ಕಪ್ಪು ಹಣದ ಮಾಹಿತಿ ಕೊಡಲ್ಲ – ಪ್ರಧಾನಿ ಮೋದಿ ಸರ್ಕಾರದಿಂದ ಶಾಕ್‌..!

ಸ್ವಿಸ್‌ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟಿರುವವರ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳಿದೆ. ೨೦೧೪ರಲ್ಲಿ ಕಪ್ಪು ಹಣದ ವಿರುದ್ಧದ ಹೋರಾಟವನ್ನೇ ಪ್ರಮುಖ ಚುನಾವಣಾ ವಿಷಯವಾಗಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

ಪ್ರಧಾನಿ ಮೋದಿ ಸರ್ಕಾರ ಹೇಳಿದ್ದೇನು..?

  • ಸ್ವಿಟ್ಜರ್ಲೆಂಡ್‌ ಜೊತೆಗೆ ಭಾರತ ಮಾಡಿಕೊಂಡಿರುವ ಒಪ್ಪಂದದಲ್ಲಿನ ಗೌಪ್ಯತೆ ಒಳಗೆ ಎಲ್ಲ ಮಾಹಿತಿಯೂ ಬರುವ ಕಾರಣ ಆ ಗೌಪ್ಯತೆಯ ನಿಯಮಗಳನ್ನು ಉಲ್ಲಂಘಿಸಿ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ.
  • ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್‌ ೮(೧)(ಎ) ಮತ್ತು ಸೆಕ್ಷನ್‌ ೮(೧)(ಎಫ್‌) ಅಡಿಯಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ
  • ಸೆಕ್ಷನ್‌ ೮(೧)(ಎ) ಅಡಿಯಲ್ಲಿ ಭಾರತದ ಸಾರ್ವಭೌಮತೆ, ಐಕ್ಯತೆ, ದೇಶದ ಭದ್ರತೆ, ರಾಜತಾಂತ್ರಿಕ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಮತ್ತು ವಿದೇಶ ರಾಷ್ಟ್ರಗಳೊಂದಿಗಿನ ಸಂಬಂಧಗಳಿಗೆ ಧಕ್ಕೆ ಆಗುವ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶವಿಲ್ಲ.
  • ಸೆಕ್ಷನ್‌ ೮(೧)(ಎಫ್‌) ಅಡಿಯಲ್ಲಿ ವಿದೇಶದಿಂದ ಗೌಪ್ಯವಾಗಿ ಪಡೆದ ಮಾಹಿತಿಯನ್ನು ಭಾರತ ಸರ್ಕಾರ ಬಹಿರಂಗಪಡಿಸದೇ ಇರಬಹುದು.

ಸ್ವಿಸ್‌ ಬ್ಯಾಂಕ್‌ನಲ್ಲಿ ಯಾರೆಲ್ಲ ಕಪ್ಪು ಹೂಡಿದ್ದಾರೆ, ಅವರ ಬ್ಯಾಂಕ್‌ ಮಾಹಿತಿಗಳ, ಇಟ್ಟಿರುವ ಹಣದ ಮೊತ್ತ ಎಷ್ಟು ಎಂಬ ಬಗ್ಗೆ ಮಾಹಿತಿ ಕೋರಿ ಕೇಂದ್ರ ಹಣಕಾಸು ಸಚಿವಾಲಯದ ಮುಂದೆ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು.

ಕಪ್ಪು ಹಣದ ಮಾಹಿತಿ ವಿನಿಮಯ ಸಂಬಂಧ ಸ್ವಿಟ್ಜರ್ಲೆಂಡ್‌ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ೭೫ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದು. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದ ಮೊದಲ ಬಾರಿಗೆ ಸ್ವಿಸ್‌ಬ್ಯಾಂಕ್‌ ಮಾಹಿತಿಯನ್ನು ನೀಡಿತ್ತು.

೨೦೧೧ರಲ್ಲಿ ಅಂದಿನ ಯುಪಿಎ ಸರ್ಕಾರ ವಿದೇಶದಲ್ಲಿರುವ ಕಪ್ಪು ಹಣ ಎಷ್ಟಿರಬಹುದು ಎಂಬ ಬಗ್ಗೆ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಸಮಿತಿ ಮೂಲಕ ಅಧ್ಯಯನ ನಡೆಸಿತ್ತು. ಅದರ ಪ್ರಕಾರ ೧೯೮೦ ರಿಂದ ೨೦೧೦ರ ಅವಧಿಯಲ್ಲಿ ೩೮೪ ಬಿಲಿಯನ್‌ ಡಾಲರ್‌ನಿಂದ ೪೯೦ ಬಿಲಿಯನ್‌ ಡಾಲರ್‌ವರೆಗೆ ಭಾರತೀಯರ ಕಪ್ಪು ಹಣ ವಿದೇಶದಲ್ಲಿದೆ ಎಂದು ಅಂದಾಜಿಸಲಾಗಿತ್ತು.

ರಾಷ್ಟ್ರೀಯ ಹಣಕಾಸು ನಿರ್ವಹಣಾ ಸಂಸ್ಥೆಯ ಪ್ರಕಾರ ೧೯೯೦ ರಿಂದ ೨೦೦೮ರವರೆಗೆ ಭಾರತದಿಂದ ವಿದೇಶಕ್ಕೆ ಹರಿದ ಕಪ್ಪು ಹಣದ ಮೊತ್ತ ೯,೪೧,೮೩೭ ಕೋಟಿ ರೂಪಾಯಿ (೨೧೬.೪೮ ಬಿಲಿಯನ್‌ ಡಾಲರ್‌). ದೇಶದ ಒಟ್ಟು ನಿವ್ವಳ ಉತ್ಪಾದನಾ ಅರ್ಥಾತ್‌ ಜಿಡಿಪಿಯ ಶೇಕಡಾ ೦.೨ ರಿಂದ ೦.೭೪ರವರೆಗೆ ಕಪ್ಪು ಹಣ ವಿದೇಶಕ್ಕೆ ಹರಿದಿದೆ ಎಂದು ಅಂದಾಜಿಸಲಾಗಿದೆ.

೨೦೧೪ರಲ್ಲಿ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ವಿದೇಶದಿಂದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ ೧೫ ಲಕ್ಷ ರೂಪಾಯಿ ಹಾಕುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಇದರ ಜೊತೆಗೆ ಬಿಜೆಪಿ ಕಾರ್ಯಕರ್ತರು ಸ್ವಿಸ್‌ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿರುವವರ ಪಟ್ಟಿಯೊಂದನ್ನು ವಾಟ್ಸಾಪ್‌ಗಳಲ್ಲಿ ಹರಿಬಿಟ್ಟಿದ್ದರು. ಆ ಪಟ್ಟಿ ಸುಳ್ಳೆಂದು ಸಾಬೀತಾಗಿದೆ.

LEAVE A REPLY

Please enter your comment!
Please enter your name here