ಕುಡಿದ ಮತ್ತಿನಲ್ಲಿ ವ್ಯಕ್ತಿಯ ಮೇಲೆ ಹಿರಿಯ ನಟ ಜೈಜಗದೀಶ್ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದ್ದು, ಟೋಲ್ ಸಿಬ್ಬಂದಿ ನಟನ ಪರವಾಗಿ ನಿಂತಿರುವ ಆರೋಪ ಕೇಳಿಬಂದಿದೆ.
ದೂರುದಾರನಿಗೆ ಸಿಸಿಟಿವಿ ದೃಶ್ಯಾವಳಿ ನೀಡದೇ ಸತಾಯಿಸುತ್ತಿದ್ದ ಟೋಲ್ ಸಿಬ್ಬಂದಿಯನ್ನು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರ ಎಚ್ಚರಿಕೆಯ ಬಳಿಕ ಟೋಲ್ ಸಿಬ್ಬಂದಿ ಒಂದಿಷ್ಟು ಸಿಸಿಟಿವಿ ದೃಶ್ಯವನ್ನು ದೂರುದಾರನಿಗೆ ನೀಡಿದ್ದಾರೆ ಎನ್ನಲಾಗಿದೆ.
ಘಟನೆ ಖಂಡಿಸಿರುವ ಶಾಸಕ ಸುರೇಶ್ ಗೌಡ ಈ ಬಗ್ಗೆ ಮಾತನಾಡಿದ್ದಾರೆ. ಘಟನೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಮೂರ್ನಾಲ್ಕು ದಿನ ನಾನು ಕ್ಷೇತ್ರದಲ್ಲಿ ಇರಲಿಲ್ಲ. ಭಾನುವಾರ ಘಟನೆ ಆಗಿರುವ ಬಗ್ಗೆ ಈಗಷ್ಟೇ ಮಾಹಿತಿ ಬಂದಿದೆ. ತಪ್ಪು ಮಾಡಿರುವುದು ಯಾರೇ ಆಗಿರಲಿ ಎಂತಹ ದೊಡ್ಡ ಮನುಷ್ಯ ಆದರೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಇನ್ನು ಪೊಲೀಸರು ಎಫ್ಐಆರ್ ದಾಖಲಿಸದೆ ಎನ್ಸಿಆರ್ ದಾಖಲಿಸಿರುವ ಬಗ್ಗೆ ಮಾತನಾಡಿದ ಶಾಸಕರು, ಕೈ ಕಚ್ಚಿ, ಹಲ್ಲೆ ಮಾಡಿದ್ದಾರೆ ಎಂದ ಮೇಲೂ ಎನ್ಸಿಆರ್ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರುತ್ತೇನೆ. ಏನೇ ಆದರೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.