ಉಡುಪಿ ಜಿಲ್ಲೆಯ ಸ್ವರ್ಣಾನದಿಯಲ್ಲಿ ಅಕ್ರಮ ಮರಳುಗಾರಿಕೆ – ಬಿಜೆಪಿ ಪಕ್ಷದ ನಾಯಕರೇ ಭಾಗಿ ಆರೋಪ – ಕಠಿಣ ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಉಡುಪಿ ಜಿಲ್ಲೆಯ ಸ್ವರ್ಣಾನದಿಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಕಳ್ಳ ಸಾಗಾಣಿಕೆಯಲ್ಲಿ ಬಿಜೆಪಿ ಪಕ್ಷದ ನಾಯಕರೇ ಭಾಗಿ ಆಗಿದ್ದಾರೆ ಎನ್ನುವ ಆರೋಪ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ಅಲ್ಲದೇ ಅಕ್ರಮ ಗಣಿಕಾರಿಕೆ ವಿರುದ್ಧ ದೂರು ನೀಡಿದವರಿಗೆ ಜೀವ ಬೆದರಿಕೆ ಹಾಕಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರಿಗೆ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯ ಸ್ವರ್ಣಾನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಮತ್ತು ಮರಳು ಕಳ್ಳಸಾಗಾಣಿಕೆಯಲ್ಲಿ ಆಡಳಿತ ಪಕ್ಷದ ನಾಯಕರೇ ಭಾಗಿಯಾಗಿರುವ ಆರೋಪವಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ‌ನೀಡಬೇಕು

ಸ್ವರ್ಣಾ ನದಿ ಮರಳು ಕಳ್ಳಸಾಗಾಣಿಕೆ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಗೆ ಬೆದರಿಕೆ ಕರೆಬರುತ್ತಿದ್ದು ಅವರಿಗೆ ತಕ್ಷಣ ಪೋಲಿಸ್ ಭದ್ರತೆ ಒದಗಿಸಬೇಕು. ಜೀವಭಯ ಒಡ್ಡುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಶಿಕ್ಷೆಗೊಳಪಡಿಸಬೇಕು

ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ನಾನು ಸಚಿವ ಆಗಿದ್ದಾಗ ಸ್ವರ್ಣಾ ನದಿಯಲ್ಲಿ ಯಾಂತ್ರಿಕೃತ ಮರಳುಗಾರಿಕೆಗೆ ಅನುಮತಿ ನೀಡುವ ಸಲುವಾಗಿ ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗಿನ ಉಡುಪಿ ಜಿಲ್ಲಾಧಿಕಾರಿ ಆಗಿದ್ದ ಪ್ರಿಯಾಂಕ ಅವರಿಗೆ ಹೇಳಿದ್ದೆ. ಇದರಿಂದ ಸ್ವರ್ಣ ನದಿಯಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿ ಅದನ್ನು ಉಡುಪಿಗೆ ಪೊರೈಸಬಹುದಾಗಿತ್ತು.

ಸ್ವರ್ಣಾ ನದಿಯಲ್ಲಿ ಮರಳುಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ಕೊಟ್ಟ ಬಳಿಕ ಉಡುಪಿ ನಗರಸಭೆ ನದಿಯಲ್ಲಿ ಮರಳುಗಾರಿಕೆಯ ಹಕ್ಕನ್ನು ರಾಜಕೀಯ ವ್ಯಕ್ತಿಗಳಿಗೆ ನೀಡಿದೆ. ಈ ಮರಳನ್ನು ಜಿಲ್ಲಾಡಳಿತದ ಮೂಲಕ ಮಾರಬೇಕಿತ್ತು. ಆದರೆ ಈಗ ಅಕ್ರಮವಾಗಿ ಮರಳಿನ ಕಳ್ಳಸಾಗಾಣಿಕೆ ಆಗುತ್ತಿದ್ದು, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಅಕ್ರಮದಲ್ಲಿ ಭಾಗಿ ಆಗಿರುವ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇವರ ಕೈವಾಡ ಇಲ್ಲದೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯಲು ಸಾಧ್ಯವಿಲ್ಲ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

ನಾನು ಸಚಿವ ಆಗಿದ್ದಾಗ ಜಿಲ್ಲೆಯ ಹೊರಗೆ ಅಕ್ರಮವಾಗಿ ಮರಳು ಸಾಗಾಟ ಆಗದಂತೆ ತಡೆದಿದ್ದೆ. ಇದರಿಂದ ಎಲ್ಲರಿಗೂ ಕಡಿಮೆ ಬೆಲೆಗೆ ಮರಳು ಸಿಗುತ್ತಿತ್ತು. ಒಂದು ವೇಳೆ ಬೆಂಗಳೂರಿಗೆ ಮರಳು ಸಾಗಾಟಕ್ಕೆ ಬಿಟ್ಟರೆ ಆಗ ಜಿಲ್ಲೆಯಲ್ಲಿ ಮರಳಿನ ಕೊರತೆ ಉಂಟಾಗುತ್ತದೆ.

ನನ್ನ ಅಧಿಕಾರವಧಿಯಲ್ಲಿ 28 ಬ್ಲಾಕ್‌ಗಳಲ್ಲಿ 165 ಲೈಸನ್ಸ್‌ಗಳನ್ನು ನೀಡಿ 6 ಲಕ್ಷ ಟನ್‌ ಮರಳನ್ನು ಹೊರತೆಗೆಯಲಾಗಿತ್ತು. ಚೆನ್ನೈನ ಹಸಿರು ನ್ಯಾಯಪೀಠದಲ್ಲಿ ಬಾಕಿ ಇದ್ದ ತಡೆಯಾಜ್ಞೆಯನ್ನು ನನ್ನ ಅವಧಿಯಲ್ಲೇ ತೆರವುಗೊಳಿಸಲಾಗಿತ್ತು ಮತ್ತು ಹಾಗಾಗಿ ಮರಳುಗಾರಿಕೆಗೆ ಅನುಮತಿ ಸಿಕ್ಕಿತು ಎಂದು ಪ್ರಮೋದ್‌ ಮಧ್ವರಾಜ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here