ಒಂದು ಕೊತ್ತಂಬರಿ ಸೊಪ್ಪಿನ….ಸಣ್ಣ ಕಥೆ

✍️ಶಾಂತಾರಾಮ್ ಶೆಟ್ಟಿ

ಹೇಗೂ ಹೊರಗೆ ಕಾಲಿಡುವ ಹಾಗಿಲ್ಲ , ಮನೆಯಲ್ಲೇ ಟೆರೇಸ್ ಗಾರ್ಡನ್ನಲ್ಲಿ ತರಕಾರಿ ಬೆಳೆಸೋಣ ಅನ್ನಿಸ್ತು .

ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆಯುವುದು ಸುಲಭ ಅಂತ ಗೂಗಲಮ್ಮ ಹೇಳಿದಳು . You tube ಸಣ್ಣ ಚಟ್ಟಿ ಒಳಗೆ ಕೊತ್ತಂಬರಿ ಬೆಳೆಯುವುದು ಹೇಗೆಂದು ಕೊತ್ತಂಬರಿ ಸೊಪ್ಪು ಬಿಡಿಸಿದಂತೆ ಹೇಳಿ ಕೊಟ್ಟಿತು. ಒಂದು ಚಟ್ಟಿ , ಆರ್ಗಾನಿಕ್ ಗೊಬ್ಬರ, ವಾಟರ್ ಸ್ಪ್ರೇಯರ್ , ಅದು ಇದು ಮಣ್ಣು ಮಸಿ ಎಲ್ಲಾ ಸೇರಿ Amazon ಹುಡುಗ 830 ರೂಪಾಯಿ scan ಮಾಡಿದ ನಂತರವೇ ಸಾಮಾನು ಕೈಗಿಟ್ಟ.

ಕೊತ್ತಂಬರಿ ಬೀಜ ಎರಡು ಸೀಳಾಗುವಂತೆ ಅದರ ಮೇಲೆ ಸಣ್ಣ ರೋಲರ್ ಉರುಳಿಸಿ ಬೀಜ ಬಿತ್ತಿದ್ದಾಯ್ತು, ಹನಿ ನೀರು ಹಾಸಿದ್ದಾಯ್ತು . ಇನ್ನು ಮೊಳಕೆಯೊಡೆಯುವುದು ಮತ್ತು ಕಾಯುವುದು ಬಾಕಿ! You tube ಪ್ರಕಾರ ಒಂಬತ್ತು ದಿನಗಳಲ್ಲಿ ಒಂದಿಂಚು ಗಿಡ ಚಟ್ಟಿ ತುಂಬಾ ಹುಲುಸಾಗಿ , ಹಸಿರಾಗಿ ಬೆಳೀಬೇಕಿತ್ತು .

ಹೂಂ ಆದ್ರೆ ವಾಸ್ತವ ಹಾಗಲ್ಲ , ಅಲ್ಲೊಂದು ಇಲ್ಲೊಂದು ಮೊಳಕೆ ಒಡೆದು ತನ್ನ ಅಣ್ಣ ತಮ್ಮಂದಿರು ಯಾರಾದ್ರೂ ಇದ್ದಾರಾ ನೋಡಿ ಯಾರೂ ಹುಟ್ಟಿಲ್ಲ ಅಂತ ಖಾತ್ರಿಯಾಗಿ ಮರುದಿನ ಅವೂ ಆತ್ಮಹತ್ಯೆ ಮಾಡಿ ಕೊಂಡವು. ಚಟ್ಟಿ ತುಂಬಾ ಖಾಲಿ ಕೃಷಿ. ಯಾಕೆ ಹೀಗಾಯ್ತು ?, ಮಣ್ಣಿನ ಪರಿಚಯವಿಲ್ಲದವರ ಜೊತೆ ಮಾತೇಕೆ ಎಂದು ಭೂತಾಯಿ ಮುನಿದಳಾ ? ಇವನಾವ ಸೀಮೆ ರಾಜ ಅಂತ ಕೊತ್ತಂಬರಿ ಬೀಜ ನನ್ನ ಮಾತಿಗೆ ಸೊಪ್ಪು ಹಾಕದೇ ಕಡೆಗಣಿಸಿತಾ ?

ಉತ್ತರಕ್ಕಾಗಿ ಏನೂ ಖರ್ಚಿಲ್ಲದೆ ಎರಡು ವಾರದಲ್ಲಿ ಮುಖ ತುಂಬಾ ಬೆಳೆದ ಗಡ್ಡ ಕೆರೆದೆ. ಗಡ್ಡ ಉತ್ತರಿಸಲಿಲ್ಲ. ನನಗೆ ಯಾಕೆ ಕೊತ್ತಂಬರಿ ಉಸಾಬರಿ ಅನ್ನಿಸಿರಬೇಕು ಅದಕ್ಕೆ !

ಆಗೋದಲ್ಲ,ಹೋಗೋದಲ್ಲ . ಯಾವುದೂ ಯೂ ಟ್ಯೂಬ್ ನೋಡಿದಷ್ಟು ಸುಲಭ ಅಲ್ಲ. ಕೃಷಿತೋ ಜಾಸ್ತಿ ದುರ್ಭಿಕ್ಷಮ್ ! 830 ರೂಪಾಯಿ ಕೂತಲ್ಲೇ ಗೋತಾ. ಚಟ್ಟಿಯನ್ನು ಮಣ್ಣು ಸಮೇತ ಮರದ ಬುಡಕ್ಕೆ ಬಿಸಾಕಿ ಎಲ್ಲಾ ಸ್ವಚ್ಛ ಗೊಳಿಸಿ ಬಾಲ್ಕನಿಯಲ್ಲಿ ಕೆಳಗೆ ಇಣುಕಿದರೆ ….

ಆಗ, ತಾನೇ ಹೊತ್ತು ಕೊತ್ತಂಬರಿ ಸೊಪ್ಪು ಮಾರುವ ರೈತನಲ್ಲಿ ಚೌಕಾಸಿ ಮಾಡ್ತಾ ಇದ್ದಳು ನನ್ನ ಹೆಂಡತಿ …”ಕಟ್ಟಿಗೆ ಇಪ್ಪತ್ತು ರುಪಾಯಾ? ಯಾಕೆ ಅಷ್ಟು ರೇಟು ? ಎರಡು ತೊಕೊಂಡ್ರೆ ಮೂವತ್ತಕ್ಕೆ ಕೊಡ್ತೀಯಾ ?”ಪಾಪ ಆತ ಗತಿಯಿಲ್ಲದೆ ‘ಕೊಡಿ’ ಎಂದು ಕೈಚಾಚಿದ.

ರೈತನ ಆತ್ನಹತ್ಯೆಗೆ ಹಗ್ಗ ನೇಯಲು ನಮ್ಮ ಮನೆಯಿಂದ ಮೂವತ್ತು ರೂಪಾಯಿ ಸಂದಾಯವಾಯ್ತು !

LEAVE A REPLY

Please enter your comment!
Please enter your name here