ಇದು ಹಸಿವಿನ ರಾಜ್ಯ.. ರೈಲ್ವೇ ನಿಲ್ದಾಣದಲ್ಲಿ ಊಟಕ್ಕೂ ಪರದಾಟ

ಒಂದು ಕಡೆ ಕೊರೋನಾ ವೈರಸ್ ವಿಜೃಂಭಣೆ ಮತ್ತು ಲಾಕ್‍ಡೌನ್‍ನಿಂದ ದಿನಗೂಲಿ ಇಲ್ಲದೇ ಬೀದಿಗೆ ಬಿದ್ದಿರುವ ವಲಸೆ ಕಾರ್ಮಿಕರ ಸ್ಥಿತಿ ದಯನೀಯವಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಏರ್ಪಟ್ಟಿದೆ. ಕೆಲಸ ಮಾಡಿದರೆ ಮಾತ್ರ ದಿನದ ಹೊಟ್ಟೆ ತುಂಬಿಸಿಕೊಳ್ಳುವ ಇವರ ಸ್ಥಿತಿಯೀಗ ಶೋಚನೀಯವಾಗಿದೆ. ಹಸಿವಿನಿಂದ ವಿಲ ವಿಲ ಅಂತಾ ವಲಸೆ ಕಾರ್ಮಿಕರು ಒದ್ದಾಡಿ ಹೋಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗಾಗಿಯೇ ಶ್ರಮಿಕ್ ರೈಲುಗಳನ್ನು ಬಿಟ್ಟಿದೆ. ಇದುವರೆಗೂ 40 ಲಕ್ಷ ವಲಸೆ ಕಾರ್ಮಿಕರು ತಮ್ಮೂರುಗಳನ್ನು ಸೇರಿಕೊಂಡಿದ್ದಾರೆ. ಆದರೆ, ಪ್ರಯಾಣ ಸಂದರ್ಭದಲ್ಲಿ ಅವರಿಗೆ ಸರಿಯಾಗಿ ಆಹಾರ ಕೂಡ ಸಿಗುತ್ತಿಲ್ಲ. ಪರಿಣಾಮ ಅವರ ಸ್ಥಿತಿ ಏನಾಗಿದೆ ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆ.

ಶ್ರಮಿಕ್ ರೈಲಿನಲ್ಲಿ ಸ್ವಗ್ರಾಮಗಳಿಗೆ ತೆರಳುವ ಸಲುವಾಗಿ ಸಾವಿರಾರು ವಲಸೆ ಕಾರ್ಮಿಕರು ಮಧ್ಯಪ್ರದೇಶದ ನರ್ಮದಾಪುರದ ಡಿವಿಷನ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಈ ವಲಸೆ ಕೂಲಿಕಾರ್ಮಿಕರಿಗೆಂದೇ ಆಹಾರ ವಿತರಿಸುವ ಸಲುವಾಗಿ ರೈಲ್ವೇ ಸಿಬ್ಬಂದಿಯೊಬ್ಬರು ಟ್ರಾಲಿಯಲ್ಲಿ ಬ್ರೆಡ್ ಸೇರಿದಂತೆ ಇತರೆ ಆಹಾರ ಪದಾರ್ಥ ತಂದಿದ್ದರು. ಇದನ್ನು ನೋಡಿದ ಕೂಡಲೇ ವಲಸೆ ಕಾರ್ಮಿಕರು ಟ್ರಾಲಿ ಸುತ್ತ ಸೇರಿದರು.

ರೈಲು ಹೊರಟಾಗ ನಿಮಗೆ ನೀಡಲಾಗುತ್ತೆ. ಈಗ ಕೊಡಲ್ಲ ಎಂದು ರೈಲ್ವೇ ಸಿಬ್ಬಂದಿ ಹೇಳಿದರೂ, ಒಂದಿಬ್ಬರು ವಲಸೆ ಕಾರ್ಮಿಕರು ಧೈರ್ಯ ಮಾಡಿ ಟ್ರಾಲಿಗೆ ಕೈಹಾಕಿ ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡರು. ಅಲ್ಲೇ ಇದ್ದ ಮಿಕ್ಕವರು ಟ್ರಾಲಿ ಮೇಲೆ ಬಿದ್ದು ಕ್ಷಣಾರ್ಧದಲ್ಲಿ ಕೈಗೆ ಸಿಕ್ಕ ಆಹಾರ ಪೊಟ್ಟಣಗಳನ್ನು ಹೊತ್ತೊಯ್ದರು. ಒಬ್ಬರ ಕೈಲಿದ್ದ ಆಹಾರವನ್ನು ಇನ್ನೊಬ್ಬರು ಕಿತ್ತುಕೊಳ್ಳಲು ಯತ್ನಿಸಿದರು. ನೂಕಾಟ-ತಳ್ಳಾಟವೂ ನಡೆಯಿತು. ಇದರಿಂದ ಬೆದರಿದ ರೈಲ್ವೇ ಸಿಬ್ಬಂದಿ ಮೆತ್ತಗೆ ಜಾಗ ಖಾಲಿ ಮಾಡಿದರು. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಇಲ್ಲದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here