ಉತ್ತರ ಕರ್ನಾಟಕದ ಆರಾಧ್ಯ ದೇವಿ ಬಾದಾಮಿ ಬನಶಂಕರಿ ರಥೋತ್ಸವ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಿಯ ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತಾದಿಗಳು ಪಾಲ್ಗೊಂಡು, ನಾಡಿನ ಆರಾಧ್ಯ ದೇವಿ ಬನಶಂಕರಿ ಅಮ್ಮನ ದರ್ಶನ ಪಡೆದು ಧನ್ಯತಾಭಾವ ಮೆರೆದರು.

ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಈ ಬಾರಿ ರಥೋತ್ಸವ ನಡೆಯಿತು.

ಬಾದಾಮಿಯ ಬನಶಂಕರಿ ದೇವಿ ರಥೋತ್ಸವಕ್ಕೆ ಗದಗ ಜಿಲ್ಲೆ ರೋಣ ತಾಲೂಕಿನ ಮಾಡಗೇರಿ ಗ್ರಾಮದಿಂದ ರಥದ ಹಗ್ಗ  ಎತ್ತಿನ ಚಕ್ಕಡಿ ಮೂಲಕ ಈ ಹಗ್ಗ ಸಾಗುವ ವೇಳೆ ಸಾವಿರಾರು ಭಕ್ತರು ಬನಶಂಕರಿದೇವಿ ಶಂಭುಕ ಎಂಬ ಘೋಷಣೆಯೊಂದಿಗೆ ದೇವಿಯ ಆರಾಧನೆ ಮಾಡುತ್ತಾರೆ.

ಪುಂಡಿಯ ನಾರಿನಿಂದ‌ ತಯಾರಿಸಿದ ಹಗ್ಗವನ್ನ ಹರಿಯುವ ಮಲಪ್ರಭಾ ನದಿಯಲ್ಲಿ ಚಕ್ಕಡಿ ಮೂಲಕ ತೆಗೆದುಕೊಂಡು ಹೋಗುವ ದೃಶ್ಯ ನಯನ ಮನೋಹರವಾಗಿರುತ್ತೆ.

ಮಾಡಗೇರಿ ಗೌಡ್ರ ಮನೆತನದ ಎತ್ತು ಹಾಗೂ ಚಕ್ಕಡಿಗೆ ಅಲಂಕಾರ ಹಾಗೂ ಪೂಜೆ ಮಾಡಿಕೊಂಡು ಅದರ ಮೂಲಕವೇ ನದಿದಾಟಿಕೊಂಡು ಸಾಗಬೇಕು ಎಂಬ ಪ್ರತೀತಿ ಇದೆ.

ಸುಮಾರು ೬೦೦ ಕೆಜಿ ತೂಕದ ೨೦೦ ಮೀಟರ್ ಉದ್ದನೆಯ ರಥದ ಹಗ್ಗವನ್ನ ಎರಡು ಚಕ್ಕಡಿಗಳ ಮೂಲಕ ಸಾಗಿಸಲಾಗುತ್ತೆ. ನದಿ ದಾಟುವ ವೇಳೆ ದೇವಿ ಘೋಷಣೆ ಕೂಗಿ, ಪಟಾಕಿಸಿಡಿಸಿ, ಎತ್ತುಗಳಿಗೆ ಹುರಿದುಂಬಿಸಿ ನದಿ ದಾಟಿಸಲಾಗುತ್ತೆ. ಮಾಡಲಗೇರಿ, ನಯನಾಪೂರ, ಜಾಲಿಹಾಳ, ಬೇಲೂರಿನ ಸಾವಿರಾರು ಭಕ್ತರು ಈ ದೃಶ್ಯ ನೋಡಲು ಸೇರಿರುತ್ತಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ನಾಡಿನ ಹಲವು ಜಿಲ್ಲೆಗಳ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

LEAVE A REPLY

Please enter your comment!
Please enter your name here