ಕಾಶ್ಮೀರದಲ್ಲಿ ಎನ್‌ಕೌಂಟರ್‌ – ಇಬ್ಬರು ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ನಡುವೆ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಸೇನಾಧಿಕಾರಿಗಳು, ಇಬ್ಬರು ಸೈನಿಕರು ಮತ್ತು ಓರ್ವ ಪೊಲೀಸ್‌ ಸೇರಿ ಐವರು ಹುತಾತ್ಮರಾಗಿದ್ದಾರೆ.

ರಾಜಧಾನಿ ಶ್ರೀನಗರದಿಂದ 70 ಕಿಲೋ ಮೀಟರ್‌ ದೂರದಲ್ಲಿರುವ ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಬಲಿ ಪಡೆದಿದ್ದಾರೆ. ಭಯೋತ್ಪಾದಕರಿಂದ ಹಲವಾರು ಗ್ರಾಮಸ್ಥರನ್ನೂ ಜಂಟಿ ತಂಡ ಉಳಿಸಿತ್ತು.

ನಿನ್ನೆ ಶುರುವಾದ ಜಂಟಿ ಕಾರ್ಯಾಚರಣೆ ಇವತ್ತೂ ಮುಂದುವರಿದಿತ್ತು.

21 ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್‌ ಅಶುತೋಷ್‌ ಶರ್ಮಾ, ಮೇಜರ್‌ ಅನುಜ್‌ ಸೂದ್‌, ನ್ಯಾಕ್‌ ರಾಜೇಶ್‌ ಕುಮಾರ್‌ ಮತ್ತು ಲ್ಯಾನ್ಸ್‌ ನ್ಯಾಕ್‌ ದಿನೇಶ್‌ ಮತ್ತು ಜಮ್ಮು -ಕಾಶ್ಮೀರ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಕೀಲ್‌ ಖ್ವಾಜಿ ಹುತಾತ್ಮರಾದವರು.

ಕುಪ್ವಾರಾ ಜಿಲ್ಲೆಯ ಹಂದ್ವಾರದಲ್ಲಿರುವ ಛಂಗಿಮುಲ್ಲಾದಲ್ಲಿ ಭಯೋತ್ಪಾದಕರು ಮನೆಯೊಂದಕ್ಕೆ ನುಗ್ಗಿ ನಾಗರಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂಬ ಖಚಿತ ಸುಳಿವು ಪಡೆದು ಸ್ಥಳಕ್ಕೆ ದೌಡಾಯಿಸಿದ ತಂಡ, ಮನೆಯಲ್ಲಿ ಒತ್ತೆಯಾಳಾಗಿದ್ದವರನ್ನು ಉಗ್ರರಿಂದ ಬಿಡುಗಡೆಗೊಳಿಸಿತು.

ಈ ವೇಳೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐವರು ಹುತಾತ್ಮರಾದರು.

ನಿನ್ನೆಯಷ್ಟೇ ಮಗಳ ಹುಟ್ಟುಹಬ್ಬ:

ನಿನ್ನೆಯಷ್ಟೇ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದ ಕರ್ನಲ್‌ ಅಶುತೋಷ್‌ ಶರ್ಮಾ ಅವರ ಮಗಳ ೧೨ನೇ ಹುಟ್ಟುಹಬ್ಬವಾಗಿತ್ತು.

ಮದುವೆ ಆಗಿ ಮೂರ್ನಾಲ್ಕು ತಿಂಗಳಾಗಿದೆ:

ಇನ್ನು ಮೇಜರ್‌ ಅನುಜ್‌ ಸೂದ್‌ ಅವರಿಗೆ ಮದುವೆ ಆಗಿ ಮೂರ್ನಾಲ್ಕು ತಿಂಗಳಾಗಿತ್ತಷ್ಟೇ. ಇವರ ತಂದೆ ಚಂದ್ರಕಾಂತ್‌ ಸೂದ್‌ ಸೇನೆಯಲ್ಲಿ ಬ್ರಿಗೇಡಿಯರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಹುತಾತ್ಮರ ಯೋಧರ ಬಲಿದಾನವನ್ನು ಮರೆಯಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

 

ಸ್ವಯಂಗಿಂತ ಮೊದಲು ಸೇವೆ ಎನ್ನುವ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದ ಕರ್ನಲ್‌ ಅಶುತೋಷ್‌ ಶರ್ಮಾ ಮತ್ತು ನಾಲ್ವರ ಬಲಿದಾನವನ್ನು ಸೇನೆ ಸ್ಮರಿಸಿದೆ.

 

LEAVE A REPLY

Please enter your comment!
Please enter your name here