ಕೃಷಿ ಖಾಸಗೀಕರಣಕ್ಕೆ ಮೋದಿ ಸರ್ಕಾರದ ಹುನ್ನಾರ – ಸಿದ್ದರಾಮಯ್ಯ ಗಂಭೀರ ಆರೋಪ

ಇವತ್ತು ಮಂಡನೆ ಆದ ಪ್ರಧಾನಿ ಮೋದಿ ಸರ್ಕಾರದ ಬಜೆಟ್‌ ಬಗ್ಗೆ ದಾಖಲೆ ಬಜೆಟ್‌ಗಳನ್ನು ಮಂಡಿಸಿರುವ ಮಾಜಿ ಹಣಕಾಸು ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಗಳು:

ಕಳೆದ ಬಾರಿಯ ಕೇಂದ್ರದ ಬಜೆಟ್ ಗಾತ್ರ ರೂ.27 ಲಕ್ಷ ಕೋಟಿಗಳಿತ್ತು, ಈ ಬಾರಿ ರೂ.30 ಲಕ್ಷದ 42 ಸಾವಿರ ಕೋಟಿಗೆ ಏರಿಕೆ ಕಂಡಿದೆ. ನೇರ ತೆರಿಗೆ ಸಂಗ್ರಹ ಕಡಿಮೆಯಾದ ಕಾರಣ ಕಳೆದ ಬಾರಿ ಸುಮಾರು ಎರಡು ಲಕ್ಷ ಕೋಟಿ ಹಣ ಕೊರತೆಯಾಗಿತ್ತು. ಕೇವಲ ರೂ.25 ಲಕ್ಷ ಕೋಟಿಗಳಷ್ಟು ಮಾತ್ರ ಖರ್ಚು ಮಾಡಲಾಗಿದೆ.

ಎರಡನೇ ಬಾರಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಆದಾಯವನ್ನು 5 ಟ್ರಿಲಿಯನ್ ಡಾಲರ್‌ಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಇಂದು ದೇಶದ ಜಿಡಿಪಿ 2.5 ರಷ್ಟಿದೆ, ಈ ಪರಿಸ್ಥಿತಿಯಲ್ಲಿ ಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು.

ಪ್ರಸಕ್ತ ಬಜೆಟ್‌ನಲ್ಲಿ ದೇಶದ ಜಿಡಿಪಿಯನ್ನು 6% ಗೆ ಏರಿಸುವ ಕುರಿತು ವ್ಯಾಖ್ಯಾನಿಸಲಾಗಿದ್ದರೂ, ಅದರ ಈಡೇರಿಕೆಗೆ ಬೇಕಾದಂತಹ ಪರಿಣಾಮಕಾರಿ ಕಾರ್ಯಸೂಚಿಗಳೇನು ಕಂಡುಬರುತ್ತಿಲ್ಲ. ಹಾಗಾಗಿ ಇದೂ ಕೂಡ ಭರವಸೆಯಾಗಿಯೇ ಉಳಿಯಲಿದೆ. ಪಾತಾಳ ಮುಟ್ಟಿರುವ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಬೇಕಾದ ಇಚ್ಛಾಶಕ್ತಿ ಕೇಂದ್ರ ವಿತ್ತ ಸಚಿವರಲ್ಲಿ ಇಲ್ಲ

ಹಣಕಾಸು ಸಚಿವರು ಕೃಷಿ ಕ್ಷೇತ್ರದ ಅಭಿವೃದ್ದಿಗೆ 16 ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಇದರಲ್ಲಿ 9 ಅಂಶಗಳು ರೈತರ ಜಮೀನನ್ನು ಖಾಸಗಿ ಕಂಪೆನಿಗಳ ಸುಪರ್ದಿಗೆ ಒಳಪಡಿಸುವಂತಿವೆ. ಉದಾಹರಣೆಗೆ ‘ಕೃಷಿ ಉಡಾನ್’ ಯೋಜನೆ ಸಣ್ಣಪುಟ್ಟ ರೈತರಿಗಿಂತ ಕಾರ್ಪೊರೇಟ್ ಕಂಪೆನಿಗಳಿಗೆ ಹೆಚ್ಚು ಲಾಭದಾಯಕವಾಗುವಂತಿದೆ.

2022ರ ವೇಳೆಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಪ್ರಧಾನಿ ಹೇಳಿದ್ದರು. ಕಳೆದ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರ ಶೇಕಡಾ 2.5ರಷ್ಟು ಬೆಳವಣಿಗೆ ಕಂಡಿದೆ. ರೈತರ ಆದಾಯ ದುಪ್ಪಟ್ಟು ಆಗಬೇಕಾದರೆ ಕೃಷಿ ಕ್ಷೇತ್ರ ಕನಿಷ್ಠ 10ರಿಂದ 15% ದರದಲ್ಲಿ ಬೆಳವಣಿಗೆ ಆಗಬೇಕು. ಸದ್ಯಕ್ಕೆ ಇದೂ ಕೂಡ ಅಸಾಧ್ಯದ ಮಾತು.

ಕೃಷಿಗೆ ಸಂಬಂಧಿಸಿದ 16 ಅಂಶಗಳ ಕಾರ್ಯಕ್ರಮಗಳಲ್ಲಿ 9 ಅಂಶಗಳು ‘ಕಾರ್ಪೊರೇಟ್ ಫಾರ್ಮಿಂಗ್’ ಕಡೆಗೆ ಒತ್ತು ನೀಡುತ್ತಿವೆ. ಒಟ್ಟಾರೆ ಕೃಷಿಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ

LEAVE A REPLY

Please enter your comment!
Please enter your name here