ಫೋಟೋ ಕೃಪೆ: daijiworld.com

– ಉಮಾಶಂಕರ್ ಪೆರಿಯೋಡಿ (ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ ಕರ್ನಾಟಕದ ಮುಖ್ಯಸ್ಥರು)

ದೊಡ್ಡ ಗೇಟು. ವಿಶಾಲವಾದ ಅಂಗಳ. ಭವ್ಯವಾದ ಕಟ್ಟಡ. ಇದರೊಳಗೆ ನನಗೆ ಹೋಗಲು ಸ್ವಲ್ಪ ಹೆದರಿಕೆಯೇ ಆಯಿತು. ಆದರೂ ಮುಜುಗರ ಪಡುತ್ತಾ ಒಳಗೆ ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟೆ. ಅಲ್ಲಿ ಜನರು ಗುಂಪುಗುಂಪಾಗಿ ಕೇಕೆ ಹಾಕುತ್ತಾ ನಗುತ್ತಾ ತುಂಬಾ ಸಲುಗೆಯಿಂದ ಇದ್ದರು.

ಇದು ನನ್ನನ್ನು ಇನ್ನೂ ಹೆಚ್ಚು ಹೆದರಿಸಿತು. ಆಚೆ-ಈಚೆ ನೋಡಲುತೊಡಗಿದೆ. ಯಾರು ಯಾರನ್ನೂ ನೋಡುತ್ತಿರಲಿಲ್ಲ. ಏನು ಮಾಡುವುದು ಎಂದು ತೋಚದೆ ಅಲ್ಲೇ ಸುಮ್ಮನೆ ನಿಂತೆ. ಸ್ವಲ್ಪ ಹೊತ್ತು ಹಾಗೇ ನಿಂತು ಸುತ್ತಮುತ್ತ ನೋಡಲು ಪ್ರಾರಂಭಿಸಿದೆ. ಆಗ ಸ್ವಲ್ಪ ದೂರದಲ್ಲಿ ಮೆಟ್ಟಿಲ ಮೇಲೆ ಒಂದು ಮುಖ ನನ್ನನ್ನೇ ನೋಡುತ್ತಿದ್ದ ಭಾಸವಾಯಿತು. ಆ ಮುಖದ ಕಡೆಗೆ ನೋಡಿದೆ, ದೊಡ್ಡದೊಂದು ನಗು. ಹಾಗೇನೆ ಹತ್ತಿರ ಬರಲು ಒಂದು ಸನ್ನೆ..! ಮುಳುಗುವವನಿಗೆ ಕಡ್ಡಿ ಸಿಕ್ಕಿದ ಹಾಗಿತ್ತು ನನ್ನ ಸ್ಥಿತಿ. ಆ ಮುಖದ ಹತ್ತಿರ ಓಡಿಹೋದೆ.

ತುಂಬಾ ಆತ್ಮೀಯತೆಯಿಂದ ಬರಮಾಡಿಕೊಂಡು ಮಾತನಾಡಿಸಿತು ಆ ಮುಖ. ಎಲ್ಲಿಂದ ಬಂದದ್ದು..? ಏನು ವಿಷಯ..? ಹೀಗೆ ನನ್ನ ವಿಚಾರಿಸಿ ತುಂಬಾ ಧೈರ್ಯ ಕೊಟ್ಟ ಆ ಮುಖ ನನ್ನ ಹೆದರಿಕೆಯನ್ನು ಓಡಿಸಿ ನನ್ನನ್ನು ನಿರಾಳ ಮಾಡಿತು. ಆ ಮುಖ ನಾನು ಮರೆಯಲು ಸಾಧ್ಯವೇ..?

ಇದು ೧೯೭೯ರಲ್ಲಿ ನಾನು ರೋಶನಿ ನಿಲಯ ಸೇರಿದ ದಿವಸ. ಮೊಟ್ಟ ಮೊದಲು ಒಲಿಂಡಾ ಪಿರೇರಾ ಅವರನ್ನು ಭೇಟಿಯಾದ ರೀತಿ. ನಾನು ಬೇರೆಯವರ ಎಷ್ಟು ಧೈರ್ಯವಾಗಿ ಹೋಗಲಾಗಲಿಲ್ಲ. ಯಾಕೆಂದರೆ ಕಾಲೇಜು ಬಿಟ್ಟು ಕೆಲಸ ಮಾಡಿ ಆಮೇಲೆ ಪುನರಪಿ ಕಾಲೇಜು ಸೇರಿದವನು ನಾನು.

