ಎನ್‍ಪಿಆರ್.. ಮಸಲತ್ತು ಏನು..?

ಸಿಎಎ, ಎನ್‍ಆರ್‍ಸಿ ಬಳಿಕ ಎನ್‍ಪಿಆರ್.. ಎನ್‍ಆರ್‍ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ ಮುಂದಾಗಿದೆ ಈ ಮಹಾ ಗಣತಿಯ ಉದ್ದೇಶವೇನು..? ಯಾವೆಲ್ಲಾ ವಿವರಗಳನ್ನು ಸಂಗ್ರಹಿಸುತ್ತಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಎನ್‍ಪಿಆರ್ ಎಂದರೇನು..?
ಎನ್‍ಪಿಆರ್.. ರಾಷ್ಟ್ರೀಯ ಜನಸಂಖ್ಯಾ ನೋಂದಣಿ.. ಇದು ದೇಶದ ಜನರ ಕುರಿತ ಮಾಹಿತಿ. ಪೌರತ್ವ ಕಾಯ್ದೆ-1955, ಪೌರತ್ವ(ಪೌರರ ನಮೂದು,ರಾಷ್ಟ್ರೀಯ ಗುರುತು ಪತ್ರಗಳ ಮಂಜೂರು) ನಿಬಂಧನೆಗಳು -2003ರ ಅಡಿಯಲ್ಲಿ ಗ್ರಾಮ, ತಾಲೂಕು, ಜಿಲ್ಲಾ, ರಾಜ್ಯ ಮತ್ತು ದೇಶದ ಮಟ್ಟದಲ್ಲಿ ಎನ್‍ಪಿಆರ್ ಸಿದ್ದಪಡಿಸಲಾಗುತ್ತದೆ. ದೇಶದ ಪ್ರಜೆಗಳು ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ.

ಏಕೆ ಈ ಮಹಾ ಗಣತಿ..?
ದೇಶದ ಪ್ರಜೆಗಳ ಕುರಿತ ಸಮಗ್ರ ಮಾಹಿತಿ(ಡೇಟಾಬೇಸ್)ಯನ್ನು ಸಂಗ್ರಹಿಸುವುದು ಎನ್‍ಪಿಆರ್ ಉದ್ದೇಶವಾಗಿದೆ. ಇದರಲ್ಲಿ ಜನರ ವೈಯುಕ್ತಿಕ ಮಾಹಿತಿ ಜೊತೆಗೆ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಎನ್‍ಪಿಆರ್ ಪ್ರಕ್ರಿಯೆಯ ಭಾಗವಾಗಿ ಪ್ರಜೆಗಳಿಂದ ಆಧಾರ್, ಮೊಬೈಲ್ ನಂಬರ್, ಪಾನ್ ಕಾರ್ಡ್, ಡಿಎಲ್, ವೋಟರ್ ಐಡಿ, ಪಾಸ್‍ಪೋರ್ಟ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಕುರಿತ ಮಾಹಿತಿಯನ್ನು ಹಂಚಿಕೊಳ್ಳುವುದು, ಬಿಡುವುದು ಆಯಾ ವ್ಯಕ್ತಿಯ ಇಷ್ಟಕ್ಕೆ ಸಂಬಂಧಿಸಿದ್ದಾಗಿರುತ್ತದೆ.

ಏನೆಲ್ಲಾ ವಿವರ ನೀಡಬೇಕು..?
ವ್ಯಕ್ತಿ ಹೆಸರು, ಮನೆ ಯಜಮಾನನ ಜೊತೆಗಿನ ಸಂಬಂಧ, ತಂದೆ, ತಾಯಿ ಹೆಸರು, ತಂದೆ ತಾಯಿ ಹುಟ್ಟಿದ ದಿನಾಂಕ, ಅವರ ಜನ್ಮ ಸ್ಥಳ, ರಾಷ್ಟ್ರೀಯತೆ, ಸದ್ಯ ಎಲ್ಲಿ ವಾಸ ಮಾಡುತ್ತಿದ್ದೀರಾ..? ಎಷ್ಟು ದಿನಗಳಿಂದ ಇದ್ದೀರಾ..? ಶಾಶ್ವತ ವಿಳಾಸ ಏನು..? ಶಿಕ್ಷಣ, ವೃತ್ತಿ ಏನು ಎಂಬ ಮಾಹಿತಿಯನ್ನು ಎನ್‍ಪಿಆರ್‍ನಲ್ಲಿ ಸಂಗ್ರಹಿಸಲಾಗುತ್ತದೆ.

