ಕರ್ನಾಟಕ ಕಾಂಗ್ರೆಸ್‌ಗೆ ಡಿಕೆಶಿಯೇ ಸಾರಥಿ – ನಾಲ್ವರು ಕಾರ್ಯಾಧ್ಯಕ್ಷರು – ಸಿದ್ದರಾಮಯ್ಯ ಸ್ಥಾನ ಅಭಾದಿತ

ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕನಕಪುರ ಬಂಡೆ ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್‌ ನೇಮಕ ಆಗುವುದು ಖಚಿತವಾಗಿದ್ದು, ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ.

ಈ ಮೂಲಕ ಸಂಕಷ್ಟ ಸಂದರ್ಭದಲ್ಲಿ ಪಕ್ಷಕ್ಕೆ ಬಂಡೆಯಾಗಿಯೇ ನಿಂತಿದ್ದ ಡಿಕೆಶಿಗೆ ನಿರೀಕ್ಷಿತ ಸ್ಥಾನಮಾನ ಸಿಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾರನ್ನು ಎದುರು ಹಾಕಿಕೊಂಡು ಆದಾಯ ತೆರಿಗೆ ದಾಳಿಗೆ ಒಳಗಾಗಿ ದೆಹಲಿ ತಿಹಾರ್‌ ಜೈಲಿನಲ್ಲಿ ಕಾಲ ಕಳೆದ ಕಾಂಗ್ರೆಸ್‌ನ ಕಟ್ಟಾಳು, ಅಪತ್ಬಾಂಧವ ಡಿಕೆಶಿಗೆ ಸಲ್ಲಬೇಕಾದ ಸ್ಥಾನಮಾನವೇ ಸಲ್ಲುತ್ತಿದೆ.

ಆದರೆ ಕೆಪಿಸಿಸಿ ಅಧ್ಯಕ್ಷರಾದರೂ ಡಿಕೆಶಿ ಸರ್ವ ಸ್ವತಂತ್ರರಲ್ಲ. ನಾಲ್ವರು ಕಾರ್ಯಾಧ್ಯಕ್ಷರನ್ನೂ ಘೋಷಣೆ ಮಾಡುವ ಮೂಲಕ ಇತರೆ ಜಾತಿಗಳಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ಕೊಡುವುದರ ಜೊತೆಗೆ ಡಿಕೆಶಿಗೆ ಚೆಕ್‌ಮೇಟ್‌ ಇಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಮುಸ್ಲಿಂ ಕೋಟಾದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಏಕೈಕ ಕಾಂಗ್ರೆಸ್‌ ಶಾಸಕರಾಗಿರುವ ಉಳ್ಳಾಲ ಶಾಸಕ ಯು ಟಿ ಖಾದರ್‌, ಎಸ್‌ಸಿ ಕೋಟಾದಲ್ಲಿ ಚಾಮರಾಜನಗರ ಮಾಜಿ ಸಂಸದ ಧ್ರುವ ನಾರಾಯಣ್‌ ಅಥವಾ ಮಾಜಿ ಸಚಿವ ಹೆಚ್‌ ಸಿ ಮಹದೇವಪ್ಪ, ಎಸ್‌ಟಿ ಕೋಟಾದಿಂದ ಮಾಜಿ ಸಚಿವ, ಬೆಳಗಾವಿ ಜಿಲ್ಲೆಯ ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ನೇಮಕವಾಗಲಿದ್ದಾರೆ.

ಲಿಂಗಾಯತ ಕೋಟಾದಿಂದ ಸದ್ಯ ಕಾರ್ಯಾಧ್ಯಕ್ಷರೂ ಆಗಿರುವ ಈಶ್ವರ್‌ ಖಂಡ್ರೆ ಮುಂದುವರಿಯಲಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ ಸಿ ವೇಣುಗೋಪಾಲ್‌ ಸಭೆ ನಡೆದಿದೆ.

ಇನ್ನು ವಿರೋಧಪಕ್ಷದ ನಾಯಕ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಲಿದ್ದಾರೆ. ಉಪ ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಕೊಟ್ಟಿದ್ದ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಲಿಲ್ಲ.

LEAVE A REPLY

Please enter your comment!
Please enter your name here