ನನ್ನಲ್ಲಿ ಬೇರೆಯವರು ಹೇಗೆ ನೋಡುತ್ತಾರೆ ಎಂಬ ಆತಂಕ, ಭಯ ವಿಫುಲವಾಗಿತ್ತು. ನನ್ನ ಪರಿಸ್ಥಿತಿಯನ್ನು ದೂರದಿಂದಲೇ ಅರ್ಥಮಾಡಿಕೊಂಡು ನನ್ನನ್ನು ಹತ್ತಿರ ಕರೆದು ಆತಂಕ, ಭಯವನ್ನು ನಿವಾರಿಸಿ ನನ್ನನ್ನು ಕಂಫರ್ಟೆಬಲ್ ಮಾಡಿದ ಆ ಮಹಾತಾಯಿ ಡಾ. ಪಿರೇರಾ!

ನಾನು ಪ್ರೀತಿಯಿಂದ ಆಹ್ವಾನಿಸುವ ಆ ನಗುವನ್ನು ಹೇಗೆ ಮರೆಯಲು ಸಾಧ್ಯ..? ನನ್ನ ಹಾಗೆ ಈ ಅರವತ್ತು ವರ್ಷದಲ್ಲಿ ದೊಡ್ಡಮ್ಮ ಎಷ್ಟು ಜನರಿಗೆ ಒಂದು ಧೈರ್ಯದ, ವಿಶ್ವಾಸದ ಸಂಕೇತವಾಗಿರಲಿಕ್ಕಿಲ್ಲ! ನಾವು ಹೇಳುತ್ತೆವಲ್ಲ, ಅನೇಕ ಜನಾಂಗಗಳಿಗೆ ಸ್ಪೂರ್ತಿಯಾದ ಮಹಾತಾಯಿ ಆಕೆ.!

ರೋಶನಿ ನಿಲಯದಲ್ಲಿ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಅನೇಕ ಸವಲತ್ತು ಇತ್ತು. ಊಟ-ವಸತಿ ಹಾಗೆನೇ ಸ್ಕಾಲರ್‌ಶಿಪ್‌. ಪಿರೇರಾ ಅವರು ಇಂತಹ ವ್ಯಕ್ತಿತ್ವ ಎಂದರೆ ಊಟದ ವ್ಯವಸ್ಥೆ ರೋಶನಿ ನಿಲಯದಲ್ಲಿ ಅವರು ಹೇಗೆ ಮಾಡಿದ್ದಾರೆಂದರೆ ನಮಗೂ, ಹಣಕೊಟ್ಟು ಊಟ ಮಾಡುವವರಿಗೂ ವ್ಯತ್ಯಾಸವೇ ಇಲ್ಲದಂತೆ ವ್ಯವಸ್ಥೆ ಮಾಡಿದ್ದರು. ಬೇರೆಯವರ ಹಾಗೆ ನಾವು ಕೂಡ ಕೂಪನ್ ಕೊಟ್ಟು ಅವರಿಗೆ ಸರಿಸಮಾನವಾಗಿ ಊಟ ಮಾಡುತ್ತಿದ್ದೆವು.

ಇನ್ನೊಂದು ದೊಡ್ಡ ವಿಷಯ ಅವರು ಅಲ್ಲಿಯ ಸಂಶೋಧನಾ ಘಟಕದಲ್ಲಿ, ಗ್ರಂಥಾಲಯದಲ್ಲಿ ಬಡ ವಿದ್ಯಾರ್ಥಿಗಳಿಗೆ ಕೆಲಸದ ವ್ಯವಸ್ಥೆ ಮಾಡುತ್ತಿದ್ದರು. ಈ ಕೆಲಸ ಕಾಲೇಜು ಮುಗಿದ ಮೇಲೆ ರಜೆಯಲ್ಲಿ ನಮಗೆ ಸಿಗುತ್ತಿತ್ತು. ಇದನ್ನು ತುಂಬಾ ಗೌರವದಿಂದ ನಮಗೆ ಮಾಡಲಾಗುತ್ತಿತ್ತು. ಜನರ ಆತ್ಮಗೌರವಕ್ಕೆ ಧಕ್ಕೆ ಬರದ ಹಾಗೆ ಅವರೆಲ್ಲಾ ಕೆಲಸ ಮಾಡುತ್ತಿದ್ದರು.

