. ಏಕೆಂದರೆ ಇಂಥ ಘಟನೆಗಳೆಲ್ಲ ನಡೆಯುವುದು ಯಾರೂ ಇಲ್ಲದಿರುವ ವೇಳೆಯಲ್ಲಿ ಆದ ಕಾರಣ
 • ದೂರು ನೀಡಿದವರಿಗೆ ಮಾತನಾಡಲು ಮೊದಲು ಅವಕಾಶ ಕೊಡಬೇಕು
 • ಪೂರ್ವನಿರ್ಧರಿತ ಕಲ್ಪನೆಗಳಿಗೆ ಆಸ್ಪದ ನೀಡದಿರುವುದು
 • ಇಡೀ ವಿಚಾರಣೆಯ ಪ್ರಕ್ರೀಯೆ ಮಾನವೀಯತೆಯಿಂದ ಕೂಡಿರುತ್ತದೆ

ಶಿಸ್ತು ಕ್ರಮ :

 • ಮುನ್ನೆಚ್ಚರಿಕೆ
 • ಬರಹ ರೂಪದ ಕ್ಷಮೆಯಾಚನೆ
 • ಹಿಂಬಡ್ತಿ
 • ವಜಾಗೊಳಿಸುವುದು

ಸಂಸ್ಥೆಯ ಮಾಲೀಕನ ಜವಾಬ್ದಾರಿ :

 • ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ ಪ್ರಕಟಣೆ ಹೊರಡಿಸಬೇಕು. ಸುತ್ತೋಲೆಯ ಮೂಲಕ ತಿಳಿಸಬೇಕು
 • ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಿಯಮಗಳಲ್ಲಿ ಲೈಂಗಿಕ ಕಿರುಕುಳವನ್ನು ನಿಷೇಧಿಸುವ ಮತ್ತು ಅಂಥ ಅಪರಾಧಕ್ಕೆ ಸೂಕ್ತದಂಡ ವಿಧಿಸುವ ನಿಯಮಗಳನ್ನು ಸೇರಿಸಬೇಕು
 • ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತವಾದ, ಆರೋಗ್ಯಕರ, ಹಾಗೂ ಮುಕ್ತ ವಾತಾವರಣವನ್ನು ಕಲ್ಪಿಸಬೇಕು
 • ಲೈಂಗಿಕ ಕಿರುಕುಳದ ಬಗ್ಗೆ ವಿಚಾರಣೆ ನಡೆಸುವಾಗ ದೂರು ನೀಡಿದವರಿಗೆ ಹಾಗೂ ಸಾಕ್ಷಿಗಳಿಗೆ ತೊಂದರೆ ಕೊಡದಂತೆ ಹಾಗೂ            ತಾರತಮ್ಯವಾಗದಂತೆ ನೋಡಿಕೊಳ್ಳಬೇಕು
 • ಸಂಸ್ಥೆಯ ಉದ್ಯೋಗಿಗಳಲ್ಲದ ಹೊರಗಿನ ವ್ಯಕ್ತಿಗಳಿಂದಾಗುವ ಲೈಂಗಿಕ ಕಿರುಕುಳದಿಂದಲೂ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಕೊಡಬೇಕು

ಸರ್ವೋಚ್ಚ ನ್ಯಾಯಾಲಯದ ಈ ಮಾರ್ಗದರ್ಶಿ ಸೂತ್ರಗಳು-

 ಸರ್ಕಾರಿ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಒಂದು ಕೆಲಸದ ಜಾಗದಲ್ಲಿ ೧೦ ಜನ ಗಂಡಸರು ಒಬ್ಬ ಮಹಿಳೆ ಇದ್ದರೂ ಅಲ್ಲಿ ಆಂತರಿಕ ಸಮಿತಿ ಇರಬೇಕು ಎಂದು ಕಾನೂನು ಹೇಳುತ್ತದೆ.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವುದು

 • ಸಿಬ್ಬಂದಿ ಹಾಗೂ ನೌಕರರಲ್ಲಿ ಈ ಬಗ್ಗೆ ಜಾಗ್ರತಿ ಮೂಡಿಸಬೇಕು
 • ಎಲ್ಲ ಅಧಿಕಾರಿಗಳೂ ಹಾಗೂ ಪುರುಷ ಸಿಬ್ಬಂದಿ ಈ ಸಮಸ್ಯೆಗೆ ಹೆಚ್ಚು ಸಂವೇದನಾಶೀಲರಾಗಿರುವಂತೆ ಸೂಚಿಸಬೇಕು
 • ದೂರು ಸಮಿತಿಯ ಸದಸ್ಯರಿಗೆ ವಿಚಾರಣಾ ಪ್ರಕ್ರಿಯೆಯ ಬಗ್ಗೆ  ತರಬೇತಿ ನೀಡಬೇಕು.

ನೆನಪಿರಲಿ-
 • ಗೊತ್ತಿಲ್ಲದ ಸಹೋದ್ಯೋಗಿಗಳ ಹತ್ತಿರ ನಿಮ್ಮ ಫೋನ್‌ ನಂಬರ್‌ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ
 • ನಿಮ್ಮ ಭಂಗಿ- ಹಾವಗಳ ಬಗ್ಗೆ ಗಮನವಿರಲಿ
 • ಸಣ್ಣಪುಟ್ಟ ದೌರ್ಜನ್ಯದ ಕಿರುಕುಳದ ಘಟನೆಯನ್ನೂ ಸಹ ವರದಿ ಮಾಡಲು ಮರೆಯದಿರಿ
 • ನಿಮ್ಮ ಅಧಿಕಾರದ ಸ್ಥಾನವನ್ನು ಬಳಸಿ ನಿಮ್ಮ ಅಧೀನದಲ್ಲಿರುವ ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳದಿರಿ
 • ಸುಳ್ಳು ದೂರು ಅಥವಾ ವರದಿ ನೀಡದಿರುವುದು
 • ಪ್ರತಿಯೊಬ್ಬರೂ ಮಹಿಳೆಯರ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವುದು

ಆಡಳಿತಾತ್ಮಕ ಸಂಕಲ್ಪದಿಂದ ಮಾತ್ರವೇ ಈ ಪಿಡುಗನ್ನು ನಿವಾರಿಸಲು ಸಾಧ್ಯ!

LEAVE A REPLY

Please enter your comment!
Please enter your name here