ಗಣಿ ಹಗರಣದ ಆರೋಪಿ ಆನಂದ್‌ಸಿಂಗ್‌ಗೆ ಅರಣ್ಯ ಖಾತೆ ಕೊಟ್ಟ ಯಡಿಯೂರಪ್ಪ..!

ಕಳ್ಳನನ್ನು ಹಿಡಿಯಲು ಕಳ್ಳನನ್ನೇ ಕಾವಲಿಗೆ ನಿಲ್ಲಿಸು ಎನ್ನುವ ಗಾದೆ ಮಾತಿದೆ, ಹಾಗಾಗಿದೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಕಥೆ. ಯಾರ ವಿರುದ್ಧ ಅಕ್ರಮ ಅದಿರು ಸಾಗಾಟ ಮತ್ತು ಅರಣ್ಯ ಭೂಮಿಯನ್ನ ನಾಶಪಡಿಸಿದ ನಡೆಸಿದ ಆರೋಪವಿದೆಯೋ, ಯಾರು ಅದೇ ಕೇಸಲ್ಲಿ ಎರಡು ಬಾರಿ ಜೈಲಿಗೆ ಹೋಗಿ ಬಂದರೋ ಅವರನ್ನೇ ತಮ್ಮ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ್ದು ಮಾತ್ರವಲ್ಲದೇ ಅವರಿಗೇ ಅರಣ್ಯ ಖಾತೆಯನ್ನೇ ದಯಪಾಲಿಸಿದ್ದಾರೆ.

ಹೊಸದಾಗಿ ಸಚಿವರಾದ 10 ಮಂದಿಗೆ ಸೋಮವಾರ ಯಡಿಯೂರಪ್ಪ ಖಾತೆಗಳ ಹಂಚಿಕೆ ಮಾಡಿದ್ದರು. ಆಗ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಸಚಿವ ಆನಂದ್‌ ಸಿಂಗ್‌ಗೆ ಆಹಾರ ಮತ್ತು ನಾಗರಿಕ ಪೊರೈಕೆ ಖಾತೆಯನ್ನ ಕೊಟ್ಟಿದ್ದರು. ಆದರೆ ಖಾತೆ ಹಂಚಿಕೆ ಬಗ್ಗೆ ಹೊಸ ಮಂತ್ರಿಗಳಲ್ಲಿ ಅಸಮಾಧಾನ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಖಾತೆಗಳ ಮರು ಹಂಚಿಕೆ ಮಾಡಿದರು.

ಮರು ಹಂಚಿಕೆ ವೇಳೆ ಬಿ ಸಿ ಪಾಟೀಲ್‌ಗೆ ನೀಡಲಾಗಿದ್ದ ಅರಣ್ಯ ಖಾತೆಯನ್ನ ಆನಂದ್‌ ಸಿಂಗ್‌ಗೂ ಆನಂದ್‌ ಸಿಂಗ್‌ ಬಳಿ ಇದ್ದ ಆಹಾರ ಮತ್ತು ನಾಗರಿಕ ಪೊರೈಕೆ ಖಾತೆಯನ್ನ ಮಹಾಲಕ್ಷ್ಮೀ ಲೇಔಟ್‌ನ ಶಾಸಕರೂ ಆಗಿರುವ ಸಚಿವ ಕೆ ಗೋಪಾಲಯ್ಯಗೂ ಮರು ಹಂಚಿಕೆ ಮಾಡಿದ್ದರು. ಬಿ ಸಿ ಪಾಟೀಲ್‌ಗೆ ಗೃಹ ಸಚಿವ ಬೊಮ್ಮಾಯಿ ಒಂದು ದಿನದ ಹಿಂದೆಯಷ್ಟೇ ನೀಡಲಾಗಿದ್ದ ಕೃಷಿ ಖಾತೆಯನ್ನ ಪಾಟೀಲ್‌ಗೆ ನೀಡಲಾಯಿತು.

