ಕೆಲಸದ ಸ್ಥಳಗಳಿಗೆ ಕಾರ್ಮಿಕರನ್ನು ಬಸ್‌ನಲ್ಲಿ ಕರೆದೊಯ್ಯಬಹುದು – ಕೇಂದ್ರ ಸರ್ಕಾರದ ಆದೇಶ

ಲಾಕ್‌ಡೌನ್‌ನಿಂದಾಗಿ ನಿರಾಶ್ರಿತರ ಶಿಬಿರಗಳಲ್ಲಿರುವ ಕಾರ್ಮಿಕರನ್ನು ನಾಳೆಯಿಂದ ತಾವು ಈಗ ಇರುವ ರಾಜ್ಯದೊಳಗಷ್ಟೇ ಬಸ್‌ನಲ್ಲಿ ಕರೆದೊಯ್ಯಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಇವತ್ತು ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಕೇಂದ್ರ ಸರ್ಕಾರ ಈ ವಿನಾಯ್ತಿಯನ್ನು ನೀಡಿದೆ.

ಆದರೆ ಲಾಕ್‌ಡೌನ್‌ನಿಂದ ವಿನಾಯ್ತಿ ಘೋಷಿಸಿ ಈ ಹಿಂದೆ ನೀಡಲಾಗಿದ್ದ ಮಾರ್ಗಸೂಚಿಗಳ ಪ್ರಕಾರ ಕಾರ್ಮಿಕರನ್ನು ಕರೆದೊಯ್ಯುವ ಮತ್ತು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುವ ಜವಾಬ್ದಾರಿ ಸಂಬಂಧಪಟ್ಟಂತೆ ಕಾರ್ಖಾನೆಗಳ ಮಾಲೀಕರು ಮತ್ತು ಕಾಮಗಾರಿಗಳ ಗುತ್ತಿಗೆದಾರರದ್ದಾಗಿರುತ್ತದೆ.

ಲಾಕ್‌ಡೌನ್‌ನಿಂದಾಗಿ ಕೈಗಾರಿಕೆ, ಕೃಷಿ, ನಿರ್ಮಾಣ ಮತ್ತು ಇತರೆ ವಲಯದ ಕಾರ್ಮಿಕರು ಅವರ ಕೆಲಸದ ಸ್ಥಳದಿಂದ ಬೇರೆಡೆಗೆ ಹೋಗಿದ್ದಾರೆ. ಆದರೆ ಈಗ ಕಂಟೈನ್‌ಮೆಂಟ್‌ ಝೋನ್‌ ಹೊರಗೆ ಈ ಕಾರ್ಮಿಕರು ಕೈಗಾರಿಕೆ, ರಸ್ತೆ ಮತ್ತು ಕಟ್ಟಡ ನಿರ್ಮಾಣ, ಕೃಷಿ, ಮನರೇಗಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ರಾಜ್ಯದೊಳಗಷ್ಟೇ ಈ ಕಾರ್ಮಿಕರ ಓಡಾಟಕ್ಕೆ ಅನುಮತಿ ನೀಡಿರುವ ಕೇಂದ್ರ ಗೃಹ ಸಚಿವಾಲಯ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿದೆ.

೧) ಸದ್ಯ ನಿರಾಶ್ರಿತ ಶಿಬಿರದಲ್ಲಿರುವ ಕಾರ್ಮಿಕರು ಸ್ಥಳೀಯ ಪ್ರಾಧಿಕಾರದ ಬಳಿಕ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳೀಯ ಪ್ರಾಧಿಕಾರವೂ ಆ ಕಾರ್ಮಿಕರು ಯಾವ ಕೆಲಸದಲ್ಲಿ ಕೌಶಲ್ಯ ಹೊಂದಿದ್ದಾರೆ ಎಂಬುದನ್ನು ದೃಢೀಕರಿಸಬೇಕು.

೨) ಯಾವೆಲ್ಲ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಿಗೆ ಹೋಗಲು ಇಚ್ಛಿಸುತ್ತಾರೋ ಅವರ ಆರೋಗ್ಯ ತಪಾಸಣೆ ಮಾಡಬೇಕು.

೩) ಬಸ್‌ಗಳಲ್ಲಿ ಕಾರ್ಮಿಕರ ಓಡಾಟ ವೇಳೆ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್‌ನಿಂದ ಶುಚಿತ್ವ ಕಾಯ್ದುಕೊಳ್ಳುವುದು ಕಡ್ಡಾಯ.

೪) ಕಾರ್ಮಿಕರ ಪ್ರಯಾಣದ ವೇಳೆ ಅವರಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡುವುದು ಸ್ಥಳೀಯ ಪ್ರಾಧಿಕಾರದ ಜವಾಬ್ದಾರಿ ಆಗಿರಲಿದೆ.

೫) ಕಾರ್ಮಿಕರು ಈಗ ಎಲ್ಲಿದ್ದಾರೋ ಆ ರಾಜ್ಯವನ್ನು ಬಿಟ್ಟು ಬೇರೆ ರಾಜ್ಯಗಳಿಗೆ ಹೋಗುವಂತಿಲ್ಲ.

 

1 COMMENT

LEAVE A REPLY

Please enter your comment!
Please enter your name here