ಈ ನಾಲ್ವರು ಬದುಕುವುದು 14 ದಿನ ಮಾತ್ರ..! – ನಿರ್ಭಯಾ ಪಾತಕಿಗಳ ಸಾವಿನ ಹೊಸ ದಿನ ಇದು

ಏನಾದ್ರೂ ಮಾಡಿ ಸಾವಿನ ಕುಣಿಕೆಯಿಂದ ಬಚಾವ್‌ ಆಗಲು ನಿರ್ಭಯಾ ಹತ್ಯಾಕಾಂಡದ ಪಾತಕಿಗಳು ನಡೆಸುತ್ತಿರುವ ಕುತಂತ್ರ ಫಲ ಕೊಟ್ಟಿಲ್ಲ. ನಾಲ್ವರೂ ಅಪರಾಧಿಗಳು ಇನ್ನು ಬದುಕುಳಿಯುವುದು ಕೇವಲ 14 ದಿನಗಳು ಮಾತ್ರ. ಹೌದು ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆಗೆ ನಾಲ್ವರನ್ನೂ ಗಲ್ಲಿಗೇರಿಸುವಂತೆ ಹೊಸ ಮರಣದಂಡನೆ ಆದೇಶ ಜಾರಿ ಆಗಿದೆ.

ನಾಲ್ವರದಲ್ಲಿ ಒಬ್ಬ ಅಪರಾಧಿ ಆಗಿರುವ ಮುಕೇಶ್‌ ಸಿಂಗ್‌ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ದೆಹಲಿಯ ಪಟಿಯಾಲ ಹೌಸ್‌ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರಾ ಅವರು ಮರಣದಂಡನೆಯನ್ನು ಮುಂದೂಡಬೇಕೆಂದು ಕೋರಿ ಮುಖೇಶ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ಮತ್ತು ಸಮಯ ಘೋಷಿಸಿದರು.

ರಾಷ್ಟ್ರಪತಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ 14 ದಿನಗಳ ಬಳಿಕವಷ್ಟೇ ಮರಣದಂಡನೆ ಜಾರಿ ಆಗಬೇಕೆಂಬ ನಿಯಮಗಳ ಹಿನ್ನೆಲೆಯಲ್ಲಿ ಹೊಸ ದಿನಾಂಕವನ್ನು ಘೋಷಿಸಲಾಗಿದೆ. ಈ ಹಿಂದೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಸಾವಿನ ಕುಣಿಕೆಗೆ ತಿಹಾರ್‌ ಜೈಲಿನ ವಧಪೀಠದಲ್ಲಿ ವಿನಯ್‌ ಶರ್ಮಾ, ಮುಖೇಶ್‌ ಸಿಂಗ್‌, ಅಕ್ಷಯ್‌ ಕುಮಾರ್‌ ಸಿಂಗ್‌ ಮತ್ತು ಪವನ್‌ ಗುಪ್ತಾ ಕೊರಳೊಡ್ಡಲೇಬೇಕಾಗುತ್ತದೆ.

LEAVE A REPLY

Please enter your comment!
Please enter your name here