ಕಂಬಳದ ಉಸೈನ್ ಬೋಲ್ಟ್- ಶ್ರೀನಿವಾಸ ಗೌಡ ಮಿಜಾರು

ನವಾಝ್ ಮದ್ಪಾಡಿ

ಹಬ್ಬಗಳ ನಾಡು, ಸಂಪ್ರದಾಯದ, ಸಾಮರಸ್ಯದ ಬೀಡು, ತನ್ನದೆ ಸೊಗಡು ತನ್ನದೆ ಆಚರಣೆಯ ಚೌಕ್ಕಟ್ಟಿನಲ್ಲಿ ನೂರಾರು ಹಬ್ಬ, ಸಾವಿರಾರು ವೈವಿಧ್ಯತೆ, ಲಕ್ಷಾಂತರ ಮನದಲ್ಲಿ ನೆಲೆ ನಿಲ್ಲುವ, ಕೋಟ್ಯಾಂತರ ವರ್ಷದ ಇತಿಹಾಸದ ನನ್ನ ಕರಾವಳಿ.

ಪ್ರಾಮಾಣಿಕತೆ, ಸೇವಾ ಮನೋಭಾವ, ಮೊದಲಾದ ಮನುಷ್ಯ ಮೌಲ್ಯಗಳು ಸದಾ ಜೀವಂತವಿರುವ ಈ ಕರಾವಳಿಯಲ್ಲಿ ಕಂಬಳವೆಂದರೆ ಹಬ್ಬವೇ ಸರಿ. ಕರಾವಳಿಯಲ್ಲಿ ಮಾತ್ರ ಕಾಣ ಸಿಗುವ ಕಂಬಳ ಕ್ರೀಡೆಯು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಗ್ರಾಮೀಣ ರೈತರ ಒಂದು ಪ್ರಧಾನ ಮನರಂಜನೆಯ ಹಬ್ಬ.

ಕಂಬಳಕ್ಕೆ ಸೇರುವ ಜನರ ಸಂತೆಯನ್ನು ಕಣ್ತುಂಬಿಕೊಳ್ಳುವುದೆಂದರೆ ಅದೊಂದು ರೋಚಕ ಕ್ಷಣ. ಕಂಬಳ ಬರೀ ಜಾನಪದ ಕ್ರೀಡೆಯಲ್ಲ, ಮನಸುಗಳನ್ನು ಬೆಸೆಯುವ, ಆಟಕ್ಕೂ ಮೀರಿದ ಜೀವನ ಮೌಲ್ಯಗಳನ್ನು ಕಲಿಸುವ ಆತ್ಮಾವಲೋಕನದ ಕಚಗುಳಿ. ಕರಾವಳಿಯಲ್ಲಿ ಕಂಬಳ ಕ್ರೀಡೆಗೆ ಅತೀ ಎತ್ತರದ ಸ್ಥಾನವಿದೆ.

ನನ್ನ ತಾತನವರ ಕಾಲದಲ್ಲಿ ನಮ್ಮ ಮನೆಯಲ್ಲಿ ನಾವು ಕೂಡ ಕಂಬಳದ ಕೋಣಗಳನ್ನು ಸಾಕುತ್ತಿದ್ದೆವು. ಬೊಳ್ಳ ಮತ್ತು ಕಾಳ ಇದು ನಾವು ಸಾಕುತ್ತಿದ್ದ ಕಂಬಳದ ಕೋಣಗಳು. ಬೊಳ್ಳ ಮತ್ತು ಕಾಳನಿಗೆ ನಮ್ಮ ಮನೆಯ ಸದಸ್ಯರೊಂದಿಗೆ ಅವಿನಾಭಾವ ಸಂಬಂಧವಿತ್ತು. ಮನೆಯ ಮಕ್ಕಳಿಗಿಂತ ಹೆಚ್ಚು ಕಾಳಜಿ ವಹಿಸಿ ಅವುಗಳನ್ನು ಸಾಕಿ ಸಲಹುತ್ತಿದ್ದೆವು.

