ನಾಳೆಯಿಂದ ಇಡೀ ರಾಜ್ಯವೇ ಸಹಜ ಸ್ಥಿತಿ ಬರಲಿದೆ. 56 ದಿನಗಳ ಸುದೀರ್ಘ ಲಾಕ್ಡೌನ್ ಬಳಿಕ ಜನಜೀವನ ಬಹುತೇಕ ಹಳೆಯ ರೂಪಕ್ಕೆ ಮರಳಲಿದೆ. ಮೇ 31ರವರೆಗೆ ಲಾಕ್ಡೌನ್ ವಿಸ್ತರಣೆಯಾದರೂ ಕೇಂದ್ರ ಸರ್ಕಾರ ಭಾನುವಾರ ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರವೇ ಇವತ್ತು ರಾಜ್ಯ ಸರ್ಕಾರ ಬಹುತೇಕ ಎಲ್ಲದ್ದಕ್ಕೂ ವಿನಾಯ್ತಿ ನೀಡಿದೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಉಪ ಮುಖ್ಯಮಂತ್ರಿಗಳು, ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಹೊಸ ಮಾರ್ಗಸೂಚಿಯ ಅಂಶಗಳನ್ನು ಪ್ರಕಟಿಸಿದರು. ಕಂಟೈನ್ಮೆಂಟ್ಝೋನ್ಗಷ್ಟೇ ಲಾಕ್ಡೌನ್ ಮುಂದುವರಿಯಲಿದೆ. ರಾಜ್ಯದಲ್ಲಿ ರೆಡ್, ಆರೆಂಜ್, ಗ್ರೀನ್ಝೋನ್ ಜಿಲ್ಲೆಗಳೆಂಬ ಲೆಕ್ಕಾಚಾರವನ್ನೇ ಕೈಬಿಡಲಾಗಿದೆ.
1. ನಾಳೆಯಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಆರಂಭಿಸಲಿವೆ. ಆದರೆ ಬಸ್ಗಳಲ್ಲಿ ಶೇಕಡಾ 30ರಷ್ಟೇ ಪ್ರಯಾಣಿಕರು ಪ್ರಯಾಣಿಸಲು ಅವಕಾಶ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬಸ್ಗಳು ಸಂಚರಿಸಲಿವೆ. ನಿರ್ದಿಷ್ಟ ಸ್ಥಳದಿಂದ ನಿರ್ದಿಷ್ಟ ಸ್ಥಳಕ್ಕೆ ತಡೆರಹಿತವಾಗಿ ಬಸ್ಗಳು ಓಡಾಡುವ ನಿರೀಕ್ಷೆ ಇದೆ.
2. ಎಲ್ಲಾ ಜಿಲ್ಲೆಗಳಿಗೂ, ಎಲ್ಲಾ ಜಿಲ್ಲೆಗಳ ಒಳಗೂ ಕೆಎಸ್ಆರ್ಟಿಸಿ ಬಸ್ಗಳು ಓಡಾಡಲಿವೆ.
3. ನಾಳೆಯಿಂದ ರಾಜ್ಯದೊಳಗೆ ಅಂದರೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಬಸ್ನಲ್ಲಿ ಓಡಾಡುವುದಕ್ಕೆ ಪಾಸ್ನ ಅಗತ್ಯವಿಲ್ಲ. ಸರ್ಕಾರಿ ಬಸ್, ಖಾಸಗಿ ಬಸ್ ಅಥವಾ ಖಾಸಗಿ ವಾಹನಗಳಲ್ಲಿ ರಾಜ್ಯದಲ್ಲಿ ಓಡಾಡುವವರನ್ನು ಕ್ವಾರಂಟೈನ್ ಮಾಡುವುದಿಲ್ಲ. ಆದರೆ ಜಿಲ್ಲೆಗಳ ನಡುವೆ ಖಾಸಗಿ ವಾಹನಗಳಲ್ಲಿ ಓಡಾಡುವವರಿಗೆ ಪಾಸ್ ಅಗತ್ಯ. ಆದರೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರನ್ನ ಒಂದು ಘಟಕವನ್ನಾಗಿಯೂ, ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ ಘಟಕಗಳ ಒಳಗೆ ಓಡಾಡುವವರಿಗೆ ಪಾಸ್ನ ಅಗತ್ಯವಿರಲ್ಲ.
