ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೆ ತಮ್ಮ ಬೇಗುದಿ ಹೊರಹಾಕಿದ್ದಾರೆ. ೨೦೦೮ರಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣವಾದ ಆಪರೇಷನ್ ಕಮಲದ ಹಳ್ಳಕ್ಕೆ ಬಿದ್ದ ಮೊದಲ ಕುರಿ ಮತ್ತು ಮೊದಲ ವಿಕೆಟ್ ನಾನು ಅಂತ ತಮ್ಮನ್ನು ತಾವು ನಿಂದಿಸಿಕೊಂಡಿದ್ದಾರೆ.
೨೦೦೮ರಲ್ಲಿ ಯಡಿಯೂರಪ್ಪ ಸರ್ಕಾರದ ಬಹುಮತಕ್ಕೆ ಬೇಕಿದ್ದ ಮೂವರು ಶಾಸಕರಲ್ಲಿ ಹಳ್ಳಕ್ಕೆ ಬಿದ್ದ ಮೊದಲ ಕುರಿ ನಾನು. ಈಗ ಯಡಿಯೂರಪ್ಪ ಜೊತೆಗೆ ಲೆಫ್ಟ್ ರೈಟ್ ಇರುವ ಯಾರೂ ರಾಜೀನಾಮೆ ಕೊಟ್ಟು ಬಂದಿರಲಿಲ್ಲ. ಆದರೂ ಆ ವೇಳೆ ನನಗೆ ಪ್ರಬಲ ಖಾತೆ, ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಕಾಲೇಜು ಮತ್ತು ಸಾವಿರಾರು ಕೋಟಿ ಅನುದಾನ ಏನೂ ಕೊಡಲಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಸರ್ಕಾರ ಬರಲು ೧೭ ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದು ಕಾರಣ ಎಂದು ಹೇಳಲಾಗುತ್ತಿದೆ. ಆ ೧೭ ಮಂದಿಯ ಪಟ್ಟಿಗೆ ನನ್ನನ್ನು ೧೮ನೇಯವನಾಗಿ ಸೇರಿಸಿ ಸಚಿವ ಸ್ಥಾನಕೊಟ್ಟು ೨೦೦೮ರಲ್ಲಿ ನನಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿ ಎಂದು ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.