ಕರಾವಳಿಯ “ಅಲ್ಲಿ” ಏಕೆ ಕ್ವಾರಂಟೈನ್ ಮಾಡುತ್ತಿಲ್ಲ? ಸೋಂಕು ಹೆಚ್ಚಲು ಇದು ಕೂಡ ಕಾರಣನಾ..?

ಹೆಚ್ಚುತ್ತಿರುವ ಕೋವಿಡ್ -19 ಸೋಂಕಿತರ ಸಂಖ್ಯೆಯಿಂದಾಗಿ ಎಲ್ಲರ ಕಣ್ಣು ಉಡುಪಿ ಜಿಲ್ಲೆ ಮೇಲೆ ಬಿದ್ದಿದೆ. ಹಸಿರು ವಲಯದಲ್ಲಿದ್ದ ಜಿಲ್ಲೆ ಕಡುಕೆಂಪು ಬಣ್ಣಕ್ಕೆ ತಿರುಗಿದೆ. ಸದ್ಯ ಅಲ್ಲಿ 785 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಕ್ರಮವಾಗಿ 92,204 ಮತ್ತು 121 ಸೋಂಕಿತರು ಪತ್ತೆಯಾಗಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಕ್ವಾರಂಟೈನ್ ನಲ್ಲಿನ ಅವ್ಯವಸ್ಥೆ ಎಂದು ಬಹಳಷ್ಟು ಜನ ದೂರುತ್ತಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಸುಮಾರು 7000 ಜನ ಮಹಾರಾಷ್ಟ್ರದಿಂದ ಬಂದಿದ್ದಾರೆ, ಈಗಲೂ ದಿನಕ್ಕೆ 200 ಮಂದಿ ಬರುತ್ತಿದ್ದಾರೆ. ಇವರಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.ಪ್ರತಿ ಪಂಚಾಯತ್ ಗಳಲ್ಲಿ 50 ಜನರಿಗೆ ಕ್ವಾರಂಟೈನ್ ಕೇಂದ್ರ ತೆರೆಯುವಂತೆ ಜಿಲ್ಲಾಡಳಿತ 158 ಗ್ರಾಮಪಂಚಾಯತ್ ಗಳಿಗೆ ತಿಳಿಸಿದೆಯಂತೆ. ಹೀಗೆ ಪ್ರಾರಂಭಗೊಂಡ ಕ್ವಾರಂಟೈನ್ ಕೇಂದ್ರಗಳಿರುವುದು ಸರ್ಕಾರಿ ಶಾಲೆಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ.

ಬೇರೆ ಜಿಲ್ಲೆಗಳಲ್ಲಿ ಕ್ವಾರಂಟೈನ್ ಗೆ ಕಟ್ಟಡಗಳು ಸಿಗದೆ ಇರುವುದಕ್ಕೆ ಸಮರ್ಥನೆ ಇರಬಹುದು. ಉಡುಪಿ, ದಕ್ಷಿಣ ಕನ್ನಡದಲ್ಲಿಯೂ ಈ ಪರಿಸ್ಥಿತಿಯೇ?

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಉನ್ನತ ಶಿಕ್ಷಣದ ಕಾಶಿ-ರಾಮೇಶ್ವರಗಳೆಂಬ ಖ್ಯಾತಿ ಪಡೆದಿವೆ. ಈ ಎರಡು ಜಿಲ್ಲೆಗಳಲ್ಲಿ 29 ವೈದ್ಯಕೀಯ ಕಾಲೇಜು ಮತ್ತು 23 ಎಂಜನಿಯರಿಂಗ್ ಕಾಲೇಜುಗಳಿವೆ. ಇವುಗಳು ಬಹುತೇಕ ಖಾಲಿ ಇವೆ. ಅತೀ ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಮಣಿಪಾಲದ ಪೈಗಳು ಮತ್ತು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಸೇರಿವೆ. ಇವುಗಳ ಜೊತೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಗಳ ಕೂಡಾ ಇವೆ.ನನಗಿರುವ ಮಾಹಿತಿ ಪ್ರಕಾರ ಇಲ್ಲೆಲ್ಲೂ ಕ್ವಾರಂಟೈನ್ ಕೇಂದ್ರಗಳಿಲ್ಲ.

ಕ್ವಾರಂಟೈನ್ ಕೇಂದ್ರ ತೆರೆಯಲು ಈ ಶಿಕ್ಷಣ ಸಂಸ್ಥೆಗಳಿಗೆ ಡಿಸಿಯೋ, ತಹಶೀಲ್ದಾರೋ ಪೋನ್ ಮಾಡಿದ ಕೂಡಲೇ’ ಆ ಸಂಸ್ಥೆಗಳ ಗೋಜಿಗೆ ಹೋಗದಂತೆ ‘’ಮೇಲಿಂದ’’ ಪೋನ್ ಬರ್ತಿದೆಯಂತೆ.

ಕೊನೆಗೆ ಉಳಿದದ್ದು ಸರ್ಕಾರಿ ಶಾಲೆಗಳು ಮತ್ತು ಕಲ್ಯಾಣ ಮಂಟಪಗಳು. ಅಲ್ಲಿ 50-100 ಜನರನ್ನು ಹಾಸಿಗೆ ಹಾಕಿ ಸಾಲಾಗಿ ಮಲಗಿಸಲಾಗಿದೆ. ಇರುವ ಒಂದೆರಡು ಟಾಯ್ಲೆಟ್ ಗಳನ್ನು ಎಲ್ಲರೂ ಬಳಸಿದ್ದಾರೆ. ಯಾವ ಸುರಕ್ಷಿತ ಕ್ರಮವೂ ಇಲ್ಲ. ಈ ಸಮಸ್ಯೆಯೆ ಬೇಡ ಎಂದು ಪ್ರಾರಂಭದ ದಿನಗಳಲ್ಲಿ ಅಧಿಕಾರಿಗಳು ಕೋವಿಡ್ ಪರೀಕ್ಷೆಯನ್ನು ಮಾಡದೆ ಜನರನ್ನು ಕ್ವಾರಂಟೈನ್ ನಿಂದ ಮನೆಗೆ ಕಳಿಸಿದ್ದಾರೆ. ಅವರು ಮನೆಗೆ ಹೋಗಿ ಎಲ್ಲೆಲ್ಲಿ ಹರಡಿದ್ದಾರೋ ಗೊತ್ತಿಲ್ಲ.

ನಮ್ಮ ಶಿಕ್ಷಣ ಸಂಸ್ಥೆಗಳ ಧಣಿಗಳು ಪ್ರಭಾವ ಬಳಸಿ ಶಿಕ್ಷಣ ಸಂಸ್ಥೆಗಳನ್ನು ಸುರಕ್ಷಿತವಾಗಿ ಉಳಿಸಿಕೊಂಡಿದ್ದಾರೆ, ಈ ಎರಡು ಜಿಲ್ಲೆಗಳು ಸುರಕ್ಷಿತವಾಗಿ ಉಳಿಯಲಿವೆಯೇ?
-ದಿನೇಶ್ ಅಮೀನ್‌ ಮಟ್ಟು, ಖ್ಯಾತ ಪತ್ರಕರ್ತರು

LEAVE A REPLY

Please enter your comment!
Please enter your name here