4. ನಾಳೆಯಿಂದ ಖಾಸಗಿ ಬಸ್ಗಳು ಇಡೀ ರಾಜ್ಯದಲ್ಲಿ ಓಡಾಡಬಹುದು. ಆದರೆ ಶೇಕಡಾ 30ರಷ್ಟು ಪ್ರಯಾಣಿಕರಷ್ಟೇ ಓಡಾಡಲು ಅವಕಾಶ ಕೊಟ್ಟಿರುವ ಕಾರಣ ನಷ್ಟದ ಕಾರಣ ಕೊಟ್ಟು ನಾಳೆಯಿಂದ ಖಾಸಗಿಯವರು ಬಸ್ ಓಡಿಸುವುದು ಅನುಮಾನ.
5. ಬಸ್ಗಳಲ್ಲಿ ಓಡಾಟದ ವೇಳೆ ಎರಡು ಸೀಟಿನ ಸೀಟಲ್ಲಿ ಒಂದರಲ್ಲೂ, ಮೂರು ಸೀಟಿರುವ ಸೀಟಿನಲ್ಲಿ ಇಬ್ಬರಿಗಷ್ಟೇ ಕೂರಲು ಅವಕಾಶವಿದೆ. ಬಸ್ಗಳಲ್ಲಿ ನಿಂತುಕೊಂಡು ಪ್ರಯಾಣ ಮಾಡುವಂತಿಲ್ಲ.
6. ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಗುಜರಾತ್ನಿಂದ ಮೇ 31ರವರೆಗೆ ಕರ್ನಾಟಕ್ಕೆ ಯಾರೂ ಕೂಡಾ ಬರುವಂತಿಲ್ಲ. ಕರ್ನಾಟಕಕ್ಕೆ ಬರುವುದಕ್ಕೆ ಈ ನಾಲ್ಕು ರಾಜ್ಯದಲ್ಲಿರುವವರಿಗೆ ಅಂತರ್ರಾಜ್ಯ ಪಾಸ್ ನೀಡಲ್ಲ
7. ರಾಜ್ಯದಲ್ಲಿ ಉಪ ನಗರ ರೈಲುಗಳ ಓಡಾಟ ಆರಂಭವಾಗಲಿದೆ.
8. ಆಟೋ, ಕ್ಯಾಬ್, ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆಟೋದಲ್ಲಿ ಡ್ರೈವರ್ ಮತ್ತು ಇಬ್ಬರು ಪ್ರಯಾಣಿಕ, ಕಾರಲ್ಲಿ ಡ್ರೈವರ್ ಮತ್ತು ಇಬ್ಬರು ಪ್ರಯಾಣಿಕರು ಓಡಾಡಬಹುದು. ಓಲಾ, ಊಬರ್, ಬೌನ್ಸ್ಗೆ ಅನುಮತಿ ನೀಡಲಾಗಿದೆ.
