ಉಪ ಸಭಾಪತಿ ಆತ್ಮಹತ್ಯೆ; ರಾಜಕೀಯ ಕಾರಣವೋ? ವೈಯಕ್ತಿಕ ಕಾರಣವೋ?

ವಿಧಾನಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡರು ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಬಳಿ ರಾಣಿ ಚೆನ್ನಮ್ಮ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ದಿಗ್ಭ್ರಮೆ ಉಂಟು ಮಾಡಿದೆ.

ಹಳೆಯ ಸ್ಯಾಂಟ್ರೋ ಕಾರಿನಲ್ಲಿ ರೈಲ್ವೇ ಹಳಿ ಬಳಿ ಬಂದ ಧರ್ಮೇಗೌಡರು, ಯಾರೊಂದಿಗೆ ವೈಯಕ್ತಿಕವಾಗಿ ಮಾತನಾಡಬೇಕು. ನೀವು ಹೊರಡಿ ಎಂದು ಕಾರು ಚಾಲಕ ಧರ್ಮರಾಜ್ ರನ್ನು ಮನೆಗೆ ಕಳಿಸಿಕೊಟ್ಟಿದ್ದರು. ಆಪ್ತ ಕಡೂರಿನ ಹೇಮಂತ್ ಎನ್ನುವವರಿಗೆ ಕರೆ ಮಾಡಿ ರೈಲು ಎಲ್ಲಿದೆ. ಎಷ್ಟೊತ್ತಿಗೆ ಬರುತ್ತೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಕಾರು ಚಾಲಕ ಧರ್ಮರಾಜ್ ಹೇಳುವ ಪ್ರಕಾರ, ಧರ್ಮೇಗೌಡರು ಸಹಜವಾಗಿಯೇ ಇದ್ದರು. ಖಿನ್ನತೆಯಿಂದ ಇದ್ದಂತೆ ಕಂಡುಬರಲಿಲ್ಲ. ನಂತರ ಹೀಗೆ ಆಗಿದೆ. ನಂಬಲು ಸಾಧ್ಯವೇ ಆಗುತ್ತಿಲ್ಲ ಎಂದು ಕಾರು ಚಾಲಕ ಧರ್ಮರಾಜ್ ಹೇಳಿದ್ದಾರೆ.

ಧರ್ಮೇಗೌಡರ ನಿಧನಕ್ಕೆ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಧರ್ಮೇಗೌಡರ ಆತ್ಮಹತ್ಯೆಗೆ ಕಾರಣಗಳೇನು..?

ಇದೀಗ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪೊಲೀಸ್ ತನಿಖೆಯಲ್ಲಿ ಸತ್ಯ ಹೊರಬೀಳುವ ಮುನ್ನವೇ, ಇದು ರಾಜಕೀಯ ಕಾರಣಕ್ಕೆ ಮಾಡಿಕೊಂಡ ಆತ್ಮಹತ್ಯೆ, ವಿಧಾನಪರಿಷತ್ ನಲ್ಲಿ ಎರಡು ವಾರಗಳ ಹಿಂದೆ ನಡೆದ ಗದ್ದಲದಿಂದ ಧರ್ಮೇಗೌಡರು ನೊಂದಿದ್ದರು. ಖಿನ್ನತೆಗೆ ಒಳಗಾಗಿದ್ದರು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿಯೂ ಇದೇ ರೀತಿಯ ಚರ್ಚೆ ನಡೆದಿದೆ. ಧರ್ಮೇಗೌಡರನ್ನು ಎಳೆದಾಡಿದ್ದವರೇ ಆತ್ಮಹತ್ಯೆಗೆ ಕಾರಣ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಆದರೇ, ಪರಿಷತ್ ಗದ್ದಲ ನಡೆದು ಎರಡು ವಾರ ಕಳೆದಿದೆ. ಸುದೀರ್ಘ ರಾಜಕೀಯ ಅನುಭವ ಇರುವ, ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಧರ್ಮೇಗೌಡರಿಗೆ ಗದ್ದಲವನ್ನು ಅರಗಿಸಿಕೊಳ್ಳುವ ಶಕ್ತಿ ಇರಲಿಲ್ವಾ? ಎಂದರೇ ನಂಬುವುದು ಕಷ್ಟ.. ಗದ್ದಲ ನಡೆದಿದ್ದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಧರ್ಮೇಗೌಡರು, ಏನೂ ಆಗಿಲ್ಲ. ಯಾರನ್ನು ದೂರುವುದಿಲ್ಲ ಎಂದು ಸುಮ್ಮನಾಗಿದ್ದರು.

ಪರಿಷತ್ ಪ್ರಹಸನದಲ್ಲಿ ರಾಜಕೀಯ ದಾಳವಾಗಿದ್ದ ಧರ್ಮೇಗೌಡರು.?

ಎರಡು ವಾರಗಳ ಹಿಂದೆ ವಿಧಾನಪರಿಷತ್ ಗದ್ದಲದ ವೇಳೆ, ಉಪಸಭಾಪತಿ ಧರ್ಮೇಗೌಡರು ರಾಜಕೀಯ ದಾಳವಾಗಿದ್ದವರು. ಬಿಜೆಪಿ-ಜೆಡಿಎಸ್ ಪಕ್ಷಗಳ ಜಂಟಿ ಯೋಜನೆಯಂತೆ, ಪರಿಷತ್ ಬೆಲ್ ಆಗಿ ಕೋರಂ ಆಗುವ ಮುನ್ನವೇ ಧರ್ಮೇಗೌಡರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಲಾಗಿತ್ತು. ಇಲ್ಲಿ ಸಭಾ ನಿಯಮಗಳನ್ನು ಉಲ್ಲಂಘಿಸಿದ್ದು ಸ್ಪಷ್ಟವಾಗಿತ್ತು. ಇದನ್ನು ಖಂಡಿಸಿದ ಕಾಂಗ್ರೆಸ್ ಸದಸ್ಯರು ಪೀಠಕ್ಕೆ ನುಗ್ಗಿ ಗಲಾಟೆ ಮಾಡಿದ್ದರು. ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಕೆಳಗೆ ಇಳಿಸಿದ್ದರು.

LEAVE A REPLY

Please enter your comment!
Please enter your name here