ವಲಸಿಗ ಕಾರ್ಮಿಕರುಗಳನ್ನು ಊರಿಗೆ ತಲುಪಿಸಲು ಮೂರು ಪಟ್ಟು ದರ ವಿಧಿಸುತ್ತಿರುವ ಸಾರಿಗೆ ಇಲಾಖೆ ಕ್ರಮ ಖಂಡನೀಯ – ಆಮ್ ಆದ್ಮಿ ಪಕ್ಷ

ಬೆಂಗಳೂರು ನಗರದಲ್ಲಿ ಉತ್ತರ ಕರ್ನಾಟಕದಿಂದ ಬಂದಿರುವ ಸಾವಿರಾರು ಬಡ ವಲಸಿಗ ಕಾರ್ಮಿಕರು ಕಳೆದ 40 ದಿವಸಗಳಿಂದ ಲಾಕ್ ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.

ಅತ್ತ ಊರಿಗೂ ಹೋಗಲಾಗದೆ ಇತ್ತ ಕೆಲಸವೂ ಸಿಗದೆ ಒಂದೊತ್ತಿನ ಊಟಕ್ಕೂ ಅಲೆದಾಡುವಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದ ಈ ಬಡ ಕೂಲಿ ಕಾರ್ಮಿಕರುಗಳು ಸರ್ಕಾರದ ನಿರ್ಧಾರದಿಂದಾಗಿ ಇನ್ನೇನು ನಮ್ಮ ನಮ್ಮ ಊರುಗಳಿಗೆ ಸೇರಿಕೊಳ್ಳುತ್ತೇವೆ ಎಂಬ ಸಂತಸದಿಂದ ಇರುವಾಗಲೇ ರಾಜ್ಯ ಸಾರಿಗೆ ಇಲಾಖೆಯು ಇವರುಗಳನ್ನು ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ತಲುಪಿಸಲು ಮೂರು ಪಟ್ಟು ದರವನ್ನು ವಿಧಿಸಿ ಮತ್ತೊಮ್ಮೆ ಇವರುಗಳನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ನಗರದ ಬನ್ನಪ್ಪ ಪಾರ್ಕ್‌ನಲ್ಲಿ ನೂರಾರು ಕೂಲಿ ಕಾರ್ಮಿಕರು ಅವರವರ ಸ್ಥಳಗಳಿಗೆ ತಲುಪಲು ಆಸೆಯಿಂದ ಬರುತ್ತಿರುವವರಿಗೆ ಸಾರಿಗೆ ಇಲಾಖೆಯ ಈ ನಿರ್ಧಾರದಿಂದಾಗಿ ತೀವ್ರ ನಿರಾಸೆ ಕಾಡುತ್ತಿದೆ. ಉತ್ತರ ಕರ್ನಾಟಕದಿಂದ ಗುಳೆ ಬಂದಿರುವ ಹಲವಾರು ಕುಟುಂಬಗಳು ತಮ್ಮ ಊರುಗಳಿಗೆ ಮರಳಲು ಇಂದು ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡುವಂತಹ ದುರವಸ್ಥೆಗೆ ತಲುಪಿದ್ದಾರೆ.

ಉದಾಹರಣೆಗೆ ಬೆಂಗಳೂರಿನಿಂದ ಯಾದಗಿರಿಗೆ ಪ್ರಯಾಣಿಸುವವರು 1411 ರೂ. , ಕಲಬುರ್ಗಿಗೆ 1600 ರೂ.ಗಳು , ರಾಯಚೂರಿಗೆ 1200 ರೂ. ಗಳನ್ನು ಪಾವತಿಸಬೇಕಿದೆ.

ಸಾರಿಗೆ ಇಲಾಖೆಯು ಹೋಗುವ ಮತ್ತು ವಾಪಸ್ ಬರುವ ಬಸ್ ಪ್ರಯಾಣದ ವೆಚ್ಚ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಉಳಿಯುವಂತಹ ಸೀಟುಗಳ ವೆಚ್ಚವನ್ನು ಸಹ ಈ ಬಡ ನಿರ್ಗತಿಕ ಕಾರ್ಮಿಕರಿಂದ ವಸೂಲಿ ಮಾಡುತ್ತಿರುವುದು ತೀರಾ ದುರಂತದ ಸಂಗತಿ.

ಬನ್ನಪ್ಪ ಪಾರ್ಕ್ ನಲ್ಲಿ ಸಾರಿಗೆ ಇಲಾಖೆಯ ಈ ದುಬಾರಿ ವೆಚ್ಚವನ್ನು ಭರಿಸಲಾಗದೆ ಅನೇಕ ಗರ್ಭಿಣಿ ಹೆಂಗಸರುಗಳು , ಪುಟ್ಟ ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಪರದಾಡುತ್ತಿರುವ ದೃಶ್ಯಗಳು ಮನ ಕಲಕುವಂತಿದೆ. ಈ ಕೂಡಲೇ ರಾಜ್ಯ ಸರ್ಕಾರವು ತನ್ನ ಈ ದುರುಳ ನೀತಿಯನ್ನು ವಾಪಸ್ ಪಡೆದುಕೊಂಡು ಉಚಿತವಾಗಿ ಅಥವಾ ಕೇವಲ ಡೀಸೆಲ್ ಗೆ ಆಗುವ ವೆಚ್ಚವನ್ನು ಮಾತ್ರ ಪಡೆದುಕೊಂಡು ಅವರುಗಳ ಊರುಗಳಿಗೆ ತಲುಪಿಸುವಂತಹ ಸತ್ಕಾರ್ಯವನ್ನು ಮಾಡಲು ಮುಂದಾಗಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here