ಹಾಗೆ ನೋಡಿದರೆ ನಮ್ಮ ಬ್ಯಾಚ್ ಸ್ವಲ್ಪ ರೌಡಿ ಬ್ಯಾಚ್! ನಾವು ಫೈನಲ್ ಇಯರ್‌ನಲ್ಲಿ ಇರುವಾಗ ಅವರ ವಿರುದ್ಧವೇ ದೊಡ್ಡದೊಂದು ಸ್ಟ್ರೈಕ್ ಮಾಡಿದ್ದೆವು. ಎರಡು ವಾರ ಕಾಲೇಜು ಮುಚ್ಚಿ ಸ್ತಬ್ಧವಾಗಿತ್ತು. ಪಾಠ ಇಲ್ಲ, ಆಟ ಇಲ್ಲ, ಏನೂ ಇಲ್ಲ. ಅಲ್ಲಿಯ ತನಕ ಹೂವಿನ ಹಾಗೆ ಬೆಳೆಸಿದ ಆ ಸಂಸ್ಥೆಗೆ ದೊಡ್ಡ ಕಪ್ಪುಚುಕ್ಕೆ ಇಟ್ಟವರು ನಾವು. ಸ್ಟ್ರೈಕ್ ಎಲ್ಲಾ ಮುಗಿದು ಪುನಃ ಕಾಲೇಜು ಶುರುವಾದ ಮೇಲೂ ನಮ್ಮ ಕೆಲವು ಲೆಕ್ಚಚರ್ಸ್ ನಮ್ಮನ್ನು ಅಪರಾಧಿ ದೃಷ್ಟಿಯಿಂದ ನೋಡುತ್ತಿದ್ದರು.  ಆದರೆ ನಮ್ಮ ಮಿಸ್ ರೀಟಾ (ಒಲಿಂಡಾ ಪಿರೇರಾ) ಮಾತ್ರ ನೋಡುವ ದೃಷ್ಟಿಯಲ್ಲಿ ಒಂದು ಚೂರು ವ್ಯತ್ಯಾಸ ಇರಲಿಲ್ಲ. ನೀವು ತಪ್ಪು ಮಾಡಿದ್ದೀರಿ, ನೀವು ಕೆಟ್ಟವರು ಅಪರಾಧಿಯೆಂದು ಅವರ ನೋಟದಲ್ಲಿ, ವರ್ತನೆಯಲ್ಲಿ ಒಂದು ಚೂರು ಕಂಡುಬಂದಿಲ್ಲ. ಆದುದರಿಂದಲೇ ನಮ್ಮಂಥವರಿಗೆ ಒಲಿಂಡಾ ಅಂದರೆ ಅಷ್ಟು ಪ್ರೀತಿ, ಅಷ್ಟು ಗೌರವ.

ವಿದ್ಯಾರ್ಥಿಯಾಗಿದ್ದಾಗ ಇದ್ದ ಗೌರವಕ್ಕಿಂತ ಇವತ್ತು ನೂರು ಪಟ್ಟು ಹೆಚ್ಚಾಗಿದೆ. ಯಾಕೆಂದರೆ ನುಡಿ ಮತ್ತು ನಡೆಯಲ್ಲಿ ವ್ಯತ್ಯಾಸ ಇಲ್ಲದ ನಿಷ್ಕಳಂಕ ವ್ಯಕ್ತಿತ್ವ ಇವತ್ತು ನಮಗೆ ಸಿಗುವುದು ತುಂಬಾ ವಿರಳ! ಬೆರಳೆಣಿಕೆಯಷ್ಟು!

೧೯೨೫ರಲ್ಲಿ ಮಂಗಳೂರಿನಲ್ಲಿ ಹುಟ್ಟಿದ ಈ ತಾಯಿ ಮಾಡಿದ ಕೆಲಸ ಒಂದಾ ಎರಡಾ? ಶಿಕ್ಷಕ ತರಬೇತಿ ಪಡೆದು ಪಿಎಚ್‌ಡಿ ಮಾಡಿ ಸಮಾಜಸೇವೆಯ ಸ್ನಾತಕೋತ್ತರ ಘಟಕ ಪ್ರಾರಂಭಿಸಿ ಅದರಲ್ಲಿ ‘Character Buildship’ ‘Life Changing’ ಶಿಕ್ಷಣ ನೀಡಿ ಸಮಾಜಮುಖಿ ಜನಾಂಗಗಳನ್ನು ಹುಟ್ಟು ಹಾಕಿದವರು. ವಿಶೇಷ ಏನೆಂದರೆ ಬೇರೆಯವರ ಹಾಗೆ ಸಮಾಜಸೇವೆಯ ಒಂದು ಕಟ್ಟಡ ಮಾತ್ರ ಅಲ್ಲ, ಈ ವಿಶ್ವವಿದ್ಯಾನಿಲಯದ ಸುತ್ತ ಐವತ್ತಕ್ಕೂ ಹೆಚ್ಚು ಸಣ್ಣ ಸಣ್ಣ ಸಮಾಜಸೇವೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು.