ಆದರೆ ಈಗ ಪ್ರಶ್ನೆ ಎದ್ದಿರುವುದು ಆನಂದ್‌ಸಿಂಗ್‌ಗೆ ಅರಣ್ಯ ಇಲಾಖೆ ಹಂಚಿಕೆ ಮಾಡಿರುವ ಬಗ್ಗೆ. ಕಳ್ಳತನ ಆರೋಪ ಹೊತ್ತಿರುವ ವ್ಯಕ್ತಿಯನ್ನ ಪೊಲೀಸ್‌ ಠಾಣೆಗೆ ನೇಮಿಸಿದರೆ ಹೇಗೆಯೋ ಹಾಗೆಯೇ ಸದ್ಯದ ಸ್ಥಿತಿ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಿಂಗ್‌ ಹೇಳಿರುವಂತೆ ಅವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಮತ್ತು ಗಣಿ ಕಾಯ್ದೆಯಡಿ ಸೇರಿದಂತೆ ಒಟ್ಟು 15 ಪ್ರಕರಣಗಳಿವೆ. ಅಕ್ರಮ ಅದಿರು ಸಾಗಾಟ, ಮೀಸಲು ಅರಣ್ಯ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಚಟುವಟಿಕೆಗಳನ್ನು ನಡೆಸಿರುವ ಆರೋಪ ಇದೆ.

2013ರಲ್ಲಿ ಬೇಲೆಕೇರಿಯಲ್ಲಿ ನಡೆದಿದ್ದ ಅಕ್ರಮ ಅದಿರು ಸಾಗಾಟ ಪ್ರಕರಣ ಸಂಬಂಧ ಆನಂದ್‌ ಸಿಂಗ್‌ ಬಂಧನವಾಗಿತ್ತು. ಇದಾದ ಬಳಿಕ ಲೋಕಾಯುಕ್ತ ವರದಿ ಆಧರಿಸಿ ತನಿಖೆ ಕೈಗೊಂಡಿದ್ದ ಎಸ್‌ಐಟಿ ಅಕ್ರಮ ಅದಿರು ಸಾಗಾಟ ಕೇಸಲ್ಲಿ 2015ರಲ್ಲೂ ಎರಡನೇ ಬಾರಿ ಬಂಧನವಾಗಿತ್ತು. ಬೇಲೆಕೇರಿ ಬಂದರಿನಿಂದ 1.3 ಲಕ್ಷ ಟನ್‌ ಅದಿರು ಸಾಗಾಟ ಕೇಸಲ್ಲಿ ಸಾಕ್ಷ್ಯದ ಕೊರತೆಯ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆನಂದ್‌ ಸಿಂಗ್‌ರನ್ನ ಕೋರ್ಟ್‌ ಖುಲಾಸೆಗೊಳಿಸಿತ್ತು.

ಚುನಾವಣಾ ಆಯೋಗಕ್ಕೆ ಆನಂದ್‌ ಸಿಂಗ್‌ ಸಲ್ಲಿಸಿದ್ದ ಅಫಿಡವಿಟ್‌

ಅಂದಹಾಗೆ ಗಣಿಗಾರಿಕೆ ಆರಂಭಕ್ಕೆ ಅರಣ್ಯ ಇಲಾಖೆ ಒಪ್ಪಿಗೆಯೂ ಅಗತ್ಯವಾಗಿರುತ್ತದೆ. ಹೀಗಿರಬೇಕಾದರೆ ಗಣಿ ಕೇಸಲ್ಲಿ ಜೈಲಿಗೆ ಹೋಗಿ ಬಂದ, ಇನ್ನೂ ಪ್ರಕರಣಗಳನ್ನು ಎದುರಿಸುತ್ತಿರುವ ಸ್ವತಃ ಗಣಿ ಉದ್ಯಮಿಯೂ ಆಗಿರುವ ಆನಂದ್‌ ಸಿಂಗ್‌ರನ್ನ ಅರಣ್ಯ ಇಲಾಖೆ ಸಚಿವರನ್ನಾಗಿ ಮಾಡಿರುವುದು ಈಗ ಯಡಿಯೂರಪ್ಪರನ್ನ ಮತ್ತೊಮ್ಮೆ ಇಕ್ಕಟ್ಟು ಮತ್ತು ಮುಜುಗರಕ್ಕೆ ಸಿಲುಕಿಸಿದೆ.

ವಿಚಿತ್ರ ಎಂದರೆ ಲೋಕಾಯುಕ್ತ ನ್ಯಾಯಮೂರ್ತಿ ಆಗಿ ಸಂತೋಷ್‌ ಹೆಗ್ಡೆ ಕೊಟ್ಟಿದ್ದ ವರದಿ ಆಧಾರದಲ್ಲಿ ಯಡಿಯೂರಪ್ಪ ಕೆಲ ದಿನ ಜೈಲುವಾಸ ಅನುಭವಿಸಬೇಕಾಯಿತು.

LEAVE A REPLY

Please enter your comment!
Please enter your name here