ಇದೇ ಮೊದಲ ಬಾರಿನಾ..?
2011ರ ಜನಗಣತಿ ಪ್ರಕ್ರಿಯೆಯ ಭಾಗವಾಗಿ 2010ರಲ್ಲಿ ಎನ್‍ಪಿಆರ್‍ಗಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. 2015ರಲ್ಲಿ ಮನೆ ಮನೆ ಸರ್ವೇ ಮಾಡುವ ಮೂಲಕ ಎನ್‍ಪಿಆರ್ ಪರಿಷ್ಕರಣೆ ಮಾಡಲಾಗಿತ್ತು. ನಂತರ ಎಲ್ಲಾ ದತ್ತಾಂಶಗಳನ್ನು ಡಿಜಿಟಲಿಕರಣ ಕೂಡ ಮಾಡಲಾಗಿತ್ತು. ಪ್ರಸ್ತುತ 2021ರ ಜನಗಣತಿ ಪ್ರಕ್ರಿಯೆಯ ಭಾಗವಾಗಿ 2020ರ ಏಪ್ರಿಲ್‍ನಿಂದ ಎನ್‍ಪಿಆರ್ ಅಪ್‍ಡೇಟ್ ಮಾಡಲಾಗುತ್ತದೆ. ಎನ್‍ಆರ್‍ಸಿ ಜಾರಿಯಾದ ಅಸ್ಸಾಂ ಹೊರತುಪಡಿಸಿ ದೇಶದ ಉಳಿದೆಲ್ಲಾ ಕಡೆ ಎನ್‍ಪಿಆರ್ ಅಪ್‍ಡೇಟ್ ನಡೆಯುತ್ತದೆ. ಆದರೆ, ಎನ್‍ಪಿಆರ್‍ಗೂ ಅವಕಾಶ ಕೊಡಲ್ಲ ಎಂದು ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಎನ್‍ಪಿಆರ್ ಡೇಟಾ ಪ್ರಜೆಗಳ ಕೈಗೆ ಬಹಿರಂಗವಾಗಿ ಸಿಗುತ್ತಾ..?
ಎನ್‍ಪಿಆರ್ ಡೇಟಾ ಪ್ರಜೆಗಳ ಕೈಗೆ ಸುಲಭವಾಗಿ, ಬಹಿರಂಗವಾಗಿ ಸಿಗುವ ರೀತಿ ಇರಲ್ಲ. ಎನ್‍ಪಿಆರ್ ಡೇಟಾ ಅಗತ್ಯವಿರುವ ವ್ಯಕ್ತಿಗಳು ಪಾಸ್‍ವರ್ಡ್ ರಕ್ಷಣೆ ಉಳ್ಳ ಪ್ರೋಟೋಕಾಲ್ ವಿಧಾನದೊಂದಿಗೆ ಪಡೆಯಬಹುದು. ದೇಶದ ಆಂತರಿಕ ಭದ್ರತೆಯನ್ನು ಬಲಿಷ್ಠಗೊಳಿಸಲು, ಕೇಂದ್ರ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಎನ್‍ಪಿಆರ್ ಡೇಟಾ ಬಳಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ.