9. ಇಡೀ ರಾಜ್ಯಾದ್ಯಂತ ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್ ತೆರೆಯಬಹುದು. ಉಡುಪಿಯಲ್ಲಿ ಮೊದಲೇ ಬುಕ್ ಮಾಡಿ ಟೋಕನ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
10. ಬೀದಿಬದಿ ಕ್ಯಾಂಟೀನ್ಗಳು, ಚಾಟ್ಸ್, ಪಾನಿಪುರಿ ಅಂಗಡಿ ಒಳಗೊಂಡು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಎಲ್ಲರಿಗೂ ಅನುಮತಿ ನೀಡಲಾಗಿದೆ (ಬೀದಿಬದಿ ಬಟ್ಟೆ ವ್ಯಾಪಾರಿಗಳು, ಚಪ್ಪಲಿ, ಬ್ಯಾಗ್, ಹಣ್ಣು, ತರಕಾರಿ, ಫ್ಯಾನ್ಸಿ ಇತ್ಯಾದಿ)
11. ಇಡೀ ರಾಜ್ಯದಲ್ಲಿ ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಬಹುದು. (ಕಾರ್, ಬೈಕ್ ಶೋರೂಂ, ಗ್ಯಾರೇಜ್, ಮೊಬೈಲ್ ಶಾಪ್, ಮಾಂಸದಂಗಡಿ, ದಿನಸಿ, ಬೇಕರಿ, ಐಸ್ಕ್ರೀಂ ಪಾರ್ಲರ್, ಚಿನ್ನದಂಗಡಿ, ಹಾರ್ಡ್ವೇರ್, ಪೇಂಟ್, ಸಿಮೆಂಟ್, ವುಡನ್, ಎಲೆಕ್ಟ್ರಾನಿಕ್-ಎಲೆಕ್ಟ್ರಿಕಲ್ ಶಾಪ್ಸ್, ಸ್ಯಾನಿಟರಿ ಅಂಗಡಿಗಳು, ಬುಕ್ ಸ್ಟೋರ್, ಇಸ್ತ್ರಿ, ಬಟ್ಟೆ ಅಂಗಡಿ, ಡ್ರೈವಾಶ್, ಟೈಲರ್ ಶಾಪ್, ಪಾನ್, ಗುಟ್ಕಾ ಇತ್ಯಾದಿ ಎಲ್ಲ ಸ್ವರೂಪದ ಅಂಗಡಿಗಳನ್ನು ತೆರೆಯಬಹುದು.)
12. ರಾಜ್ಯದಲ್ಲಿ ಪಾರ್ಕ್ಗಳನ್ನು ನಾಳೆಯಿಂದ ತೆರೆಯಲಾಗುತ್ತದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ, ಸಂಜೆ 5 ರಿಂದ ಸಂಜೆ 7 ಗಂಟೆವರೆಗೆ ಪಾರ್ಕ್ ತೆರೆದಿರುತ್ತದೆ.
13. ಹೋಟೆಲ್, ರೆಸ್ಟೋರೆಂಟ್ಗಳನ್ನು ತೆರೆಯಬಹುದು. ಪಾರ್ಸೆಲ್ಗಷ್ಟೇ ಅವಕಾಶ.
14. ಸಂಜೆ 7 ರಿಂದ ಬೆಳಗ್ಗೆ 7 ಗಂಟೆವರೆಗೆ ಓಡಾಟ ಇರಲ್ಲ. ಬಸ್ಗಳು, ಖಾಸಗಿ ವಾಹನಗಳ ಓಡಾಟವೂ ಸಂಜೆ ೭ಕ್ಕೆ ಕೊನೆ ಆಗುತ್ತದೆ.
15. ಪ್ರತಿ ಭಾನುವಾರ ಜನತಾ ಕರ್ಫ್ಯೂ ಮಾದರಿಯಲ್ಲಿ ಇಡೀ ದಿನ ಸಂಪೂರ್ಣ ಲಾಕ್ಡೌನ್ ಇರುತ್ತದೆ. ಭಾನುವಾರ ಎಲ್ಲವೂ ಬಂದ್. ದಿನಸಿ, ಮಾಂಸದಂಗಡಿ, ಮದ್ಯ ಮಾರಾಟಕ್ಕೂ ಅವಕಾಶವಿಲ್ಲ. ಹಾಲು, ಮೆಡಿಕಲ್, ಆಸ್ಪತ್ರೆ ಓಪನ್ ಆಗಿರುತ್ತದೆ.
