ಉತ್ತರಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಹಿಂಸಾಚಾರ – ಸತ್ತವರಿಗೂ ನೋಟಿಸ್‌ ಕೊಟ್ಟ ಪೊಲೀಸರು

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉತ್ತರಪ್ರದೇಶದಲ್ಲಿ ನಡೆದಿದ್ದ ಹಿಂಸಾಚಾರ ಸಂಬಂಧ ಪೊಲೀಸರು ನೋಟಿಸ್‌ ಸತ್ತವರಿಗೂ ನೋಟಿಸ್‌ ಕಳುಹಿಸಿರುವ ವಿಚಿತ್ರ ಪ್ರಸಂಗ ಬಯಲಾಗಿದೆ.

ಹಿಂಸಾಚಾರ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ್ದರ ಸಂಬಂಧ ನಷ್ಟ ಭರಿಸಿ ಇಲ್ಲವೇ ನಿಮ್ಮ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಉತ್ತರಪ್ರದೇಶದ ಪೊಲೀಸರು ೨೦೦ ಮಂದಿಗೆ ನೋಟಿಸ್‌ ನೀಡಿದ್ದಾರೆ.

ಆದರೆ ಹೀಗೆ ನೋಟಿಸ್‌ ಪಡೆದವರಲ್ಲಿ ಫಿರೋಜಾಬಾದ್‌ನ ಬನ್ನೇ ಖಾನ್‌ ಎನ್ನುವವರು ಒಬ್ಬರು. ಆದರೆ ಇವರು ಸತ್ತುಹೋಗಿ ೬ ವರ್ಷಗಳಾಗಿದೆ ಎಂದು ಅವರ ಮಗ ಮಹಮ್ಮದ್‌ ಸರ್ಫರಾಜ್‌ ಖಾನ್‌ ಹೇಳಿದ್ದಾರೆ.

ಐಪಿಸಿ ಸೆಕ್ಷನ್‌ ೧೦೭ ಮತ್ತು ೧೧೬ರಡಿ ಪ್ರಕರಣ ದಾಖಲಿಸಿರುವ ಪೊಲೀಸರು ಸಿಟಿ ಮ್ಯಾಜಿಸ್ಟ್ರೇಟ್‌ ಎದುರು ಹಾಜರಾಗಿ ೧೦ ಲಕ್ಷ ರೂಪಾಯಿ ಮೊತ್ತದ ಬಾಂಡ್‌ ಸಲ್ಲಿಸಿ ಜಾಮೀನು ಪಡೆಯುವಂತೆ ನೋಟಿಸ್‌ ನೀಡಿದ್ದಾರೆ. ಒಂದು ವೇಳೆ ಏಳು ದಿನದೊಳಗೆ ಹಾಜರಾಗದೇ ಇದ್ದಲ್ಲಿ ಬಂಧಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ ಎಂದು ಸರ್ಫರಾಜ್‌ ಖಾನ್‌ ಹೇಳಿದ್ದಾರೆ.

ಇನ್ನು ಫಿರೋಜಾಬಾದ್‌ನ ೯೦ ವರ್ಷದ ಫಸಾಹತ್‌ ಮೀರ್‌ ಮತ್ತು ಸೂಫಿ ಅನ್ಸಾರ್‌ ಹುಸೈನ್‌ ಎಂಬವರಿಗೂ ನೋಟಿಸ್‌ ನೀಡಲಾಗಿದೆ. ಇವರಿಗೂ ೭ ದಿನದೊಳಗೆ ಮ್ಯಾಜಿಸ್ಟ್ರೇಟ್‌ ಎದುರು ಹಾಜರಾಗಿ ೧೦ ಲಕ್ಷ ರೂಪಾಯಿ ಮೊತ್ತದ ಬಾಂಡ್‌ನೊಂದಿಗೆ ಜಾಮೀನು ಪಡೆಯುವಂತೆಯೂ ಇಲ್ಲವಾದರೆ ಬಂಧನದ ಎಚ್ಚರಿಕೆಯನ್ನು ನೀಡಲಾಗಿದೆ.

ವಿಚಿತ್ರ ಎಂದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಫಸಾಹತ್‌ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, ಹುಸೈನ್‌ ಹಾಸಿಗೆ ಹಿಡಿದಿದ್ದಾರೆ.

ಇಂಗ್ಲೀಷ್‌ ಸುದ್ದಿವಾಹಿನಿ ಟೈಮ್ಸ್‌ನೌ ಪ್ರಕಾರ ನೋಟಿಸ್‌ ನೀಡುವ ವೇಳೆ ಗೊಂದಲ ಆಗಿದ್ದು ನಿಜ, ನೋಟಿಸ್‌ನ್ನು ವಾಪಸ್‌ ಪಡೆಯಲಾಗುತ್ತದೆ ಎಂದು ಉತ್ತರಪ್ರದೇಶದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here