ಇದು ಜನಗಣತಿ ಅಲ್ಲವಾ..?
ಇದು ಜನಗಣತಿ ಅಲ್ಲ. ಜನಗಣತಿಯೇ ಬೇರೆ.. ಎನ್‍ಪಿಆರ್ ಬೇರೆ. ಜನಗಣತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಒಂದು ದಶಕದಲ್ಲಿ ದೇಶ ಯಾವ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿದೆ. ಕೇಂದ್ರ ಸರ್ಕಾರದ ಯೋಜನೆಗಳು ಪ್ರಜೆಗಳಿಗೆ ತಲುಪಿವೆಯಾ..? ಕೇಂದ್ರದ ಮುಂದಿನ ಹೆಜ್ಜೆ ಏನಾಗಿರಬೇಕು ಎಂಬ ಅಂಶಗಳನ್ನು ತಿಳಿದುಕೊಳ್ಳಲು ಜನಗಣತಿ ಸಹಾಯಕವಾಗುತ್ತದೆ. ಸಾಕ್ಷರತೆ, ನಗರೀಕರಣ, ಜಾತಿ ಧರ್ಮ, ಜನನ ಮರಣ, ವಲಸೆ ಇತ್ಯಾದಿ ಅಂಶಗಳು ಜನಗಣತಿಯಲ್ಲಿ ಒಳಗೊಂಡಿರುತ್ತವೆ.

ಎನ್‍ಪಿಆರ್‍ಗೂ ಎನ್‍ಆರ್‍ಸಿಗೂ ಸಂಬಂಧ ಇಲ್ವಾ..?
ಎನ್‍ಪಿಆರ್‍ಗೂ ಎನ್‍ಆರ್‍ಸಿಗೂ ಸಂಬಂಧ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳುತ್ತಿದ್ದಾರೆ. ಆದರೆ, ಎನ್‍ಪಿಆರ್‍ಗಾಗಿ ಕೇಂದ್ರ ಸರ್ಕಾರ ಇತ್ತೀಚಿಗೆ ಹೊರಡಿಸಿದ ಗೆಜೆಟ್ ನೋಟಿಫಿಕೇಷನ್ ಬೇರೆಯ ಸತ್ಯವನ್ನೇ ಹೇಳುತ್ತಿದೆ. ಪೌರತ್ವ ನಿಬಂಧನೆಗಳು-2003ರಲ್ಲಿರುವ ನಿಬಂಧನೆ 3ರ ನಾಲ್ಕನೇ ಉಪ ನಿಬಂಧನೆ ಪ್ರಕಾರ ಎನ್‍ಪಿಆರ್ ಅಪ್‍ಡೇಟ್ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಂದ ಹಾಗೇ, ನಿಬಂಧನೆ 3 ಎನ್‍ಆರ್‍ಸಿಗೆ ಸಂಬಂಧಿಸಿದ್ದಾಗಿದೆ. ತಾಜಾ ಪ್ರಕ್ರಿಯೆಯಲ್ಲಿ ತಂದೆ-ತಾಯಿಯ ಜನ್ಮಸ್ಥಳಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಹೇರಳವಾಗಿದೆ. ಇಂತಹ ಮಾಹಿತಿಯನ್ನು ಕೇಂದ್ರ ಸರ್ಕಾರಗಳು ಯಾವತ್ತೂ ಕೇಳಿದ ಉದಾಹರಣೆ ಇಲ್ಲ. ಎನ್‍ಆರ್‍ಸಿ ಜಾರಿ ನಿಟ್ಟಿನಲ್ಲಿ ಎನ್‍ಪಿಆರ್ ಮೊದಲ ಹೆಜ್ಜೆ ಎಂದು ಹಲವರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಮಿತ್ ಷಾ ಹೇಳಿಕೆ ಸುಳ್ಳು
ಎನ್‍ಪಿಆರ್‍ಗೂ ಎನ್‍ಆರ್‍ಸಿಗೂ ಸಂಬಂಧವಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಎನ್‍ಆರ್‍ಸಿ ಬಗ್ಗೆ ಚರ್ಚಿಸಿಯೇ ಇಲ್ಲ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆಗಿಂತಲೂ ಇದು ದೊಡ್ಡ ಸುಳ್ಳು. ಜನಾಗ್ರಹದಿಂದ ಪಾರಾಗಲು ಅಮಿತ್ ಷಾ ಸುಳ್ಳು ಹೇಳುತ್ತಿದ್ದಾರೆ. ಎನ್‍ಪಿಆರ್‍ಗೂ ಎನ್‍ಆರ್‍ಸಿಗೂ ನೇರ ಸಂಬಂಧವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

LEAVE A REPLY

Please enter your comment!
Please enter your name here