ಬೆಳಿಗ್ಗೆ ಬೇಗ ಎದ್ದು ಕೋಣಗಳ ಮೈ ತಿಕ್ಕಿ, ಎಣ್ಣೆ ಸವರಿ, ತಿನಿಸು ಕೊಡುವುದು ಲಿಂಗಪ್ಪಣ್ಣ ಹಾಗೂ ನಾಗರಾಜರ (ಮನೆಯ ಕೆಲಸದಾಳುಗಳು) ದಿನನಿತ್ಯದ ಪರಿಪಾಠವಾಗಿತ್ತು.

“ಮೇಲಿಟ್ಟರೆ ಕಾಗೆ ಕೊಂಡೋದೀತು. ಕೆಳಗಿಟ್ಟರೆ ಇರುವೆ ಕೊಂಡೋದೀತು.” ಕಂಬಳದ ಕೋಣಗಳ ಆರೈಕೆ ನೋಡಿಯೇ ಈ ಗಾದೆ ಹುಟ್ಟಿದೆಯೇ ಎಂಬ ಅನುಮಾನ ಹಲವು ಬಾರಿ ನನ್ನ ಕಾಡಿದ್ದುಂಟು.

ಕೋಣಗಳ ಆಹಾರ ಕ್ರಮ ನೋಡಿದರೆ ಪಕ್ಕಾ ರಾಜ ಮರ್ಯಾದೆ. ನಿತ್ಯ ಎರಡು ಹೊತ್ತು ಹೊಟ್ಟೆ ತುಂಬಾ ಬೇಯಿಸಿದ ಹುರುಳಿ. ಜತೆಗೆ ಬೈಹುಲ್ಲು, ಧಾರಾಳ ನೀರು. ತೌಡು ಮಿಶ್ರಿತ ಹುರುಳಿಯ ವಿಶೇಷ ಭಕ್ಷ್ಯ. ಜತೆಯಲ್ಲಿ ಆಗಾಗ ಮೊಳಕೆ ಬರಿಸಿದ ಹುರುಳಿಯ ಸ್ಪೆಷಲ್‌ ಫುಡ್‌. ಬೇಸಿಗೆಯಲ್ಲಿ ಕಲ್ಲಂಗಡಿ, ಕುಂಬಳಕಾಯಿ ಇವೇ ಮುಂತಾದ ತಂಪು ಹಣ್ಣುಗಳ ಭೋಜನ. ಹೊಟ್ಟೆ ಬೆಳೆದು, ಬೊಜ್ಜು ಬಂದರೆ ಓಟಕ್ಕೆ ಧಕ್ಕೆ ಎಂಬ ಕಾರಣಕ್ಕೆ ವರ್ಷದ ನಿಗದಿತ ಅವಧಿಯಲ್ಲಿ ಹುರುಳಿಯ ಜತೆಗೆ ತೆಂಗಿನೆಣ್ಣೆ ಸೇವನೆ.

ಜಿಲ್ಲೆಯ ಬಹುತೇಕ ಕಂಬಳ ಕ್ರೀಡೆಗಳಲ್ಲಿ ನಮ್ಮ ಕೋಣವನ್ನು ಕೊಂಡೊಯ್ಯುತ್ತಿದ್ದೆವು. ಹಲವು ಕಡೆಗಳಲ್ಲಿ ಹಗ್ಗ ವಿಭಾಗದ ಸ್ಪರ್ಧೆಯಲ್ಲಿ ಬೊಳ್ಳ ಮತ್ತು ಕಾಳ ಹಲವು ಪ್ರಶಸ್ತಿಗಳನ್ನು ಪಡೆದಿದೆ.

ಕಂಬಳದಲ್ಲಿ ಕೋಣಕ್ಕಿಂತ ಒಂದು ಪಟ್ಟು ಹೆಚ್ಚು ಮಹತ್ವ ಅದನ್ನು ಓಡಿಸುವ ವ್ಯಕ್ತಿಗೆ. ಕೋಣದ ವೇಗಕ್ಕೆ ಅನುಗುಣವಾಗಿ ಓಡುತ್ತಾ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗಬೇಕು. ಕಂಬಳದ ಕೆರೆಗಿಳಿದು ಕೋಣದ ಯಜಮಾನ ಕೋಣದ ಹಗ್ಗವನ್ನು ಓಟಗಾರನಿಗೆ ಬಿಟ್ಟು ಕೊಟ್ಟ ಬಳಿಕ ಕೋಣದ ಸಂಪೂರ್ಣ ಹಿಡಿತ, ಜವಾಬ್ದಾರಿ ಆತನ ಮೇಲಿರುತ್ತದೆ.