16. ಮಾಲ್, ಥಿಯೇಟರ್, ಜಿಮ್, ಸ್ವಿಮ್ಮಿಂಗ್ಪೂಲ್, ಫಿಟ್ನೆಸ್ ಸೆಂಟರ್ ಮೇ ೩೧ರವರೆಗೂ ಬಂದ್ ಆಗಿರುತ್ತವೆ.
17. ನಮ್ಮ ಮೆಟ್ರೋ ರೈಲು ಸಂಚಾರವಿರಲ್ಲ.
18. ಮದುವೆ ಸಮಾರಂಭಗಳಿಗೆ ೫೦ಕ್ಕಿಂತ ಹೆಚ್ಚು ಜನ ಸೇರಬಾರದು ಎಂಬ ನಿರ್ಬಂಧ ಮುಂದುವರಿಯಲಿದೆ.
19. ಅಂತ್ಯಸಂಸ್ಕಾರದಲ್ಲಿ ೨೦ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ.
20. ಮದ್ಯ ಮಾರಾಟಕ್ಕೆ ಈಗಾಗಲೇ ಅನುಮತಿ ನೀಡಲಾಗಿದ್ದು, ಅದು ಮುಂದುವರಿಯಲಿದೆ (ಭಾನುವಾರದ ಕಂಪ್ಲೀಟ್ ಲಾಕ್ಡೌನ್ ಬಿಟ್ಟು)
21. ಎಲ್ಲಾ ರೀತಿಯ ಕೈಗಾರಿಕೆಗಳು, ಐಟಿ ಬಿಟಿ ಕಂಪನಿಗಳು, ಸರ್ಕಾರಿ, ಖಾಸಗಿ ಕಚೇರಿಗಳು, ಕಂಪನಿಗಳು, ಎಲ್ಲಾ ರೀತಿಯ ಉತ್ಪಾದಕ ಘಟಕಗಳು, ಗಾರ್ಮೆಂಟ್ಸ್ ಸೇರಿದಂತೆ ಎಲ್ಲಾ ರೀತಿಯ ಫ್ಯಾಕ್ಟರಿಗಳನ್ನು ಇಡೀ ರಾಜ್ಯಾದ್ಯಂತ ತೆರೆಯಬಹುದಾಗಿದೆ.
22. ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್ ಬಂದ್ ಮುಂದುವರಿಕೆ.
23. ದೇವಸ್ಥಾನ, ಮಸೀದಿ, ಚರ್ಚ್ಗಳನ್ನು ತೆರೆಯುವಂತಿಲ್ಲ.
24. ಕಟ್ಟಡ, ರಸ್ತೆ, ನೀರಾವರಿ ಕಾಮಗಾರಿ, ನರೇಗಾ ಕಾಮಗಾರಿಗೆ ನೀಡಲಾಗಿರುವ ಅನುಮತಿ ಮುಂದುವರಿಯಲಿದೆ.
25. ಕಂಟೈನ್ಮೆಂಟ್ಝೋನ್ಗಳಲ್ಲಿ ಲಾಕ್ಡೌನ್ ಉಲ್ಲಂಘಿಸಿ ಓಡಾಡಿದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ.
26. ಬಸ್ ಡಿಪೋ, ರೈಲ್ವೆ ಸ್ಟೇಷನ್, ಸರ್ಕಾರಿ, ಅಗತ್ಯ ಸೇವೆಗಳನ್ನು ಕಲ್ಪಿಸುವ ಸ್ಥಳಗಳಲ್ಲಿರುವ ಟೀ, ಹೋಟೆಲ್ಗಳನ್ನು ತೆರೆಯಬಹುದು.
27. ಬ್ಯಾಂಕ್, ಪೋಸ್ಟಲ್, ವಿಮೆ, ವಿದ್ಯುತ್, ಜಲಮಂಡಳಿಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು ತೆರೆದಿರುತ್ತವೆ.