ಮಂಗಳೂರು: ಶಿರಾ ಹಾಗೂ ಆರ್.ಆರ್.ನಗರದ ಉಪಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ನಡೆಯಿತು. ಕಾಂಗ್ರೆಸ್ ನೂರಕ್ಕೆ ನೂರು ದಯನೀಯ ಸೋಲು ಅನುಭವಿಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳೂರಿನಲ್ಲಿ ತಿಳಿಸಿದರು.
ಮುಂದಿನ ಪದವೀಧರ, ಶಿಕ್ಷಕರ ಚುನಾವಣೆಯಲ್ಲಿಯೂ ಬಿಜೆಪಿ ನೂರು ಪ್ರತಿಶತ ಗೆಲುವು ಸಾಧಿಸುತ್ತದೆ. ಎರಡೂ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋತ ಮೇಲೆ ಯಾರು ರಾಜೀನಾಮೆ ನೀಡಬೇಕು ಎಂದು ತಿಳಿಯುತ್ತದೆ.
ಬೇರೆ ಬೇರೆ ಕಾರಣಕ್ಕೆ ನಾನು ಸಿದ್ದರಾಮಯ್ಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ದರಿಂದ ಸಿದ್ದರಾಮಯ್ಯನವರಿಗೆ ನಾನು ಇಷ್ಟು ಮಾತ್ರ ಹೇಳಬಲ್ಲೆ. ಇನ್ನಾದರೂ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.
ದೆಹಲಿಯಿಂದ ಸುದ್ದಿ ಬಂದಿದೆ, ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಹೇಳುತ್ತಿದ್ದಾರೆ. ನಾನು ಕೂಡ ದೆಹಲಿಯಿಂದ ಸುದ್ದಿ ಬಂದಿದೆ, ಸಿದ್ದರಾಮಯ್ಯನವರ ಪ್ರತಿಪಕ್ಷ ನಾಯಕರ ಸ್ಥಾನ ಬದಲಾವಣೆ ಆಗುತ್ತದೆ ಎಂದು ಹೇಳಬಹುದು.
ಆದರೆ, ಆ ತರಹ ಹಗುರವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಜವಾಬ್ದಾರಿಯಿಂದ ಸಿದ್ದರಾಮಯ್ಯ ಮಾತನಾಡಲಿ ಎಂದು ವಿನಂತಿ ಮಾಡುತ್ತೇನೆ ಎಂದು ಸಿಎಂ ಹೇಳಿದರು.