ಕರ್ನಾಟಕಕ್ಕೆ ಎಷ್ಟು ಬಾಕಿ ಕೊಡಬೇಕು ಗೊತ್ತಾ ಪ್ರಧಾನಿ ಮೋದಿ..?

ಒಂದೇ ದೇಶ ಒಂದೇ ತೆರಿಗೆ ಘೋಷಣೆಯೊಂದಿಗೆ ಜಾರಿ ಆಗಿದ್ದ ಸರಕು ಮತ್ತು ಸೇವಾ ತೆರಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕದ ಪಾಲನ್ನು ಇನ್ನೂ ಬಾಕಿ ಉಳಿಸಿಕೊಂಡಿದೆ. ಕೇಂದ್ರ ಸರ್ಕಾರದ ಈ ನಡೆ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಘಟಿಸಿದ್ದ ಪ್ರವಾಹ ಪರಿಹಾರ ಕ್ರಮಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಗಸ್ಟ್‌ – ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಜಿಎಸ್‌ಟಿ ಜಾರಿಯಿಂದಾಗುವ ನಷ್ಟವನ್ನು ಸರಿದೂಗಿಸಲು ಪರಿಹಾರದ ರೂಪದಲ್ಲಿ ೭,೦೪೦ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ಕೊಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ ೩,೬೦೦ ಕೋಟಿ ರೂಪಾಯಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಅಂದರೆ ಕೇವಲ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ಅವಧಿಯಲ್ಲಿ ಕೊಡಬೇಕಾದ ಪರಿಹಾರ ಬಾಕಿಯಷ್ಟೇ ಸಿಕ್ಕಿದೆ.

೭,೦೪೦ ಕೋಟಿ ರೂಪಾಯಿಯಲ್ಲಿ ೩,೨೦೦ ಕೋಟಿ ರೂಪಾಯಿ ಇನ್ನೂ ಬಾಕಿ ಇದೆ. ಇನ್ನು ನರೇಗಾದಲ್ಲೂ ರಾಜ್ಯಕ್ಕೆ ಕೇಂದ್ರ ಸರ್ಕಾರ ೭೫೭ ಕೋಟಿ ರೂಪಾಯಿ ಅನುದಾನವನ್ನು ಇನ್ನೂ ಬಿಡುಗಡೆ ಮಾಡಬೇಕಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ೧೭,೨೪೯ ಕೋಟಿ ರೂಪಾಯಿ ಪರಿಹಾರ ರೂಪದಲ್ಲಿ ಸಿಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅಷ್ಟೊಂದು ಪರಿಹಾರ ಬರುವುದರ ಬಗ್ಗೆಯೂ ಅನುಮಾನವಿದೆ.

೨೦೨೦ರ ಆರ್ಥಿಕ ವರ್ಷದಲ್ಲಿ ೯ ದೊಡ್ಡರಾಜ್ಯಗಳಿಗೆ ಕೇಂದ್ರ ಸರ್ಕಾರದ ಕೊಡಬೇಕಿರುವ ಪರಿಹಾರದ ಮೊತ್ತವೇ ಬರೋಬ್ಬರೀ ೭೦ ಸಾವಿರ ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಪರಿಹಾರ ಬಾಕಿ ಬಿಡುಗಡೆ ಮಾಡದೇ ಇದ್ದಲ್ಲಿ ಸುಪ್ರೀಂಕೋರ್ಟ್‌ ಕದ ತಟ್ಟುವ ಎಚ್ಚರಿಕೆ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬರೋಬ್ಬರೀ ೩೫, ೨೯೮ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಕೇರಳ, ಪಂಜಾಬ್‌, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ಪ್ರಮುಖ ರಾಜ್ಯಗಳು ಬಾಕಿ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಿದ್ದವು.

ಜಿಎಸ್‌ಟಿ ಜಾರಿಯಿಂದಾಗುವ ನಷ್ಟ ತುಂಬಿಸಲು ಐದು ವರ್ಷಗಳ ಮಟ್ಟಿಗೆ ರಾಜ್ಯಗಳಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಆಗಿದೆ.

LEAVE A REPLY

Please enter your comment!
Please enter your name here