ಕರ್ನಾಟಕದಲ್ಲೇ ದುಬಾರಿ ಬೆಲೆಯ ಆ್ಯಪಲ್ ಕಂಪನಿಯ ಐಫೋನ್ ತಯಾರಾಗಬೇಕೆಂಬ ಬಹು ವರ್ಷಗಳ ಪ್ರಯತ್ನ ಈಡೇರಿದ್ದು, ಮುಂದಿನ ತಿಂಗಳು ಅಂದರೆ ಜುಲೈ 1ರಂದು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಐಫೋನ್ ತಯಾರಿಕೆಗಾಗಿ ಭೂಮಿಯನ್ನು ಹಸ್ತಾಂತರ ಮಾಡಲಿದೆ.
ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಕರ್ನಾಟಕದಲ್ಲೇ ಉತ್ಪಾದಿಸಿದ ಐಫೋನ್ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.
ಈ ಯೋಜನೆಗೆ ಪ್ರಾಜೆಕ್ಟ್ ಎಲಿಫೆಂಟ್ ಎಂದು ಹೆಸರಿಡಲಾಗಿದೆ.
ಇವತ್ತು ಬೆಂಗಳೂರಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆಗೆ ತೈವಾನ್ ಮೂಲದ ಫಾಕ್ಸ್ಕಾನ್ ಕಂಪನಿಯ ಪ್ರತಿನಿಧಿಗಳ ಸಭೆ ನಡೆಸಿದರು.
ಏಪ್ರಿಲ್ನಿಂದಲೇ ಐಫೋನ್ ತಯಾರಿಕೆ ಆರಂಭ:
ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಕರ್ನಾಟಕದಲ್ಲೇ ಉತ್ಪಾದಿಸಿದ ಐಫೋನ್ ಮಾರುಕಟ್ಟೆಗೆ ಬರಲಿದೆ. ಪ್ರತಿ ವರ್ಷ 2 ಕೋಟಿ ಐಫೋನ್ ಉತ್ಪಾದನೆ ಗುರಿ ಹೊಂದಲಾಗಿದೆ.
ಹೂಡಿಕೆ:
ತೈವಾನ್ ಮೂಲದ ಫಾಕ್ಸ್ಕಾನ್ಗೆ ಕರ್ನಾಟಕದಲ್ಲಿ ಐಫೋನ್ ಉತ್ಪಾದನೆಗಾಗಿ 13 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
ಉದ್ಯೋಗ ಸೃಷ್ಟಿ:
ಐಫೋನ್ ಉತ್ಪಾದನಾ ಘಟಕ ಆರಂಭದಿಂದ 50 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಉತ್ಪಾದನಾ ಘಟಕಕ್ಕೆ ಬೇಕಾಗುವ ಕೌಶಲ್ಯಾಭಿವೃದ್ಧಿಗಾಗಿ ರಾಜ್ಯ ಸರ್ಕಾರವೇ ತರಬೇತಿ ನೀಡಲಿದೆ.
ಏರ್ಪೋರ್ಟ್ ಬಳಿ ಭೂಮಿ ಮಂಜೂರು:
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯಲ್ಲೇ 300 ಎಕರೆ ಭೂಮಿಯನ್ನು ಹಸ್ತಾಂತರ ಮಾಡಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದಲ್ಲಿರುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಸ್ತಾಂತರ ಮಾಡಲಿದೆ.
ಈ ಭೂಮಿಗಾಗಿ ಫಾಕ್ಸ್ಕಾನ್ ಈಗಾಗಲೇ 90 ಕೋಟಿ ರೂಪಾಯಿ ಠೇವಣಿ ಪಾವತಿಸಿದೆ.
ನೀರಿನ ಲಭ್ಯತೆ:
ಕಂಪನಿಗೆ 5 ದಶಲಕ್ಷ ಲೀಟರ್ ನೀರು ಪೂರೈಕೆಗೆ ಸರ್ಕಾರ ಒಪ್ಪಿಕೊಂಡಿದೆ.
ADVERTISEMENT
ADVERTISEMENT