ಕುತ್ತಿಗೆಯಲ್ಲಿರುವ ತಾಳಿ ಮಾರಾಟಕ್ಕಿಟ್ಟ ಪರಿಸ್ಥಿತಿ – ಎಲ್‌ಐಸಿ ಮಾರಾಟ ಬಗ್ಗೆ ಸಿದ್ದರಾಮಯ್ಯ ಕಿಡಿ

ಪ್ರಧಾನಿ ಮೋದಿ ಸರ್ಕಾರದ ಬಜೆಟ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಗಳು:

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಸಕ್ತ ಬಜೆಟ್‌ನಲ್ಲಿ ಎಲ್‌ಐಸಿ ಶೇರುಗಳನ್ನು ಸಹ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದೊಂದು ರೀತಿ ಕುತ್ತಿಗೆಯಲ್ಲಿರುವ ತಾಳಿ ಮಾರಾಟಕ್ಕಿಟ್ಟ ಪರಿಸ್ಥಿತಿ. ದೇಶದ ಸದ್ಯದ ಆರ್ಥಿಕ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದುಕ್ಕೆ ಸರ್ಕಾರದ ಈ ನಿರ್ಧಾರ ಸಾಕ್ಷಿ.

ದೇಶದ ಅಭಿವೃದ್ದಿಯ ದರ 42 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ತೆರಿಗೆ ಸಂಗ್ರಹ ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಕಾರ್ಪೋರೇಟ್ ತೆರಿಗೆ ಶೇಕಡಾ 15ರಷ್ಟು ಕಡಿಮೆಯಾಗಿದೆ. ಸಂಪನ್ಮೂಲ ಸಂಗ್ರಹದ ಯಾವ ಹೊಸ ಮಾರ್ಗಗಳ ಬಗ್ಗೆಯೂ ಬಜೆಟ್ ನಲ್ಲಿಯೂ ಪ್ರಸ್ತಾಪ ಇಲ್ಲ

ವಿತ್ತೀಯ ಶಿಸ್ತು ಕಳೆದ ಬಾರಿ ಬಜೆಟ್‌ನಲ್ಲಿ 3.3 ಎಂದು ನಿಗದಿಪಡಿಸಲಾಗಿತ್ತು. ವರ್ಷಾಂತ್ಯದ ವೇಳೆಗೆ ಇದು 3.6 ತಲುಪಿತ್ತು. ಬರುವ ವರ್ಷಕ್ಕೆ ಸರ್ಕಾರವೇ 3.5 ಎಂದು ಗುರಿ ಇಟ್ಟುಕೊಂಡಿದೆ.‌ ಅಂದರೆ ಈಗಿರುವ ಸಾಲದ ಜೊತೆಗೆ ಇನ್ನಷ್ಟು ಸಾಲ ಮಾಡಿ ದೇಶವನ್ನು ದಿವಾಳಿ ಮಾಡಲು ಸರ್ಕಾರ ನಿರ್ಧರಿಸಿದಂತಿದೆ.

ಒಟ್ಟಿನಲ್ಲಿ ಇದು ದೇಶದ ಮುನ್ನಡೆಗೆ ಬೇಕಾದ ಯಾವ ಮುನ್ನೋಟವೂ ಇಲ್ಲದ, ಭವಿಷ್ಯದ ಮೇಲಿನ ಭರವಸೆಯನ್ನು ಕಳೆದುಕೊಂಡಿರುವ ಸಾಮಾನ್ಯ ಜನರು, ರೈತರು, ಯುವಜನರು, ಉದ್ಯಮಿಗಳು ಹೀಗೆ ಯಾವ ಜನ ಸಮುದಾಯದಲ್ಲಿಯೂ ವಿಶ್ವಾಸ-ಭರವಸೆಯನ್ನು ಹುಟ್ಟಿಸದ ನಿರಾಶದಾಯಕ ಬಜೆಟ್.

LEAVE A REPLY

Please enter your comment!
Please enter your name here