ರೋಶನಿಯ ಒಳ್ಳೆಯ ಗುಣಮಟ್ಟದ ಶಿಕ್ಷಣಕ್ಕೆ ಥಿಯರಿ ಮತ್ತು ಪ್ರ್ಯಾಕ್ಟೀಸ್‌ನ ಒಂದು ಹದವಾದ ಬಂಧವೇ ಕಾರಣ. ಅವರು ನಿವೃತ್ತರಾದ ಮೇಲೆ ಕೂಡ ಸುಮ್ಮನೆ ಕೂರದೆ ಆಗಿನ ಮಂಗಳೂರಿನ ಪರಿಸ್ಥಿತಿಯಲ್ಲಿ ಅತ್ಯಂತ ಅಗತ್ಯವಾದ ಹಿರಿಯರ ಸೇವೆಗೆ ವಿಶ್ವಾಸ್ ಟ್ರಸ್ಟ್‌ ಪ್ರಾರಂಭಿಸಿ ಅದ್ಭುತವಾದ ಕೆಲಸ ನಿನ್ನೆ ತನಕವೂ ಮಾಡಿದರು. ರೋಶನಿ ನಿಲಯ ಹಾಗೂ ವಿಶ್ವಾಸ್‌ ವಿಶ್ವ ಇಡೀ ಭಾರತಕ್ಕೆ ಒಂದು ದಾರಿದೀಪವಾಗಿದೆ.

ಅವರಿಗೆ ಅನೇಕ ಗೌರವಗಳು ಬಂದಿವೆ. ನನಗೆ ಅದರಲ್ಲಿ ತುಂಬಾ ಇಷ್ಟ ಆದದ್ದು ಮಹಾತ್ಮಗಾಂಧಿ ಶಾಂತಿ ಪ್ರಶಸ್ತಿ ಮತ್ತು ವೀರ ರಾಣಿ ಅಬ್ಬಕ್ಕ ಪ್ರಶಸ್ತಿ. ಎರಡೂ ಅವರ ವ್ಯಕ್ತಿತ್ವವನ್ನು ಸಾರುವ ಪ್ರಶಸ್ತಿಗಳು. ಒಂದು ಸತ್ಯ ಅಹಿಂಸೆ ಹಾಗೂ ಧೈರ್ಯದ ಸಂಕೇತವಾದರೆ ಇನ್ನೊಂದು ಶೌರ್ಯ ಹಾಗೂ ಸ್ವತಂತ್ರದ ಪರಿಕಲ್ಪನೆ.

ಒಲಿಂಡಾ ಅಂದರೆ ಎರಡು ಅರ್ಥ ಇದೆ. ಒಂದು ಭೂಮಿಯ ರಕ್ಷಕರು ಎಂದು, ಇನ್ನೊಂದು ಸುವಾಸನೆಯ ಘಮಲು. ನಮ್ಮ ಪ್ರೀತಿಯ ಮಿಸ್‌ ಒಲಿಂಡಾ ಪಿರೇರಾ ಎರಡೂ ಹೌದು. ಅವರು ಇದ್ದಷ್ಟು ಸಮಯ ಬಡವರ, ದೀನದಲಿತರ, ನಿರ್ಗತಿಕರ, ನಿಸ್ಸಹಾಯಕರ ರಕ್ಷಕರಾಗಿ ನಿಂತವರು. ಅವರಿಗಾಗಿ ಕೊನೆಯ ಉಸಿರಿನ ತನಕ ಕಾದಾಡಿದವರು. ಅವರು ಅಗಲಿದಾಗಲೂ ಅವರ ಸೇವೆಯ ಜೀವನದ ಘಮಲು ಸದಾ ನಮ್ಮಲ್ಲಿರುತ್ತದೆ. ಮೆಲ್ಲಮೆಲ್ಲನೆ ಈ ಸಂದರ್ಭದಲ್ಲಿ ಆ ಮಹಾತಾಯಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡುವ ಉಮಾಶಂಕರ್ ಪೆರಿಯೋಡಿ.

 

– ಉಮಾಶಂಕರ್ ಪೆರಿಯೋಡಿ (ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ ಕರ್ನಾಟಕದ ಮುಖ್ಯಸ್ಥರು)

LEAVE A REPLY

Please enter your comment!
Please enter your name here