ಏಪ್ರಿಲ್‌ 14ಬಳಿಕ ಲಾಕ್‌ಡೌನ್‌ ತೆಗೀತಾರಾ..? – ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು..?

ಕೊರೋನಾ ತಡೆಗಾಗಿ ಏಪ್ರಿಲ್‌ 14ರವರೆಗೆ ಅಂದರೆ 21 ದಿನಗಳ ಕಾಲ ಹೇರಲಾಗಿರುವ ಲಾಕ್‌ಡೌನ್‌ ಹಂತ ಹಂತವಾಗಿ ತೆರವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸುಳಿವು ನೀಡಿದ್ದಾರೆ.

ವೀಡಿಯೋ ಕಾನ್ಫೆರೆನ್ಸ್‌ ಮೂಲಕ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಲಾಕ್‌ಡೌನ್‌ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲದ ಕಡೆಗಳಲ್ಲಿ ನಿಧಾನಕ್ಕಾಗಿ ಲಾಕ್‌ಡೌನ್‌ ತೆರವುಗೊಳಿಸಿ ಕಚೇರಿಗಳನ್ನು ತೆರೆಯುವುದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಪ್ರಧಾನಿ ಮೋದಿ ತಮ್ಮ ಸಚಿವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯಕ್ಕೆ ಕರ್ನಾಟಕ ಐದು ಜಿಲ್ಲೆಗಳನ್ನು ಕೊರೋನಾ ಹಾಟ್‌ಸ್ಪಾಟ್‌ಗಳೆಂದು ಘೋಷಿಸಲಾಗಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಆ ಐದು ಜಿಲ್ಲೆಗಳು. ಕರ್ನಾಟಕದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಇವತ್ತು 163ಕ್ಕೆ ಏರಿಕೆ ಆಗಿದ್ದು, 12 ಹೊಸ ಪ್ರಕರಣಗಳು ವರದಿ ಆಗಿವೆ. ಇವುಗಳಲ್ಲಿ ಏಳು ಪ್ರಕರಣ ಮೈಸೂರಲ್ಲೂ, ಬಾಗಲಕೋಟೆ, ಬೆಂಗಳೂರಲ್ಲಿ ತಲಾ 2 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1 ಪ್ರಕರಣ ವರದಿ ಆಗಿದೆ.

ಆದರೆ ಏಕಕಾಲಕ್ಕೆ ದೇಶಾದ್ಯಂತ ಲಾಕ್‌ಡೌನ್‌ ತೆಗೆಯುವ ಪರ ಪ್ರಧಾನಿ ಮೋದಿ ಸಿದ್ಧರಿಲ್ಲ. ಲೌಕ್‌ಡೌನ್‌ ತೆರವುಗೊಳಿಸುವುದಾದರೆ ವಲಯವಾರು ತೆಗೆಯಬೇಕೋ ಅಥವಾ ಜಿಲ್ಲಾವಾರು ತೆಗೆಯಬೇಕೋ ಎಂಬ ಬಗ್ಗೆಯೂ ತಿಳಿಸುವಂತೆ ಸಚಿವರಿಗೆ ಪ್ರಧಾನಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಲಾಕ್‌ಡೌನ್‌ ಕ್ರಮಗಳ ಜೊತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುವುದು ಅವಶ್ಯಕ ಎಂದು ಹೇಳಿರುವ ಪ್ರಧಾನಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇತು ಆಪ್‌ ಡೌನ್‌ಲೋಡ್‌ಗೆ ಜನರನ್ನು ಪ್ರೇರೆಪಿಸುವಂತೆ ಸಚಿವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here