ಈ ಅನಗತ್ಯ ಲಾಕ್‌ ಡೌನ್‌ ಬಗ್ಗೆ ನಾವು ಯೋಚಿಸಬೇಕಾಗಿದೆ- ಬಜಾಜ್‌ ಆಟೋ ಎಂಡಿ ರಾಜೀವ್‌ ಬಜಾಜ್‌

ದೇಶದಲ್ಲಿ ಹೇರಲಾಗಿರುವ ಲಾಕ್‌ಡೌನ್‌ ಬಗ್ಗೆ ನಾವು ಮರು ಯೋಚಿಸಬೇಕಿದೆ ಎಂದು ಬಜಾಜ್‌ ಆಟೋದ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಹೇಳಿದ್ದಾರೆ. ಬ್ಯುಸಿನೆಸ್‌ ಪತ್ರಿಕೆ ಬ್ಯುಸಿನೆಸ್‌ ಸ್ಯಾಂಡರ್ಡ್‌ಗೆ ನೀಡಿದ ಸಂದರ್ಶನದಲ್ಲಿ ಬಜಾಜ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಹಿರಿಯ ನಾಗರಿಕರನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳನ್ನು ಮುಚ್ಚಬೇಕು ಮತ್ತು ಉಳಿದ ನಾಗರಿಕರಿಗೆ ಜೀವನವನ್ನು ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಎಂದು ಬಜಾಜ್‌ ಹೇಳಿದ್ದಾರೆ.

ಇತರ ಆಟೋ ಉದ್ಯಮಗಳು ತಮ್ಮ ಉತ್ಪಾದನಾ ಕಾರ್ಯಾಚರಣೆಯನ್ನು ಮುಚ್ಚಿದಂತೆ ಬಜಾಜ್‌ ಆಟೋ ಕಂಪೆನಿ ಕೂಡಾ ತನ್ನ ಉತ್ಪಾದನಾ ಕಾರ್ಯಾಚರಣೆಯನ್ನು ಮುಚ್ಚಿದೆ.ಆದರೆ ಬಜಾಜ್‌ ಆಟೋದ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಲಾಕ್‌ ಡೌನ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾಗೆ ಬಲಿ ಆಗುತ್ತಿರುವವರಲ್ಲಿ ಶೇಕಡಾ 99.9 ರಷ್ಟು ಮಂದಿ 65 ವರ್ಷಕ್ಕಿಂತ ಮೇಲ್ಪಟ್ಟವರು. ಇಂತಹ ಸ್ಥಿತಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಶೇಕಡಾ 94 ರಷ್ಟು ಮಂದಿ 65 ವರ್ಷಕ್ಕಿಂತ ಕೆಳಗಿನವರು. ಹೀಗಿರುವಾಗ ದೇಶಾದ್ಯಂತ ಲಾಕ್‌ಡೌನ್‌ ಹೇರುವ ಅಗತ್ಯ ಏನಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಲಾಕ್‌ ಡೌನ್‌ ಸಂದರ್ಭದಲ್ಲಿ ಕಳೆದುಕೊಂಡದ್ದನ್ನು ಮತ್ತೆ ಗಳಿಸುವಂಥದ್ದು ಬಹಳ ಸೂಕ್ಷ್ಮವಾದದ್ದು ಮತ್ತು ಸಣ್ಣ ಪುಟ್ಟ ಉದ್ದಿಮೆಗಳಿಗೆ ದೊಡ್ಡ ಮಟ್ಟದಲ್ಲಿ ಜನರಿಗೆ ಕೆಲಸದ ಅವಕಾಶವನ್ನು ಕೊಡುವುದು ಕಷ್ಟವಾಗುತ್ತದೆ. ಹಾಗೆಯೇ ದೊಡ್ಡ ಉದ್ದಿಮೆದಾರರಿಗೆ ಈ ರೀತಿಯ ಸನ್ನಿವೇಶಗಳನ್ನು ಸ್ವಲ್ಪ ಸಮಯದವರೆಗಷ್ಟೇ ಹಿಡಿದಿಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.

ಇಂತಹ ಸಂದರ್ಭಗಳಲ್ಲಿ ನಾವು ಬೆಂಬಲವನ್ನು ಹೊರತುಪಡಿಸಿ, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವಿತರಕರು ಮತ್ತು ಪೂರೈಕೆದಾರರಿಗೆ ಬಡ್ಡಿರಹಿತ ಸಾಲ ಮತ್ತು ಪಾವತಿಯನ್ನು ಮಾಡಬಹುದು. ಅದು ನಮ್ಮ ಯೋಜನೆ ಎಂದು ರಾಜೀವ್‌ ಬಜಾಜ್‌ ಹೇಳಿದ್ದಾರೆ.