ಕರಾವಳಿಯಲ್ಲಿ ಹಲವು ನುರಿತ ಕಂಬಳದ ಓಟಗಾರರಿದ್ದಾರೆ. ಕಂಬಳ ಸ್ಪರ್ಧೆಯಲ್ಲಿ ಗೆದ್ದ ಕೋಣಗಳನ್ನು ಆದರಿಸಿ ಗೌರವಿಸುವುದರ ಜೊತೆಗೆ ಓಟಗಾರರನ್ನೂ ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡುತ್ತಾರೆ.

ಇದೀಗ ಕಂಬಳ ಗದ್ದೆಯಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಶ್ರೇಷ್ಠ ಓಟಗಾರರಾದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರವರು ಓಟದಲ್ಲಿ ವಿಶ್ವಖ್ಯಾತಿ ಪಡೆದ ಉಸೈನ್ ಬೋಲ್ಟ್’ರನ್ನು ಹಿಂದಿಕ್ಕಿರುವ ಸುದ್ಧಿ ಎಲ್ಲೆಡೆ ವೈರಲ್ ಅಗುತ್ತಿದ್ದು ಸರಕಾರ ಕೂಡಾ ಅವರಿಗೆ ಪ್ರೊತ್ಸಾಹ ನೀಡಲು ಮುಂದಾಗಿದೆ.

ಕಂಬಳ ಕ್ರೀಡೆಯ ಓಟಗಾರನೊಬ್ಬ ವಿಶ್ವ ವಿಖ್ಯಾತಿ ಪಡೆದಿದ್ದು ಸಂತಸದ ವಿಷಯ. ಇನ್ನು ಮುಂದೆ ಕಂಬಳ ಕ್ರೀಡೆಯು ಶ್ರೀನಿವಾಸ ಗೌಡರ ಮೂಲಕ ಇನ್ನಷ್ಟು ಜಗತ್ಪ್ರಸಿದ್ಧಿ ಪಡೆಯಲಿ ಹಾಗೂ ಶ್ರೀನಿವಾಸ ಗೌಡರು ಮುಂದಕ್ಕೆ ಓಟದಲ್ಲಿ ಉಸೈನ್ ಬೋಲ್ಟ್ ನ್ನು ಹಿಂದಿಕ್ಕಿ ಪದಕ ಪಡೆದು ಇತಿಹಾಸ ನಿರ್ಮಿಸುವ ಮೂಲಕ ನನ್ನ ಭಾರತ ದೇಶದ ತ್ರಿವರ್ಣ ಧ್ವಜದ ಘನತೆಯನ್ನು ಇನ್ನಷ್ಟು ಹೆಚ್ಚಿಸಲಿ.

ಹಾಗೇ ಸರಕಾರವು ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಕರಾವಳಿಯ ಹೆಮ್ಮೆಯ ಕಂಬಳಕ್ಕೆ ಪ್ರೊತ್ಸಾಹ ಕೊಡುವ ಮೂಲಕ ಇದರ ಬಗ್ಗೆ ಮುಂದಿನ ಪೀಳಿಗೆಗೆ ಆಸಕ್ತಿ ಬೆಳೆಸಬೇಕು.ಕಂಬಳ ಕ್ರೀಡೆವು ನಮ್ಮೊಂದಿಗೆ ಸದಾ ಇರುವಂತಾಗಲಿ.

ಕಂಬಳವು ಜಾತಿ, ಧರ್ಮ, ಮತ, ಪಂಥ, ರಾಜಕೀಯದಿಂದ ಮುಕ್ತವಾದ ಜಾನಪದ ಹಬ್ಬವಾಗಿ ಈ ಸಮಾಜದಲ್ಲಿ ಚಿರಾಯುವಾಗಲಿ. ಕಂಬಳವು ತನ್ನ ಪೂರ್ವ ಸಂಪ್ರದಾಯವನ್ನು ಹಾಳುಮಾಡಿಕೊಳ್ಳದೆ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಮೂಡಿ ಬರಲಿ ಎನ್ನುವುದೇ ನನ್ನ ಆಶಯ.

LEAVE A REPLY

Please enter your comment!
Please enter your name here