ಎಸ್‌ ಎಸ್ ಎಲ್‌ ಸಿ ಪೂರ್ವಭಾವಿ ಪರೀಕ್ಷೆಯ 2 ಪ್ರಶ್ನಾಪತ್ರಿಕೆಗಳ ಸೋರಿಕೆ..!

ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ ಎಸ್ ಎಲ್‌ ಸಿ ಪೂರ್ವಭಾವಿ ಪರೀಕ್ಷೆಯ ಇಂಗ್ಲಿಷ್ ಪತ್ರಿಕೆ ಹಾಗೂ ಗಣಿತ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

ಇಂದು ಗಣಿತ ಪರೀಕ್ಷೆ ಇದ್ದು ನಿನ್ನೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ದೃಢಪಟ್ಟಿದೆ.

ನಿನ್ನೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯು ಬಳ್ಳಾರಿಯಲ್ಲಿ ಸೋರಿಕೆಯಾಗಿದ್ದು ಈ ಬಗ್ಗೆ ಬಳ್ಳಾರಿ ಡಿಡಿಪಿಐ ರಾಮಪ್ಪ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಆದರೆ ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು.

ಬುಧವಾರ ಪರೀಕ್ಷೆ ನಡೆಯುವ ಒಂದು ಗಂಟೆಯ ಮೊದಲು ವಾಟ್ಸಪ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲಿಷ್ ಪ್ರಶ್ನೆಪತ್ರಿಕೆ ಬಯಲಾಗಿತ್ತು ಹಾಗಿದ್ದರೂ ಕೂಡ ಸೋರಿಕೆಯಾದ ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ಬದಲಾವಣೆ ಮಾಡದೆ ನಿನ್ನೆ ಪರೀಕ್ಷೆ ನಡೆಸಿದ್ದರು.

ಈ ಬಗ್ಗೆ ಮಾತನಾಡಿದ ಅಧಿಕಾರಿಗಳು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಹಾಗೂ ಮುಂದೆ ನಡೆಯಲಿರುವ ವಾರ್ಷಿಕ ಪರೀಕ್ಷೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಡೆಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಫೆಬ್ರವರಿ 17ರಂದು ಪ್ರಾರಂಭವಾದ ಪೂರ್ವಸಿದ್ಧತಾ ಪರೀಕ್ಷೆ ಕರ್ನಾಟಕದ 12,536 ಶಾಲೆಗಳಲ್ಲಿ ನಡೆಯುತ್ತಿದೆ.

ಈ ಘಟನೆಯ ನಂತರ ಮಾತನಾಡಿದ ಅಧ್ಯಾಪಕರೊಬ್ಬರು ಪ್ರಶ್ನೆಪತ್ರಿಕೆ ಸೋರಿಕೆಯಾಗುವುದರಿಂದ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ಆವರಿಸುತ್ತದೆ, ಅದೂ ಅಲ್ಲದೆ ಈ ರೀತಿ ಪೂರ್ವಸಿದ್ಧತಾ ಪರೀಕ್ಷೆಯಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ನಿರುತ್ಸಾಹಗೊಳಿಸುತ್ತದೆ ಹಾಗೆಯೇ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯ ಮೇಲಿಟ್ಟಿರುವ ನಂಬಿಕೆ ಹೊರಟು ಹೋಗುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here