ಉಡುಪಿಯ ಪವರ್ ಫುಲ್‌ ಯುವತಿಯ ಸಾಹಸಗಾಥೆ

ಲಾಕ್‍ಡೌನ್ ವೇಳೆ ಮನೆಯಲ್ಲಿ ಕಾಲಹರಣ ಮಾಡದ ಉಡುಪಿಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಕುಟುಂಬಸ್ಥರ ಜೊತೆ ಸೇರಿ 25 ಅಡಿ ಆಳದ ಬಾವಿ ತೋಡಿದ್ದಾರೆ.

ಕೊರೊನಾ ಲಾಕ್‍ಡೌನ್ ನಿಂದಾಗಿ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರ ಜೊತೆಯಲ್ಲಿಯೇ ಇದ್ದಾರೆ. ಈ ಬಾರಿ ಕೊರೋನಾ ಸಂದರ್ಭ ಕುಟುಂಬದ ಸದಸ್ಯರ ಜೊತೆ ಸೇರಿ ಸ್ವಂತ ಬಾವಿ ನಿರ್ಮಾಣ ಮಾಡಿದ್ದಾರೆ. ಇದೀಗ ತಮ್ಮ ಶ್ರಮಕ್ಕೆ ಪ್ರತಿಫಲ ದೊರಕಿದ ಖುಷಿಯಲ್ಲಿ ಅಕ್ಷತಾ ಇದ್ದಾರೆ.

ಕರಾವಳಿಯಲ್ಲಿ ಈಗ ಬಿರು ಬೇಸಿಗೆ ಸಮಯವಾದ ಕಾರಣ ಮನೆಯ ಹಳೆಯ ಬಾವಿಯಲ್ಲಿ ಇದ್ದ ಅಲ್ಪ ಸ್ಪಲ್ಪ ನೀರು ಇಂಗಿತ್ತು. ಹೀಗಾಗಿ ಹೊಸ ಬಾವಿ ತೋಡುವ ಆಲೋಚನೆ ಅಕ್ಷತಾ ಪೂಜಾರಿ ಅವರಿಗೆ ಬಂದು ತಮ್ಮ ಸಹೋದರರ ಜೊತೆಗೂಡಿ ಮನೆಯ ಹತ್ತಿರವೇ ಹೊಸ ಬಾವಿ ನಿರ್ಮಿಸಿದ್ದಾರೆ.

ಲಾಕ್‍ಡೌನ್ ಸಂದರ್ಭ ಬಾವಿ ನಿರ್ಮಾಣ ಕಾರ್ಯಕ್ಕೆ ಆಳುಗಳು ಸಿಗದೇ ಮನೆಯವರೇ ಜೊತೆ ಸೇರಿ ಸತತ ಆರು ದಿನಗಳ ಕಾಲ ಪರಿಶ್ರಮ ಪಟ್ಟು 25 ಅಡಿ ಬಾವಿ ತೋಡಿದ್ದಾರೆ. ಚೆನ್ನಾಗಿ ನೀರು ಸಿಕ್ಕಿದೆ. ಇದರಿಂದ ಮನೆಯ ದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.

ಉಡುಪಿಯ ಅಕ್ಷತಾ ಪೂಜಾರಿ ಬೋಳ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿನ್ನದ ಪದಕ, ಏಕಲವ್ಯ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here